'ಸಿಟಾಡೆಲ್'ಗಾಗಿ ಸಮಂತಾ ತಯಾರಿ: ಏನಿದರ ಕತೆ? ಪ್ರಿಯಾಂಕಾ ಚೋಪ್ರಾಗೆ ಲಿಂಕ್ ಹೇಗೆ?
ನಟಿ ಸಮಂತಾಗೆ ಇಚ್ಚೀಚಿನ ಕೆಲ ವರ್ಷಗಳಲ್ಲಿ ಅದ್ಭುತವಾಗ ಅವಕಾಶಗಳು ಅರಸಿ ಬರುತ್ತಿವೆ. ಈ ಮೊದಲು ಕೇವಲ ಬಬ್ಲಿ ನಾಯಕಿಯ ಪಾತ್ರಗಳಲ್ಲಿಯಷ್ಟೆ ಕಾಣಿಸಿಕೊಂಡಿದ್ದ ಸಮಂತಾ ಈಗ ಹಲವು ಭಿನ್ನ-ಭಿನ್ನ ಮೆಚ್ಯೂರ್ಡ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಸಮಂತಾರ ನಟನಾ ಪ್ರತಿಭೆಗೆ ಹಾಲಿವುಡ್‌ನಿಂದ ಸಹ ಅವಕಾಶಗಳು ಅರಸಿ ಬಂದಿವೆ. 'ಅರೇಂಜ್‌ಮೆಂಟ್ಸ್ ಆಫ್ ಲವ್' ಹೆಸರಿನ ಸಿನಿಮಾದಲ್ಲಿ ಸಮಂತಾ ಸಲಿಂಗಿ ಪಾತ್ರದಲ್ಲಿ ನಟಿಸುವುದು ಖಾತ್ರಿಯಾಗಿದೆ. ಇದರ ಜೊತೆಗೆ, 'ಅವೇಂಜರ್ಸ್' ಸಿನಿಮಾ ಸೇರಿದಂತೆ ಹಲವು ಸೂಪರ್ ಹೀರೋ ಸಿನಿಮಾಗಳನ್ನು ನಿರ್ದೇಶಿಸಿರುವ ಜಗತ್ತಿನ ಟಾಪ್ ನಿರ್ದೇಶಕರಾದ ರೂಸ್ಸೊ ಸಹೋದರರ ವೆಬ್ ಸರಣಿಯೊಂದರ ಭಾಗವಾಗುತ್ತಿದ್ದಾರೆ ಸಮಂತಾ.
ಸಮಂತಾ, ರೂಸ್ಸೊ ಸಹೋದರರ ವೆಬ್ ಸರಣಿಯ ಭಾಗವಾಗುತ್ತಿದ್ದಾರಾದರೂ ನೇರವಾಗಿ ರೂಸ್ಸೋ ಸಹೋದರರೇ ಸಮಂತಾಗೆ ಆಕ್ಷನ್ ಕಟ್ ಹೇಳುತ್ತಿಲ್ಲ, ಬದಲಿಗೆ ಬಾಲಿವುಡ್‌ನ ಪ್ರತಿಭಾನ್ವಿತ ಬರಹಗಾರ ಹಾಗೂ ನಿರ್ದೇಶಕ ಜೋಡಿ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ರೂಸ್ಸೋ ಸಹೋದರ ವೆಬ್ ಸರಣಿ
ರೂಸ್ಸೊ ಸಹೋದರರು 'ಸಿಟಾಡೆಲ್' ಹೆಸರಿನ ವೆಬ್ ಸರಣಿ ನಿರ್ದೇಶನ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ವೆಬ್ ಸರಣಿ ಕೆಲವೆ ತಿಂಗಳಲ್ಲಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಇದೇ ವೆಬ್ ಸರಣಿ ಹಿಂದಿಯಲ್ಲಿಯೂ ನಿರ್ಮಾಣವಾಗಲಿದ್ದು, ಇಂಗ್ಲೀಷ್‌ನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದ ಪಾತ್ರದಲ್ಲಿ ಹಿಂದಿಯಲ್ಲಿ ಸಮಂತಾ ನಟಿಸಲಿದ್ದಾರೆ. ಇಂಗ್ಲೀಷ್‌ನಲ್ಲಿ ರಿಚರ್ಡ್ ಮ್ಯಾಡನ್ ನಟಿಸಿದ್ದ ಪಾತ್ರದಲ್ಲಿ ನಟ ವರುಣ್ ಧವನ್ ನಟಿಸಲಿದ್ದಾರೆ.

