ಮುಸ್ಲಿಂ ಧರ್ಮಗುರು ಕೈ ಹಿಡಿದು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದ ಗೋಲ್ಡನ್ ಸ್ಟಾರ್ ಗಣೇಶ್ ನಾಯಕಿ ಮತ್ತೆ ಗರ್ಭಿಣಿ..!
ಸನಾ ಖಾನ್.. ಒಂದ್ಕಾಲದ ಗ್ಲಾಮರ್ ಗೊಂಬೆ. ಕೇವಲ ಬಾಲಿವುಡ್ ಮಾತ್ರ ಅಲ್ಲ ಬೇರೆ ಭಾಷೆಯಲ್ಲಿ ಕೂಡ ಬೇಡಿಕೆ ಹೊಂದಿದ್ದವರು ಇವರು. ಆದರೆ ಅದೇನಾಯ್ತೋ ಗೊತ್ತಿಲ್ಲ. ಚಿತ್ರರಂಗದಿಂದ ದೇವರಲ್ಲಿನ ನಂಬಿಕೆಗೆ ಧಕ್ಕೆಯಾಗುತ್ತಿದೆ ಎಂದು ಹೇಳಿ ಏಕಾಏಕಿ ಬಣ್ಣದ ಪ್ರಪಂಚದಿಂದ ದೂರವಾದವರು ಸನಾ ಖಾನ್.
ಮಾನವೀಯತೆ ಮೇಲೆ ಕೆಲಸ ಮಾಡಿಕೊಂಡು, ಸೃಷ್ಟಿದಾತ ಹೇಳಿದ ನಿಯಮಗಳನ್ನು ಪಾಲಿಸುತ್ತೇನೆ. ನನಗೆ ಚಿತ್ರೋದ್ಯಮ ಹೆಸರು, ಹಣ, ಗೌರವ ಎಲ್ಲವನ್ನು ನೀಡಿದೆ. ಆದರೆ ಮನುಷ್ಯ ಹೆಸರು, ಹಣ ಮಾಡಲು ಭೂಮಿಗೆ ಬರುವುದಾ? ನನಗೆ ಇದು ಗೊತ್ತಾಯ್ತು. ಹೆಸರು, ಹಣಕ್ಕೋಸ್ಕರ ಇಡೀ ಜೀವನವನ್ನು ಕಳೆಯುವುದಲ್ಲ. ಹೀಗಾಗಿ ನಾನು ಬಣ್ಣದಲೋಕದಿಂದ ದೂರ ಹೋಗುವೆ ಎಂದು ಹೇಳಿದ್ದ ಸನಾ ಆ ನಂತರ ಮುಸ್ಲಿಂ ಧರ್ಮಗುರು ಮುಫ್ತಿ ಅನಾಸ್ ಸೈಯದ್ ಜೊತೆ ವೈವಾಹಿನ ಜೀವನಕ್ಕೆ ಮುನ್ನುಡಿ ಬರೆದರು. ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದರು.

ಹೀಗೆ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಮನೆ-ಗಂಡ-ಸಂಸಾರ-ಧರ್ಮ ಎಂದು ನೆಮ್ಮದಿಯಾಗಿರುವ ಸನಾ ಖಾನ್ ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ತಮ್ಮನ್ನು ಇಷ್ಟಪಡುವ ಇನ್ಸ್ಟಾಗ್ರಾಮ್‌ನಲ್ಲಿ ಹಿಂಬಾಲಿಸುವ 6,862,472 ಜನರ ಜೊತೆ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.
ಸರ್ವಶಕ್ತನಾದ ಅಲ್ಲಾಹನ ಆಶೀರ್ವಾದದಿಂದ ಮೂವರಿಂದ ನಾಲ್ಕಕ್ಕೇ ನಮ್ಮ ಕುಟುಂಬ ಬೆಳೆಯುತ್ತಿದೆ ಎಂದಿದ್ದಾರೆ. ಸೈಯದ್ ತಾರಿಕ್ ಜಮೀಲ್ ಅಣ್ಣನಾಗಲು ಉತ್ಸುಕನಾಗಿದ್ದಾನೆ. ಪ್ರೀತಿಯ ಅಲ್ಲಾಹ್ ನಿಮ್ಮಿಂದ ಸಿಕ್ಕ ಈ ಹೊಸ ಆಶೀರ್ವಾದವನ್ನು ಸ್ವಾಗತಿಸಲು ಕಾಯಲು ಸಾಧ್ಯ ಇಲ್ಲ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಸನಾ ಅವರಿಗೆ ಅನೇಕರು ಶುಭಾಶಯವನ್ನು ಕೋರುತ್ತಿದ್ದಾರೆ. ಸನಾ ಹಂಚಿಕೊಂಡ ವಿಡಿಯೋವನ್ನು ಲೈಕ್ ಮಾಡುವ ಮೂಲಕ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.
