ಬಣ್ಣದ ಲೋಕಕ್ಕೆ ಕಾಲಿಟ್ಟ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ
ಭಾರತದ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಕೆಲವು ಖ್ಯಾತ ಆಟಗಾರರು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಸಾನಿಯಾ ಮಿರ್ಜಾ ಸರದಿ. ಅಂದಹಾಗೆ ಸಾನಿಯಾ ಬಣ್ಣ ಹಚ್ಚುತ್ತಿರುವುದು ವೆಬ್ ಸೀರಿಸ್ ನಲ್ಲಿ.
ಆಟದ ಜೊತೆಗೆ ತನ್ನ ಸ್ಟೈಲ್ ಹಾಗೂ ಸೌಂದರ್ಯದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಮೂಗುತಿ ಸುಂದರಿ ಈಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿರುವುದು ಚಿತ್ರಪ್ರಿಯರಿಗೆ ಸಂತಸದ ವಿಚಾರ. ಅಂದಹಾಗೆ ಸಾನಿಯಾ ನಟಿಸುತ್ತಿರುವುದು 'ಎಂಟಿವಿ ನಿಷೇಧ್ ಅಲೋನ್ ಟುಗೆದರ್'.
ಈಗಾಗಲೇ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಸಾನಿಯಾ ಇದೀಗ ಮೊದಲ ಬಾರಿಗೆ ವೆಬ್ ಸೀರಿಸ್ ಮೂಲಕ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಅಂದ್ಹಾಗೆ ಸಾನಿಯಾ ವೆಬ್ ಸೀರಿಸ್ ನಲ್ಲಿ ನಟಿಸಲು ಒಂದು ಬಲವಾದ ಕಾರಣವಿದೆ. ಈ ವೆಬ್ ಸರಣಿ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವ ಸರಣಿಯಾಗಿದೆ, ಈ ಸಲುವಾಗಿ ಸಾನಿಯಾ ವೆಬ್ ಸೀರಿಸ್ ನಲ್ಲಿ ನಟಿಸಲು ಮುಂದಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾನಿಯಾ, 'ಕ್ಷಯರೋಗ ಯಾವಾಗಲು ಅಪಾಯ. ಕೊರೊನಾ ಸಮಯದಲ್ಲಿ ಇದು ಮತ್ತಷ್ಟು ಅಪಾಯವನ್ನು ಹೆಚ್ಚಿಸಿದೆ. ಟಿಬಿಯನ್ನು ನಿಗ್ರಹಿಸುವ ಹೋರಾಟ ಎಂದಿಗಿಂತಲೂ ಈಗ ಕಷ್ಟಕರವಾಗಿದೆ. ಮತ್ತು ಅದರಲ್ಲಿ ಒಂದು ಪಾತ್ರವನ್ನು ವಹಿಸಲು ನನ್ನನ್ನು ಪ್ರೇರೇಪಿಸಿತು. ನನ್ನ ಭಾಗವಹಿಸುವಿಕೆ ಟಿಬಿ ವಿರುದ್ಧ ಒಟ್ಟಾಗಿ ಹೋರಾಡಲು ಮತ್ತ ಸಕಾರಾತ್ಮಕ ಬದಲಾವಣೆ ತರಲು ಸಹಾಯ ಮಾಡುತ್ತೆ ಎಂದು ನಾನು ಭಾವಿಸಿದ್ದೇನೆ' ಎಂದಿದ್ದಾರೆ.
ಈ ವೆಬ್ ಸೀರಿಸ್ 5 ಕಂತುಗಳು ಇರಲಿದೆಯಂತೆ. ಹೊಸದಾಗಿ ಮದುವೆಯಾದ ದಂಪತಿ ದಿಢೀರ್ ಲಾಕ್ ಡೌನ್ ನಿಂದ ಏನೆಲ್ಲ ತೊಂದರೆ ಎದುರಿಸುತ್ತಾರೆ ಎನ್ನುವುದು ಈ ವೆಬ್ ಸೀರಿಸ್ ನ ಕಥೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ವೆಬ್ ಸೀರಿಸ್ ಇದೆ ತಿಂಗಳು ಕೊನೆಯಲ್ಲಿ ಎಂಟಿವಿಯಲ್ಲಿ ರಿಲೀಸ್ ಆಗುತ್ತಿದೆ.


Click it and Unblock the Notifications











