ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಬಾಲಿವುಡ್ ಬೆಡಗಿ: ಸಲ್ಮಾನ್ ಸಹಾಯಕ್ಕೆ ಅಂಗಲಾಚುತ್ತಿರುವ ನಟಿ
ಕೆಲ ನಟ-ನಟಿಯರ ಬಾಳು ಯಾಕೆ ಹೀಗೆ ಆಗುತ್ತೋ, ದೇವರೇ ಬಲ್ಲ. ತೆರೆ ಮೇಲೆ ಚೆಂದ ಕಾಣುವ ನಟ-ನಟಿಯರು ನಿಜ ಜೀವನದಲ್ಲಿಯೂ ಹಾಗೇ ಖುಷಿ ಖುಷಿಯಾಗಿ ಇರ್ತಾರೆ ಅಂತ ಜನ ಭಾವಿಸುತ್ತಾರೆ. ಆದ್ರೆ, ಬಣ್ಣದ ಬದುಕಿನ ಹಿಂದಿನ ಕರಾಳ ಮುಖ ಸಾಮಾನ್ಯ ಜನರಿಗೆ ಪರಿಚಯ ಇರಲಿಕ್ಕಿಲ್ಲ.
ದಶಕಗಳ ಹಿಂದೆ ಬಹು ಬೇಡಿಕೆಯ ನಟ-ನಟಿಯರಾಗಿ ಮಿಂಚಿದವರು ಇಂದು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಅಥವಾ ನಿಗೂಢವಾಗಿ ಸಾವನ್ನಪ್ಪಿರುವ ಸುದ್ದಿಗಳನ್ನ ನಾವು ಕೇಳಿರ್ತೀವಿ. ಇವತ್ತು ಅಂಥದ್ದೇ ಒಂದು ಸುದ್ದಿ ಬಾಲಿವುಡ್ ಅಂಗಳದಿಂದ ಬಂದಿದೆ.
ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಖ್ಯಾತ ನಟಿಯೊಬ್ಬರ ಬಳಿ ಸದ್ಯ ಬಿಡಿಗಾಸು ಇಲ್ಲ. ಟೀ ಕುಡಿಯಲೂ ದುಡ್ಡಿಲ್ಲ. ಟಿ.ಬಿ ಕಾಯಿಲೆಯಿಂದ ಬಳಲುತ್ತಿರುವ ಆ ನಟಿ, ಇಂದು ಆಸ್ಪತ್ರೆ ಬಿಲ್ ಕಟ್ಟಲಾಗದೆ ಪರದಾಡುತ್ತಿದ್ದಾರೆ. ಸಲ್ಮಾನ್ ಖಾನ್ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಸಂಪೂರ್ಣ ವರದಿ ಇಲ್ಲಿದೆ ಓದಿರಿ....

ಯಾರು 'ಆ' ನಟಿ.?
ಇಂದು ಕೈಯಲ್ಲಿ ಹಣವಿಲ್ಲದೆ, ಆಸ್ಪತ್ರೆಯಲ್ಲಿ ಒದ್ದಾಡುತ್ತಿರುವ ನಟಿ ಬೇರೆ ಯಾರೂ ಅಲ್ಲ. 1995 ರಲ್ಲಿ ತೆರೆಕಂಡ ಸಲ್ಮಾನ್ ಖಾನ್ ಅಭಿನಯದ 'ವೀರ್ ಗತಿ' ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಪೂಜಾ ದದ್ವಾಲ್.

ಟಿಬಿ ಕಾಯಿಲೆಯಿಂದ ಬಳಲುತ್ತಿರುವ ನಟಿ
ನವಭಾರತ್ ಟೈಮ್ಸ್ ವರದಿ ಮಾಡಿರುವ ಪ್ರಕಾರ, ಪೂಜಾ ದದ್ವಾಲ್ ಟ್ಯೂಬರ್ ಕ್ಯುಲಾಸಿಸ್ (ಟಿ.ಬಿ) ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹದಿನೈದು ದಿನಗಳ ಹಿಂದೆ ಮುಂಬೈನ ಟಿ.ಬಿ ಆಸ್ಪತ್ರೆಯಲ್ಲಿ ದಾಖಲಾದ ಪೂಜಾ ದದ್ವಾಲ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಔಷಧಿಗೂ ನಟಿ ಬಳಿ ಹಣವಿಲ್ಲ.!
ಅನಾರೋಗ್ಯದಿಂದ ಬಳಲುತ್ತಿರುವ ಪೂಜಾ ಆರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟಿದೆ. ಆಸ್ಪತ್ರೆ ಹಾಗೂ ಔಷಧಿ ಖರ್ಚಿಗೂ ಪೂಜಾ ಬಳಿ ಹಣವಿಲ್ಲ. ಹೀಗಾಗಿ ಸಲ್ಮಾನ್ ಖಾನ್ ನಿಂದ ಸಹಾಯ ಬಯಸುತ್ತಿದ್ದಾರೆ ನಟಿ ಪೂಜಾ.

