ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ, ಸಿಕಂದರ್ ಸೋತಿಲ್ಲ ಭರ್ಜರಿ ಲಾಭ ಮಾಡುತ್ತಿದ್ದಾನೆ ಎಂದ ನಿರ್ಮಾಪಕ..!
ಛಾವಾ ಹೊರತು ಪಡಿಸಿ 2025ರಲ್ಲಿ ಇಲ್ಲಿಯವರೆಗೆ ಬಂದ ಬಹುತೇಕ ಚಿತ್ರಗಳು ದೊಪ್ಪ ದೊಪ್ಪನೆ ನೆಲಕ್ಕೆ ಅಪ್ಪಳಿಸಿದ್ದರಿಂದ ಬಾಲಿವುಡ್ ಹೆಚ್ಚು ಕಡಿಮೆ ಐಸಿಯೂ ಬೆಡ್ಡಿನಲ್ಲಿ ಮಲಗಿದೆ. ಹೀಗಿರುವಾಗ ಬಂದ ಸಿಕಂದರ್ ಹಿಂದಿ ಚಿತ್ರರಂಗಕ್ಕೆ ಗ್ಲೂಕೋಸ್ ನೀಡುತ್ತೆ ಎಂದು ಅನೇಕರು ಅಂದುಕೊಂಡಿದ್ದರು. ಆದರೆ ಆ ನಿರೀಕ್ಷೆ ಕೂಡ ಹುಸಿಯಾಗಿದೆ.ಬಿಡುಗಡೆಯಾಗಿ ವಾರ ಕಳೆಯುತ್ತಾ ಬಂದರೂ ಬಾಕ್ಸಾಫೀಸ್‌ನಲ್ಲಿ ಸಿಕಂದರ್ ತೆವಳುತ್ತಾ ಸಾಗುತ್ತಿದೆ.
ಸಿಕಂದರ್ ಚಿತ್ರದ ಸದ್ಯದ ಸ್ಪೀಡ್ ನೋಡುತ್ತಿದ್ದರೆ 200 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಭಾರತದಲ್ಲಿ 150 ಕೋಟಿ ಗಳಿಸುವುದು ಕೂಡ ಅನುಮಾನ ಎನ್ನುವ ಮಾತುಗಳನ್ನು ಬಾಲಿವುಡ್ ಪಂಡಿತರು ಹೇಳುತ್ತಿದ್ದಾರೆ. ಸಿಕಂದರ್ ಸಲ್ಮಾನ್ ಖಾನ್ ವೃತ್ತಿ ಬದುಕಿನ ಕಳಪೆ ಚಿತ್ರ ಎನ್ನುತ್ತಿದ್ದಾರೆ. ಸಲ್ಮಾನ್ ಖಾನ್ ಹೀಗಾಗಬಾರದಿತ್ತು ಎಂದು ಮರಗುತ್ತಿದ್ದಾರೆ.

ಆದರೆ, ಚಿತ್ರದ ನಿರ್ಮಾಪಕ ಸಾಜಿದ್ ನಾಡಿಯಾವಾಲ ಮಾತ್ರ ಈ ಮಾತುಗಳನ್ನು ಒಪ್ಪಲು ಸುತಾರಾಂ ತಯಾರಿಲ್ಲ. ಬದಲಿಗೆ ಸಿಕಂದರ್ ಬ್ಲಾಕ್ ಬಸ್ಟರ್ ಚಿತ್ರವಾಗಿ ಹೊರ ಹೊಮ್ಮಿದೆ ಎನ್ನುವ ವಾದವನ್ನೇ ಮಾಡುತ್ತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆಯೇ ಹರಿಯುತ್ತಿದೆ ಎನ್ನುತ್ತಿದ್ದಾರೆ.
