ಆ 'ವ್ಯಕ್ತಿ'ಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದೆ, ಸಮಂತಾ ಮಾತುಗಳಿಗೆ ತಬ್ಬಿಬ್ಬಾದ ಫ್ಯಾನ್ಸ್..!
ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ, ಹಸಿವು ಇಲ್ಲದ ಅದೆಷ್ಟೋ ಗಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತೆ.
ಆದರೆ ಈಗೀಗ ಪ್ರೀತಿಯ ಅರ್ಥ ಬದಲಾಗಿದೆ. ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಎಂಥದ್ದೋ ತಿರುವುಗಳಲ್ಲಿ ಪ್ರೀತಿ ಅಂತ್ಯವಾದ ನಂತರ ಇಂಥದ್ದೊಂದು ಸಂಬಂಧವಿತ್ತು ಎನ್ನುವ ನೆನಪನ್ನು ಕೂಡ ಉಳಿಸದೆ ಹೋಗುವಷ್ಟು ಸಂಬಂಧಗಳು ವ್ಯವಹಾರಿಕವಾಗಿವೆ. ಇದಕ್ಕೆ ಸಮಂತಾ ನೀಡಿರುವ ಹೇಳಿಕೆ ಸದ್ಯದ ಉದಾಹರಣೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ನಾಗಚೈತನ್ಯ ಮತ್ತು ಸಮಂತಾ ದಾಂಪತ್ಯ ಮುರಿದು ಬಿದ್ದಿದೆ. ನಾಗಚೈತನ್ಯ ತಮ್ಮ ಪಾಡಿಗೆ ತಾವು ಇದ್ದಾರೆ. ಸಮಂತಾ ಅವರನ್ನು ಮರೆತು ಶೋಭಿತಾ ಜೊತೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಇತ್ತ ಸಮಂತಾ ಬಾಲಿವುಡ್‌ನಲ್ಲಿ ಬೆಳೆಯುವ ಕನಸು ಕಾಣುತ್ತಿದ್ದಾರೆ. ಸಿಟಾಡೆಲ್ ವೆಬ್ ಸರಣಿಯಲ್ಲಿ ವರುಣ್ ಧವನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಪಾತ್ರ ಮತ್ತು ಚಿತ್ರಕ್ಕೆ ಸಿಕ್ಕ ಮತ್ತು ಸಿಕ್ತಿರುವ ಪ್ರತಿಕ್ರಿಯೆಯಿಂದ ಪುಳಕಿತಗೊಂಡು ಪ್ರಚಾರವನ್ನು ಇನ್ನೂ ಮಾಡುತ್ತಿದ್ದಾರೆ.
ಆದರೆ, ಹೀಗೆ ಪ್ರಚಾರ ಮಾಡುವ ಸಮಯದಲ್ಲಿ ನಾಗಚೈತನ್ಯ ಬಗ್ಗೆ ಸಮಂತಾ ಮಾತೊಂದನ್ನು ಆಡಿದ್ದಾರೆ. ನಾಗಚೈತನ್ಯ ಅವರನ್ನು ಪ್ರೀತಿಸಿದ್ದಕ್ಕೆ ಪಶ್ಚಾತಾಪ ಕೂಡ ಪಟ್ಟಿದ್ದಾರೆ. ಪ್ರೀತಿಯನ್ನು ದುಡ್ಡಿನಲ್ಲಿ ಅಳೆದಿದ್ದಾರೆ.
ಹೌದು, ಅಸಲಿಗೆ ಸಿಟಾಡೆಲ್ ವೆಬ್ ಸರಣಿಯ ಪ್ರಚಾರಾರ್ಥ ವರುಣ್ ಧವನ್ ಮತ್ತು ಸಮಂತಾ ಅಕ್ಕ-ಪಕ್ಕ ಕುಂತು ಒಂದಿಷ್ಟು ಹರಟೆ ಹೊಡೆದಿದ್ದಾರೆ. ಇದೇ ಸಮಯದಲ್ಲಿ ಸಮಂತಾಗೆ ವರುಣ್ ಧವನ್ ಅನಗತ್ಯವಾಗಿ ನೀವು ದುಡ್ಡನ್ನು ಖರ್ಚು ಮಾಡಿದ್ದು ಯಾವಾಗ ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಒಂದು ಸೆಕೆಂಡ್ ಕೂಡ ಯೋಚಿಸದೆ ಸಮಂತಾ ನನ್ನ ಮಾಜಿ ಪತಿಗೆ ನಾನು ಖರೀದಿಸಿದ ದುಬಾರಿ ಉಡುಗೊರೆಗಳು ಎಂದಿದ್ದಾರೆ.