ಯಾವುದೇ ಪ್ರಯೋಜನ ಆಗಲಿಲ್ಲ
''ನಾನು ಟಿ.ಬಿ ಕಾಯಿಲೆಯಿಂದ ಬಳಲುತ್ತಿರುವುದು ಆರು ತಿಂಗಳ ಹಿಂದೆ ಗೊತ್ತಾಯಿತು. ಸಹಾಯಕ್ಕಾಗಿ ಸಲ್ಮಾನ್ ಖಾನ್ ಅವರನ್ನು ಭೇಟಿ ಆಗಲು ಪ್ರಯತ್ನಿಸಿದೆ. ಆದ್ರೆ, ಯಾವುದೇ ಪ್ರಯೋಜನ ಆಗಲಿಲ್ಲ'' ಎನ್ನುತ್ತಾರೆ ನೊಂದಿರುವ ನಟಿ ಪೂಜಾ ದದ್ವಾಲ್.

ಸಲ್ಮಾನ್ ಗೆ ವಿಡಿಯೋ ಕಳುಹಿಸಿರುವ ಪೂಜಾ
ತಮ್ಮ ಆರ್ಥಿಕ ಸಂಕಷ್ಟ ಹಾಗೂ ಅನಾರೋಗ್ಯ ಪರಿಸ್ಥಿತಿಯನ್ನು ವಿವರಿಸಿ ಸಲ್ಮಾನ್ ಖಾನ್ ಗೆ ನಟಿ ಪೂಜಾ ದದ್ವಾಲ್ ಒಂದು ವಿಡಿಯೋ ಕಳುಹಿಸಿದ್ದಾರಂತೆ. ಹೀಗಾಗಿ ''ಸಲ್ಮಾನ್ ನನ್ನ ವಿಡಿಯೋ ನೋಡಿದ್ರೆ, ಖಂಡಿತ ಸಹಾಯ ಮಾಡುತ್ತಾರೆ'' ಅಂತಾರೆ ನಟಿ ಪೂಜಾ.

ಬೀದಿಪಾಲು ಮಾಡಿದ ಪೂಜಾ ಪತಿ
90 ರ ದಶಕದಲ್ಲಿ ತೆರೆಮೇಲೆ ಮಿನುಗಿದ್ದ ನಟಿ ಪೂಜಾ ದದ್ವಾಲ್, ಬಳಿಕ ಗೋವಾದ ಕೆಸಿನೋ ಒಂದರಲ್ಲಿ ಹಲವು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರಂತೆ. ಆರು ತಿಂಗಳ ಹಿಂದೆ ಟಿ.ಬಿ ಕಾಯಿಲೆ ಇರುವುದು ಪೂಜಾಗೆ ಗೊತ್ತಾಗಿದೆ. ಪೂಜಾ ಆರೋಗ್ಯ ಕ್ಷೀಣಿಸುತ್ತಿದ್ದಂತೆ, ಆಕೆಯ ಪತಿ ಹಾಗೂ ಕುಟುಂಬದವರು ಬೀದಿಪಾಲು ಮಾಡಿದ್ದಾರೆ. ಹೀಗಾಗಿ ಪೂಜಾ ಕೈಯಲ್ಲಿ ಈಗ ದುಡ್ಡು ಇಲ್ಲ. ಒಂದು ಕಪ್ ಟೀ ಕುಡಿಯಬೇಕು ಅಂದರೂ ಇನ್ನೊಬ್ಬರನ್ನ ಬೇಡಿಕೊಳ್ಳುವ ಪರಿಸ್ಥಿತಿಗೆ ಪೂಜಾ ಬಂದುಬಿಟ್ಟಿದ್ದಾರೆ. ಸಲ್ಮಾನ್ ಖಾನ್ ದೊಡ್ಡ ಮನಸ್ಸು ಮಾಡಿದರೆ, ತಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು ಎಂಬುದು ಪೂಜಾ ಆಶಯ.


Click it and Unblock the Notifications