ಸ್ಪೈ ಥ್ರಿಲ್ಲರ್ ಕತೆಯ 'ಸಿಟಾಡೆಲ್'
ಸ್ಪೈ ಥ್ರಿಲ್ಲರ್ ಕತೆಯನ್ನು 'ಸಿಟಾಡೆಲ್' ಒಳಗೊಂಡಿದ್ದು, ಸಿಟಾಡೆಲ್ ಏಜೆಂಟ್ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಭಾರತದಲ್ಲಿ ಈ ವೆಬ್ ಸರಣಿಗೆ ಯಾವ ಹೆಸರಿಡಲಿದ್ದಾರೆ ಎಂಬುದು ಖಾತ್ರಿಯಾಗಿಲ್ಲ. ಆದರೆ ಇಲ್ಲಿ ಸಮಂತಾ ಮತ್ತು ವರುಣ್ ಧವ್ ಏಜೆಂಟ್ ಪಾತ್ರದಲ್ಲಿ ನಟಿಸುವುದು ಖಾಯಂ. ಈ ಇಬ್ಬರು ಮಾತ್ರವೇ ಅಲ್ಲದೆ ಇನ್ನೂ ಹಲವು ಪ್ರಮುಖ ನಟರು ಈ ಸ್ಪೈ ಥ್ರಿಲ್ಲರ್ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ. ಈ ವೆಬ್ ಸರಣಿಯಲ್ಲಿ ಸಖತ್ ಆಕ್ಷನ್ ದೃಶ್ಯಗಳು ಸಹ ಇರಲಿವೆ.

ಆಕ್ಷನ್ ದೃಶ್ಯಕ್ಕಾಗಿ ಸಮಂತಾ ತಯಾರಿ
ಆಕ್ಷನ್ ದೃಶ್ಯಗಳಿಗಾಗಿ ಸಮಂತಾ ತಮ್ಮನ್ನು ತಾವು ತಯಾರು ಮಾಡಿಕೊಳ್ಳುತ್ತಿದ್ದಾರೆ. ಸಮಂತಾ ಸತತವಾಗಿ ಮಾರ್ಷಲ್ ಆರ್ಟ್ಸ್ ಅನ್ನು ಕಲಿಯುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಹ ಈ ವೆಬ್ ಸರಣಿಗಾಗಿ ಮಾರ್ಷಲ್ ಆರ್ಟ್ಸ್ ಕಲಿತಿದ್ದರು. ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದ 'ದಿ ಫ್ಯಾಮಿಲಿ ಮ್ಯಾನ್ 2' ನಲ್ಲಿ ಸಮಂತಾ ನಟಿಸಿದ್ದಾರೆ. ಆ ಸಿನಿಮಾದಲ್ಲಿ ಅವರೇ ಕೆಲವು ಮಾರ್ಷಲ್ ಆರ್ಟ್ಸ್ ದೃಶ್ಯಗಳಲ್ಲಿ ನಟಿಸಿದ್ದರು. ಹಾಗಾಗಿ ಈ ವೆಬ್ ಸರಣಿಯಲ್ಲಿಯೂ ಅದನ್ನೇ ಮುಂದುವರೆಸುವ ಉಮೇದಿನಲ್ಲಿದ್ದಾರೆ ಸಮಂತಾ.

ಹಲವು ಸಿನಿಮಾಗಳಲ್ಲಿ ಸಮಂತಾ ಭಾಗಿ
ಸಮಂತಾ ಹಲವು ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಮಂತಾ ನಟನೆಯ 'ಶಾಕುಂತಲಂ', 'ಖುಷಿ' ಸಿನಿಮಾಗಳು ಬಿಡುಗಡೆ ಆಗಬೇಕಿವೆ. 'ಖುಷಿ' ಸಿನಿಮಾದಲ್ಲಿ ಸಮಂತಾ ಜೊತೆಗೆ ವಿಜಯ್ ದೇವರಕೊಂಡ ನಟಿಸಿದ್ದಾರೆ. ಅದರ ಬಳಿಕ 'ಯಶೋಧ' ಆ ಬಳಿಕ 'ಅರೇಂಜ್ ಮೆಂಟ್ಸ್ ಆಫ್ ಲವ್' ಸಿನಿಮಾಗಳಲ್ಲಿ ನಟಿಸಲಿದ್ದಾರೆ. ತಾಪ್ಸಿ ಪನ್ನು ನಿರ್ಮಾಣದ ಹಿಂದಿ ಸಿನಿಮಾದಲ್ಲೂ ಸಮಂತಾ ನಟಿಸಲಿದ್ದಾರೆ. ಕರಣ್ ಜೋಹರ್ ಸಹ ಸಮಂತಾಗೆ ಹಿಂದಿ ಸಿನಿಮಾದ ಆಫರ್ ಮಾಡಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