ಸಮಂತಾ ಹೇಳಿದ ಈ ಉತ್ತರಕ್ಕೆ ಅರೆ ಕ್ಷಣ ಗಾಬರಿಯಾದ ವರುಣ್ ಧವನ್ ಆ ನಂತರ ಯಾವ ಉಡುಗೊರೆ ಎಷ್ಟು ಹಣ ಎಂದು ಕೇಳಿದ್ದಾರೆ. ಇದಕ್ಕೆ ವ್ಯಂಗ್ಯವಾಗಿ ನಕ್ಕಿರುವ ಸಮಂತಾ ಚೂರು-ಪಾರು ಎಂದು ಹೇಳಿದ್ದಾರೆ. ಸದ್ಯಕ್ಕೆ ಸಮಂತಾ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಪರ-ವಿರೋಧದ ಅಲೆ ಸೃಷ್ಟಿಸಿದೆ. ಕೆಲವರು ಸಮಂತಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವ್ಹಾ ಎಂತಹ ಖಡಕ್ ಉತ್ತರ ಎಂದು ಸಮಂತಾ ಅವರಿಗೆ ಶಹಬ್ಬಾಶ್‌ಗಿರಿಯನ್ನು ಕೊಡುತ್ತಿದ್ದಾರೆ. ಸಮಂತಾ ಅವರಿಂದ ನಾಗಚೈತನ್ಯ ಸುಲಿಗೆ ಮಾಡಿದ್ದಾರೆ ಎನ್ನುತ್ತಿದ್ದಾರೆ. 3100 ಕೋಟಿ ಆಸ್ತಿಯನ್ನು ಹೊಂದಿರುವ ನಾಗಾರ್ಜುನ ಮಗ ನಾಗಚೈತನ್ಯ ತಮ್ಮ ಪತ್ನಿಯ ದುಡ್ಡಿನಲ್ಲಿ ಮೋಜು ಮಸ್ತಿ ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಕೆಲವರು ಸಮಂತಾ ಅವರ ಈ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. ಪ್ರೀತಿ ಎಂಬ ಜೀವಜಲವನ್ನು ಸಮಂತಾ ದುಡ್ಡಿನಲ್ಲಿ ಅಳೆಯಬಾರದಿತ್ತು ಎನ್ನುತ್ತಿದ್ದಾರೆ. ಸಂಬಂಧ ಮುರಿದು ಬಿದ್ದ ನಂತರ ಈ ತರಹದ ಮಾತುಗಳು ನಿಮಗೆ ಶೋಭೆ ತರಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೇ 2017ರಲ್ಲಿ ನಾಗಚೈತನ್ಯ ಜೊತೆ ಮದುವೆಯಾದ ನಂತರ ಸಮಂತಾ ತಮ್ಮ ನಾಗಚೈತನ್ಯಗೆ ದುಬಾರಿ ಬೈಕ್‌ವೊಂದನ್ನು ಉಡುಗೊರೆ ನೀಡಿದ್ದರು. ಹತ್ ಹತ್ರ 27 ಲಕ್ಷ ಖರ್ಚು ಮಾಡಿದ್ದರು. ಈ ವಿಚಾರಕ್ಕೆ ಸಮಂತಾ ಪಶ್ಚಾತಾಪ ಪಡುತ್ತಿದ್ದಾರಾ ಗೊತ್ತಿಲ್ಲ. ಆದರೆ ಅನೇಕರು ಬೈಕ್ ಬಗ್ಗೆಯೇ ಸಮಂತಾ ಮಾತನಾಡಿದ್ದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಾಗಚೈತನ್ಯಗೆ ಲಕ್ಷ ಲಕ್ಷ ಹಣ ಖರ್ಚು ಮಾಡಿ ಉಡುಗೊರೆಯನ್ನು ನೀಡಿದ್ದಕ್ಕೆ ಸಮಂತಾ ಇನ್ನೂ ನೊಂದುಕೊಂಡಿದ್ದಾರೆ ಎನ್ನುತ್ತಿದ್ದಾರೆ.


Click it and Unblock the Notifications











