ಸಿಕಂದರ್ ಸೋಲು ; ಸಲ್ಮಾನ್ ಖಾನ್‌ಗೆ ಎಚ್ಚರ ಆಗ್ತಿದ್ದೆ ರಾತ್ರಿ, ಸಿನಿಮಾ ಹೇಗೆ ಮಾಡಲಿ ? ಎ.ಆರ್ ಮುರುಗದಾಸ್..!
ಚಿತ್ರವೊಂದು ಗೆದ್ದಾಗ ಆ ಚಿತ್ರ ಗೆದ್ದಿದ್ದೇ ನನ್ನಿಂದ ಎಂದು ಹಲವರು ಕ್ರೆಡಿಟ್ ತೆಗೆದುಕೊಳ್ಳಲು ಮುಂದೆ ಬರುತ್ತಾರೆ. ಆದರೆ.. ಅದೇ ಚಿತ್ರ ಸೋತರೆ..? ಆ ಚಿತ್ರದ ಸುತ್ತ ಹಲವು ಪ್ರಶ್ನೆಗಳು ಎದ್ದೇಳುತ್ತಾವೆ. ತಂಡದಲ್ಲಿಯೇ ಬಿರುಕು ಮೂಡುತ್ತೆ. ಹೀಗಾಗಿಯೇ ಗೆಲುವಿಗೆ ಹಲವಾರು ಜನ ಅಪ್ಪ-ಅಮ್ಮ ಆದರೆ ಸೋಲು ಅನಾಥ ಎಂದು ಹಿಂದೊಮ್ಮೆ ಅಮಿತಾಬ್ ಬಚ್ಚನ್ ಹೇಳಿದ್ದರು. ಸದ್ಯ ಈ ಮಾತುಗಳನ್ನು ''ಸಿಕಂದರ್'' ನೆನಪಿಸುತ್ತಿದೆ.
ಹೌದು. ''ಸಿಕಂದರ್''.. ಸಲ್ಮಾನ್ ಖಾನ್ ಅಭಿನಯದ ಚಿತ್ರ. ಬಿಡುಗಡೆಗೆ ಮುನ್ನ ಈ ಚಿತ್ರ ಮೂಡಿಸಿದ ನಿರೀಕ್ಷೆ ಕಡಿಮೆ ಇರಲಿಲ್ಲ. ಅದಕ್ಕೆ ಹಲವಾರು ಕಾರಣಗಳಿದ್ದವು. ಆ ಪೈಕಿ ''ಸಿಕಂದರ್'' ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಚಿತ್ರ ಎನ್ನುವುದು ಒಂದು ಕಾರಣವಾದರೆ, ''ಸಿಕಂದರ್'' ಎ.ಆರ್,ಮುರಗದಾಸ್ ನಿರ್ದೇಶನದ ಚಿತ್ರ ಎನ್ನುವುದು ಮತ್ತೊಂದು ಕಾರಣವಾಗಿತ್ತು.

ಬಾಲಿವುಡ್‌ನಲ್ಲಿ ಹಿಂದೆ ಆಮೀರ್ ಖಾನ್‌ಗೆ ''ಗಜನಿ'' ಚಿತ್ರವನ್ನು ಮುರಗದಾಸ್ ಮಾಡಿದ್ದ ಹಿನ್ನೆಲೆ ''ಗಜನಿ''ಯನ್ನು ಕೂಡ ಮೀರಿಸುವಂತಹ ಚಿತ್ರ ''ಸಿಕಂದರ್'' ಆಗಲಿದೆ ಎಂದು ಅನೇಕರು ಅಂದುಕೊಂಡಿದ್ದರು. ಆದರೆ.. ಅಂದುಕೊಂಡಿದ್ದು ಒಂದು ಆಗಿದ್ದು ಮತ್ತೊಂದು. ನಿರೀಕ್ಷೆಗಳನ್ನೆಲ್ಲಾ ''ಸಿಕಂದರ್'' ಮಣ್ಣು ಪಾಲು ಮಾಡಿತು. ಚಿತ್ರವನ್ನು ಮೊದಲ ದಿನ ಕಣ್ತುಂಬಿಕೊಂಡ ಸಲ್ಮಾನ್ ಖಾನ್ ಅಭಿಮಾನಿಗಳೇ ಈ ಚಿತ್ರದ ವಿರುದ್ಧ ಕೆಂಡ ಕಾರಿದರು. ಬಾಕ್ಸಾಫೀಸ್‌ನಲ್ಲಿ 150 ಕೋಟಿಯನ್ನು ಕೂಡ ಈ ಚಿತ್ರ ಗಳಿಸಲಿಲ್ಲ.