ಅಂದ್ಹಾಗೇ ಸನಾ ಖಾನ್ ನವೆಂಬರ್ 21-2020ರಂದು ಮುಫ್ತಿ ಅನಾಸ್ ಸೈಯದ್ ಜೊತೆ ಸೂರತ್‌ನಲ್ಲಿ ಮದುವೆಯಾದರು. ಅಲ್ಲಾರಿಂದ ಇಬ್ಬರೂ ಪ್ರೀತಿಸಿದೆವು, ಅಲ್ಲಾರಿಂದಾಗಿ ಮದುವೆಯಾದೆವು, ಈ ಜಗತ್ತಿನಲ್ಲಿ ಅಲ್ಲಾ ನಮ್ಮಿಬ್ಬರನ್ನು ಒಟ್ಟಾಗಿ ಇಡಲಿ ಎಂದು ಪ್ರಾರ್ಥಿಸಿದ್ದರು. ನಾನು ಅನೇಕ ವರ್ಷಗಳ ಕಾಲ ಪ್ರಾರ್ಥಿಸಿದ ಫಲವಾಗಿ ಇಂತಹ ಗಂಡ ಸಿಕ್ಕಿದ್ದಾನೆ ಎಂದು ಹೇಳಿದ್ದರು. ಕಳೆದ ವರ್ಷ ತಮ್ಮ ಮೊದಲ ಮಗುವಿಗೆ ಜನ್ಮವನ್ನು ನೀಡಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಸನಾ ಆಗಾಗ ಧರ್ಮ, ಜೀವನದ ಕುರಿತು ಕೆಲ ಪೋಸ್ಟ್ ಹಾಕುತ್ತಿರುತ್ತಾರೆ.
ಇನ್ನುಳಿದಂತೆ 2005ರಲ್ಲಿ ಚಿತ್ರರಂಗಕ್ಕೆ ಬಂದ ಸನಾ ಖಾನ್, ಅತ್ಯಲ್ಪ ಅವಧಿಯಲ್ಲಿಯೇ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದರು. ಹಿಂದಿ ಜೊತೆಯಲ್ಲಿ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು.'ಗಗನಂ', 'ಪಯಣಂ', 'ಕ್ಲೈಮ್ಯಾಕ್ಸ್', 'ಜೈಹೋ' 'ಹಲ್ಲಾಬೋಲ್' ಸನಾ ಖಾನ್ ಅಭಿನಯದ ಕೆಲ ಜನಪ್ರಿಯ ಚಿತ್ರಗಳು. ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿ ಚೊಚ್ಚಲ ಬಾರಿ ನಿರ್ದೇಶಿಸಿದ್ದ ಚಿತ್ರ 'ಕೂಲ್' ಚಿತ್ರದಲ್ಲಿ ಕೂಡ ಸನಾ ನಾಯಕಿಯ ಪಾತ್ರ ನಿರ್ವಹಿಸಿದ್ದರು. ಕಾಜಲ್ ಎಂಬ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆಲ್ಲುವ ಪ್ರಯತ್ನ ಮಾಡಿದ್ದರು.
ಇನ್ನು ಸನಾ ಖಾನ್ ವಿವಾದಗಳಿಂದ ಕೂಡ ಹೆಸರುವಾಸಿಯಾಗಿದ್ದರು. 15 ವರ್ಷದ ಬಾಲಕಿಯೊಬ್ಬಳ ಅಪಹರಣ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಹೈಸ್ಕೂಲ್‌ನಲ್ಲಿರುವಾಗಲೇ 'ಯೇ ಹೇ ಹೈ ಸೊಸೈಟಿ' ಎಂಬ ವಯಸ್ಕರ ಚಿತ್ರದಲ್ಲಿ ನಟಿಸಿದ್ದರು.ಇನ್ನು ಹಿಂದಿಯ ಬಿಗ್ ಬಾಸ್ ಸೀಸನ್ ಆರರಲ್ಲಿ ಕೂಡ ಕಾಣಿಸಿಕೊಂಡಿದ್ದ ಸನಾ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು.ಕೇರಳದ ಕಣ್ಣೂರಿನವರಾದ ಸನಾ ಖಾನ್, ಟಿವಿ ಜಾಹೀರಾತುಗಳ ಮೂಲಕ ಪ್ರಖ್ಯಾತಿ ಗಳಿಸಿದ್ದರು. ಇಂಥಾ ಸನಾ ಖಾನ್ ತಮಿಳಿನಲ್ಲಿ ಅಯೋಗ್ಯ ಎಂಬ ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಅದೇ ಕೊನೆ. ಆ ನಂತರ ಸನಾ ಖಾನ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿದರು.


Click it and Unblock the Notifications











