ಪ್ರತಿಭೆಗಿಂತ ಬಾಡಿ ಸೈಜ್ ಬಗ್ಗೆ ಚರ್ಚೆ ಮಾಡ್ತಾರೆ, ಮುಖಕ್ಕಷ್ಟೆ ಅಲ್ಲ ನನ್ನ ದೇಹಕ್ಕೆಲ್ಲಾ ಮೇಕಪ್ ಹಾಕ್ತಿದ್ರು- ಸಮೀರಾ ರೆಡ್ಡಿ
ಮುಂಬೈ ಬೆಡಗಿ ಸಮೀರಾ ರೆಡ್ಡಿ ದಕ್ಷಿಣದ ಕೆಲನ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಕನ್ನಡದ 'ವರದನಾಯಕ' ಚಿತ್ರದಲ್ಲಿ ಸುದೀಪ್ ಪತ್ನಿ ಪಾತ್ರದಲ್ಲಿ ಮಿಂಚಿದ್ದರು. ಚಿತ್ರರಂಗದಲ್ಲಿರುವ ಕೆಲ ವಿಚಿತ್ರ ವರ್ತನೆಗಳ ಬಗ್ಗೆ ಸಮೀರಾ ಆಗಾಗ್ಗೆ ಮಾತನಾಡುತ್ತಿರುತ್ತಾರೆ. "ದೇಹದ ಆ ಭಾಗಕ್ಕೆ ಸರ್ಜರಿ ಮಾಡಿಸಿಕೊಳ್ಳುವಂತೆ ಒತ್ತಾಯ ಮಾಡಿದ್ರು" ಎಂದು ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಿಡ್ ಡೇ ಪತ್ರಿಕೆ ಸಂದರ್ಶನದಲ್ಲಿ ಸಮೀರಾ ರೆಡ್ಡಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ಸಿನಿಜರ್ನಿಯನ್ನು ಮೆಲುಕು ಹಾಕಿದ್ದಾರೆ. ಚಿತ್ರರಂಗದ ಕರಾಳ ಮುಖ ತೆರೆದಿಟ್ಟಿದ್ದಾರೆ. ಇಷ್ಟವಿಲ್ಲದಿದ್ದರೂ ಕೆಲವೊಂದು ವಿಚಾರಗಳನ್ನು ಒಪ್ಪಿಕೊಳ್ಳಬೇಕಿತ್ತು ಎಂದಿದ್ದಾರೆ. ಸೋಶಿಯಲ್ ಮೀಡಿಯಾ ಟ್ರೋಲ್ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ.

ಸಮೀರಾ ಮಾತನಾಡಿ "ಒಬ್ಬ ನಟಿಯಾಗಿ, ಮಹಿಳೆಯಾಗಿ, ನಾನು ಯಾವಾಗಲೂ ಹೆಚ್ಚು ಸುಂದರವಾಗಿರಬೇಕು ಎಂದು ನಾನು ಭಾವಿಸುತ್ತಿದ್ದೆ. ಕೆಲವು ವಿಚಿತ್ರ ಕಾರಣಗಳಿಗಾಗಿ, ಎಲ್ಲರೂ ಯಾವಾಗಲೂ ನನಗೆ ಹೆಚ್ಚು ಸುಂದರವಾಗಿ ಬೆಳ್ಳಗೆ ಕಾಣುವಂತೆ ಮೇಕಪ್ ಹಾಕುತ್ತಿದ್ದರು. ಹಾಗಾಗಿ ದೇಹದ ಮೇಲೆ ಮೇಕಪ್ ಕೂಡ ಮಾಡಬೇಕಾಗಿತ್ತು. ಅದು ನಿಜವಾಗಿಯೂ ಹಿಂಸೆ ಎನಿಸುತ್ತಿತ್ತು" ಎಂದು ಅಲವತ್ತುಕೊಂಡಿದ್ದಾರೆ.
ನಾನು ಸ್ಲಿಮ್ ಆಗಿಲ್ಲ ಎಂದು ನನಗೆ ಯಾವಾಗಲೂ ಅನಿಸುವಂತೆ ಮಾಡುತ್ತಿದ್ರು. ನಾನು ತುಂಬಾ ಎತ್ತರದ ಹುಡುಗಿ, ಆದ್ದರಿಂದ ನಾನು ತುಂಬಾ ದೊಡ್ಡವಳು ಎಂದು ಭಾವಿಸುವಂತೆ ತೋರಿಸುತ್ತಿದ್ದರು ಎಂದು ಸಮೀರಾ ಎನಪು ಮಾಡಿಕೊಂಡಿದ್ದಾರೆ. "ಆರಂಭದಲ್ಲಿ ಇದು ಸರ್ವೇಸಾಧಾರಣ ಎನ್ನುವಂತೆ ಆಗಿಬಿಟ್ಟಿತ್ತು. ಇಂಡಸ್ಟ್ರಿಯಲ್ಲಿ ಇದ್ದಾಗ ನನ್ನ ಪ್ರತಿಭೆ, ನಟನೆ ಹಾಗೂ ಬೇರೆ ವಿಷಯಗಳಿಗಿಂತ ನನ್ನ ಸೈಜ್ ಬಗ್ಗೆಯೇ ಹೆಚ್ಚು ಚರ್ಚೆ ಆಗ್ತಿತ್ತು. ಇಂದು ನಾನು ಹಿಂತಿರುಗಿ ನೋಡಿದ್ರೆ, ಆ ರೀತಿ ಚಿತ್ರರಣ ಮೂಡಲು ಏಕೆ ಅವಕಾಶ ಮಾಡಿಕೊಟ್ಟೆ ಎಂದು ನನಗೆ ಗೊತ್ತಿಲ್ಲ, ಆದರೆ ಅದು ಉದ್ಯಮದ ರೂಢಿಯಾಗಿತ್ತು" ಎಂದು ವಿವರಿಸಿದ್ದಾರೆ.