ಈಗ ಈ ಸೋಲಿನ ಬಗ್ಗೆ ನಿರ್ದೇಶಕ ಎ.ಆರ್.ಮುರಗದಾಸ್ ಮಾತನಾಡಿದ್ದಾರೆ. ಸೋಲಿಗೆ ಸಲ್ಮಾನ್ ಖಾನ್ ಅವರೇ ನೇರಹೊಣೆ ಎಂದು ಹೇಳಿದ್ದಾರೆ. ಈ ಕುರಿತು ''ವಲೈಪೇಚು ವಾಯ್ಸ್''ನ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಎ.ಆರ್.ಮುರಗದಾಸ್ ಚಿತ್ರದ ಕಥೆಯಲ್ಲಿ ಯಾವುದೇ ಲೋಪ ಇರಲಿಲ್ಲ ಬದಲಿಗೆ ತುಂಬಾ ಭಾವನಾತ್ಮಕವಾದ ಕಥೆ ಅದು ಆದರೆ ಸಲ್ಮಾನ್ ಖಾನ್ ಅವರ ಸಹಕಾರ ನನಗೆ ಸಿಗಲಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಎ.ಆರ್.ಮುರಗದಾಸ್ ''ಸಿಕಂದರ್'' ಚಿತ್ರದ ಚಿತ್ರೀಕರಣಕ್ಕೆ ಸಲ್ಮಾನ್ ಖಾನ್ ಬರುತ್ತಿದ್ದಿದ್ದೇ ರಾತ್ರಿ 8ಕ್ಕೆ ಅವರ ಈ ಧೋರಣೆಯಿಂದ ಬೆಳಗ್ಗೆ ಸೆರೆ ಹಿಡಿಯಬೇಕಾದ ದೃಶ್ಯಗಳನ್ನೆಲ್ಲಾ ನಾವು ಅನಿವಾರ್ಯವಾಗಿ ರಾತ್ರಿ ಹೊತ್ತಿನಲ್ಲಿ ಗ್ರೀನ್ ಮ್ಯಾಟ್‌ನಲ್ಲಿ ಸೆರೆ ಹಿಡಿಯಬೇಕಾಯ್ತು ಇದು ಚಿತ್ರದ ಮೇಲೆ ಮತ್ತು ತಂಡದ ಮೇಲೆ ಪರಿಣಾಮ ಬೀರಿತು ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ತಡವಾಗಿ ಬರುತ್ತಿದ್ದ ಹಿನ್ನೆಲೆ ನಮ್ಮ ಚಿತ್ರೀಕರಣದ ಟೈಮ್ ಟೇಬಲ್ ಸಂಪೂರ್ಣ ಬದಲಾಯ್ತು ಎಂದಿರುವ ಎ.ಆರ್.ಮುರಗದಾಸ್ ಹಲವಾರು ದೃಶ್ಯಗಳನ್ನು ಹಗಲು ಹೊತ್ತಿನಲ್ಲಿ ನೈಜ ಸ್ಥಳದಲ್ಲಿ ಚಿತ್ರೀಕರಣ ಮಾಡಬೇಕಿತ್ತು ನಮಗೆ ಅದು ಸಾಧ್ಯವಾಗಲಿಲ್ಲ. ಗ್ರೀನ್ ಮ್ಯಾಟ್‌ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ಆ ನಂತರ ಅದಕ್ಕೆ ಸಿಜಿ ಕೆಲಸ ಮಾಡಿದೆವು, ಆದರೆ ತೆರೆಯ ಮೇಲೆ ಆ ದೃಶ್ಯಗಳು ಪರಿಣಾಮಕಾರಿಯಾಗಿ ಮೂಡಿ ಬರಲಿಲ್ಲ ಎಂದು ಹೇಳಿದ್ಧಾರೆ.

ಇನ್ನೂ ಸಿನಿಮಾದಲ್ಲಿ ಬಾಲ ಕಲಾವಿದರಿದ್ದರು. ಅವರಿಗೆ ತುಂಬಾನೇ ಸಮಸ್ಯೆಯಾಯ್ತು ಎಂದು ಹೇಳಿರುವ ಎ.ಆರ್.ಮುರಗದಾಸ್ ತಡರಾತ್ರಿಯವರೆಗೆ ಚಿತ್ರೀಕರಣ ನಡೆಯುತ್ತಿದ್ದ ಹಿನ್ನೆಲೆ ಮಕ್ಕಳು ದಣಿದು ಬಿಡುತ್ತಿದ್ದರು.ನಿದ್ದೆಗೆ ಜಾರಿ ಬಿಡುತ್ತಿದ್ದರು. ಮಕ್ಕಳಿರುವ ದೃಶ್ಯಗಳನ್ನು ನಾವು ರಾತ್ರಿ 2ರವರೆಗೆ ಚಿತ್ರೀಕರಣ ಮಾಡಿದ್ದೇವೆ ಶಾಲೆಯಿಂದ ಅವರು ಮನೆಗೆ ಮರಳುವ ದೃಶ್ಯಗಳನ್ನು ಚಿತ್ರೀಕರಿಸುವಾಗ ಅವರಿಗೆ ನಿದ್ದೆ ಬಂದಿದ್ದರೂ ಎಚ್ಚರವಾಗಿರುವಂತೆ ಅವರು ಅಭಿನಯಿಸಬೇಕಿತ್ತು ಎಂದು ಹೇಳಿದ್ದಾರೆ.
ಮುಂದುವರೆದು ''ಸಿಕಂದರ್'' ಮಾಡಲು ಅಕ್ಷರಶಃ ನಾನು ಹೆಣಗಾಡಿದೆ ಎಂದು ಹೇಳಿರುವ ಎ.ಆರ್.ಮುರಗದಾಸ್ ಕೊನೆ ಕ್ಷಣದಲ್ಲಿ ಕಥೆಯಲ್ಲಿ ಬದಲಾವಣೆಗಳನ್ನು ಮಾಡಲಾಯ್ತು ಕಥೆಯ ಮೇಲೆ ಸಿನಿಮಾದ ಮೇಲೆ ನನ್ನ ನಿಯಂತ್ರಣ ಕೂಡ ತಪ್ಪಿ ಹೋಯಿತು ಎಂದು ಹೇಳಿದ್ದಾರೆ. ಎ.ಆರ್.ಮುರಗದಾಸ್ ಅವರ ಈ ಮಾತುಗಳಿಗೆ ಸಲ್ಮಾನ್ ಖಾನ್ ಹೇಗೆ ಪ್ರತಿಕ್ರಿಯೆಯನ್ನು ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