ಆ ಪ್ರಕಾರ ನೋಡುವುದಾದರೆ ಸ್ಯಾಕ್ನಿಲ್ಕ್ ವೆಬ್‌ಸೈಟ್ ನಲ್ಲಿ ಉಲ್ಲೇಖವಾದ ಅಂಕಿ ಅಂಶಕ್ಕೂ ಮತ್ತು ನಿರ್ಮಾಣ ಸಂಸ್ಥೆ ಜಾರಿ ಮಾಡಿರುವ ಅಂಕಿ ಅಂಶಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಭಾರತದ ಜೊತೆಯಲ್ಲಿ ಹೊರದೇಶದ ಮಾರುಕಟ್ಟೆಯಲ್ಲಾದ ವ್ಯಾಪಾರವನ್ನು ಕೂಡ ಪರಿಗಣಿಸಿದರೆ ಚಿತ್ರದ ಗಳಿಕೆ ಈಗಾಗಲೇ₹150 ಕೋಟಿಯ ಗಡಿಯನ್ನು ದಾಟಿದೆ. ಇಲ್ಲಿಯವರೆಗೆ ಅಂದರೆ ಕೇವಲ ಐದು ದಿನದಲ್ಲಿ ಚಿತ್ರ ₹169.78 ಕೋಟಿ ಹಣವನ್ನು ಗಳಿಸಿದೆ. ಸ್ಯಾಕ್ನಿಲ್ ವೆಬ್ ಸೈಟ್ ಮತ್ತು ನಿರ್ಮಾಣ ಸಂಸ್ಥೆಯಾದ ನಾಡಿಯಾವಾಲ ಗ್ರ್ಯಾಂಡ್ ಸನ್ ಹಂಚಿಕೊಂಡ ಮೊದಲ 5 ದಿನದ ಗಳಿಕೆಯ ವಿವರ ಈ ಕೆಳಗಿನಂತೆ ಇದೆ.
ಸ್ಯಾಕ್ನಿಲ್ ವೆಬ್ ಸೈಟ್ ಬಾಕ್ಸಾಫೀಸ್ ಲೆಕ್ಕ
ಮೊದಲ ದಿನ ₹26 ಕೋಟಿ
2ನೇ ದಿನ ₹29 ಕೋಟಿ
3ನೇ ದಿನ ₹19.5 ಕೋಟಿ
4ನೇ ದಿನ ₹09.75 ಕೋಟಿ
5ನೇ ದಿನ ₹5.75 ಕೋಟಿ
ಒಟ್ಟು ₹90 ಕೋಟಿ
ನಾಡಿಯಾವಾಲ ನಿರ್ಮಾಣ ಸಂಸ್ಥೆಯ ಬಾಕ್ಸಾಫೀಸ್ ಲೆಕ್ಕ {ಭಾರತ}
ಮೊದಲ ದಿನ ₹35.47 ಕೋಟಿ
2ನೇ ದಿನ ₹39.37 ಕೋಟಿ
3ನೇ ದಿನ ₹27.16 ಕೋಟಿ
4ನೇ ದಿನ ₹13.85 ಕೋಟಿ
5ನೇ ದಿನ ₹08.28 ಕೋಟಿ
ಒಟ್ಟು ₹124.13 ಕೋಟಿ
ನಾಡಿಯಾವಾಲ ನಿರ್ಮಾಣ ಸಂಸ್ಥೆಯ ಬಾಕ್ಸಾಫೀಸ್ ಲೆಕ್ಕ { ವಿದೇಶಿ ಮಾರುಕಟ್ಟೆ }
ಮೊದಲ ದಿನ ₹19.25 ಕೋಟಿ
2ನೇ ದಿನ ₹11.80 ಕೋಟಿ
3ನೇ ದಿನ ₹8.10 ಕೋಟಿ
4ನೇ ದಿನ ₹3.5 ಕೋಟಿ
5ನೇ ದಿನ ₹3 ಕೋಟಿ
ಒಟ್ಟು ₹45.65 ಕೋಟಿ
ನಾಡಿಯಾವಾಲಾ ನಿರ್ಮಾಣ ಸಂಸ್ಥೆಯ ಪ್ರಕಾರ ಸಿಕಂದರ್ ಚಿತ್ರದ 5 ದಿನದ ಒಟ್ಟಾರೆ ಗಳಿಕೆ
ಭಾರತದ ಗಳಿಕೆ - ₹124.13 ಕೋಟಿ
ವಿದೇಶದ ಗಳಿಕೆ - ₹45.65 ಕೋಟಿ
ಒಟ್ಟು - ₹169.78 ಕೋಟಿ