ಸಮೀರಾ ತಾಯಿ ಮಂಗಳೂರು ಮೂಲದವರು. ಆದರೆ ಸಮೀರಾ ಹುಟ್ಟಿ ಬೆಳೆದಿದ್ದು ಮುಂಬೈನಲ್ಲೇ. ಟಾಮ್‌ಬಾಯ್ ರೀತಿ ಬೆಳೆದವರು. ಮೊದಲಿಗೆ ಒಂದು ಆಲ್ಬಮ್ ಸಾಂಗ್‌ನಲ್ಲಿ ಮಿಂಚಿದ್ದರು. ಬಳಿಕ 'ಮೈನೆ ದಿಲ್ ತುಜ್ಕೋ ದಿಯಾ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಖುದ್ದು ಸಮೀರಾ ಹೇಳಿದಂತೆ ನಟನೆಗೆ ಹೆಚ್ಚು ಅವಕಾಶ ಇರುವ ಚಿತ್ರಗಳು ಆಕೆಗೆ ಸಿಗಲಿಲ್ಲ. ಆಕೆ ಬರೀ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದೇ ಹೆಚ್ಚು.
'ನರಸಿಂಹುಡು' ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ಜ್ಯೂ. ಎನ್‌ಟಿಆರ್ ಜೋಡಿಯಾಗಿ ಮಿಂಚಿದ್ದರು. ಬಳಿಕ 'ಅಶೋಕ್' ಎಂಬ ಚಿತ್ರದಲ್ಲಿ ಮತ್ತೆ ಈ ಜೋಡಿ ರಿಪೀಟ್ ಆಗಿತ್ತು. ಅದೇ ಸಮಯದಲ್ಲಿ ಇಬ್ಬರ ನಡುವೆ ಲವ್ವಿ ಡವ್ವಿ ಶುರುವಾಗಿತ್ತು. 'ವಾರಣಂ ಆಯಿರಂ' ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
12 ವರ್ಷಗಳ ಹಿಂದೆ ಉದ್ಯಮಿ ಅಕ್ಷಯ್ ವರ್ದೆ ಎಂಬುವವರ ಜೊತೆ ಸಮೀರಾ ಮದುವೆ ನಡೆದಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆ ಬಳಿಕ ಫ್ಯಾಮಿಲಿ, ಮನೆ, ಮಕ್ಕಳು ಎಂದು ಸಮೀರಾ ಸಿನಿಮಾಗಳಿಂದ ದೂರ ಉಳಿದುಬಿಟ್ಟರು. 2004ರಲ್ಲಿ 'ನಾಮ್' ಎಂಬ ಚಿತ್ರದಲ್ಲಿ ಸಮೀರಾ ನಟಿಸಿದ್ದರು. 10 ವರ್ಷಗಳ ಬಳಿಕ ಅಂದರೆ 20 ವರ್ಷಗಳ ಬಳಿಕ ಅಂದರೆ 2024ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಇದೇ ಆಕೆಯ ಕೊನೆಯ ಸಿನಿಮಾ ಎನಿಸಿಕೊಂಡಿದೆ.
ಕನ್ನಡದ 'ವರದನಾಯಕ' ಆಕೆ ನಟಿಸಿದ ಕೊನೆಯ ಸಿನಿಮಾ ಎನ್ನಬಹುದು. 2013ರಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ಚಿತ್ರದಲ್ಲಿ ವರದನಾಯಕ(ಸುದೀಪ್)ನ ಪತ್ನಿ ಲಕ್ಷ್ಮಿ ಪಾತ್ರದಲ್ಲಿ ಮಿಂಚಿದ್ದರು.


Click it and Unblock the Notifications