ಸದ್ಯ ಸ್ಯಾಕ್ನಿಲ್ ವೆಬ್ ಸೈಟ್ ಮತ್ತು ನಾಡಿಯಾವಾಲಾ ನಿರ್ಮಾಣ ಸಂಸ್ಥೆ ಒದಗಿಸಿರುವ ಈ ಅಂಕಿ ಅಂಶಗಳ ಕುರಿತು ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಇಬ್ಬರಲ್ಲಿ ಯಾರ ಲೆಕ್ಕ ಸರಿ ಯಾರ ಲೆಕ್ಕ ತಪ್ಪು ಎಂದು ಸಲ್ಮಾನ್ ಖಾನ್ ಅಭಿಮಾನಿ ಬಳಗ ಕೂಡ ತಲೆ ಕೆಡಿಸಿಕೊಂಡಿದೆ.
ಇನ್ನು, ನಾಡಿಯಾವಾಲಾ ಅವರ ಈ ವಾದವನ್ನು ಒಪ್ಪಿಕೊಂಡರು ಕೂಡ ಚಿತ್ರ ಐದು ದಿನದಲ್ಲಿ ₹169.78 ಕೋಟಿ ಗಳಿಸಿದ್ದರು ಕೂಡ ಸಲ್ಮಾನ್ ಖಾನ್ ಸ್ಟಾರ್ ಪವರ್‌ಗೆ ಈ ಸಂಖ್ಯೆ ಕೂಡ ಕಡಿಮೆಯೇ ಎನ್ನುವ ಮಾತು ಕೂಡ ಸದ್ಯ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ಎಷ್ಟೇ ವಾದ ಮಾಡದಿರು ಕೂಡ ಸಿಕಂದರ್ ಸಿನಿಮಾ ಸೋತಿದೆ ಎನ್ನುವುದನ್ನು ಯಾರು ಅಲ್ಲಗೆಳೆಯಲು ಸಾಧ್ಯ ಇಲ್ಲ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಅಂದ್ಹಾಗೇ ಸಿಕಂದರ್ ನಿನ್ನೆ ಬಿಡುಗಡೆಯಾದ ಆರನೇ ದಿನಕ್ಕೆ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ 3.75 ಕೋಟಿಯನ್ನು ಮಾತ್ರ ಗಳಿಸಿದೆ. ಚಿತ್ರದ ಗಳಿಕೆ ಈಗ 94 ಕೋಟಿಯ ಗಡಿಯನ್ನು ತಲುಪಿದೆ. ಇಂದು ಮತ್ತು ನಾಳೆ ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ.
Disclaimer ; ಬಾಕ್ಸ್ ಆಫೀಸ್ ನ ಈ ಅಂಕಿ ಅಂಶಗಳನ್ನು ಸ್ಯಾಕ್ನಿಲ್ಕ್ ವೆಬ್ ಸೈಟ್ ಮತ್ತು ನಾಡಿಯಾವಾಲ ಗ್ರ್ಯಾಂಡ್ ಸನ್ ನಿರ್ಮಾಣ ಸಂಸ್ಥೆಯ ಟ್ವಿಟರ್ ಪೇಜ್ ನಲ್ಲಿ ಉಲ್ಲೇಖವಾದ ಮಾಹಿತಿಗಳಿಂದ ಸಂಗ್ರಹಿಸಲಾಗಿದೆ. ಫಿಲ್ಮಿಬೀಟ್ ಕನ್ನಡ ಈ ಡೇಟಾದ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


Click it and Unblock the Notifications











