65ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿ ಮದುವೆಯಾದ ಸಂಜಯ್ ದತ್, ಬಾಬಾ ಕೈ ಹಿಡಿದ ಚೆಲುವೆ ಯಾರು..?
ಕೆನ್ನೆಗೆ ಹಚ್ಚಿದ್ದ ಅರಿಶಿಣ ಇನ್ನೂ ಮಾಸಿರುವುದಿಲ್ಲ. ಕೈಯಲ್ಲಿರುವ ಮದರಂಗಿಯ ಒಂದೆಳೆ ಕೂಡ ಮಂದವಾಗಿರಲ್ಲ. ಆಗಲೇ ಡಿವೋರ್ಸ್ ಕೇಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾನೇ ಇದೆ.
ಕೇವಲ ಜನಸಾಮಾನ್ಯರ ಬದುಕಿನಲ್ಲಿ ಅಷ್ಟೇ ಅಲ್ಲ, ಸುಖದ ಸುಪ್ಪತ್ತಿಗೆಯಲ್ಲಿ ತೇಲುವ ಚಿತ್ರರಂಗದವರ ಬದುಕಿನಲ್ಲಿ ಕೂಡ ಈ ವಿಚ್ಚೇದನ ತುಂಬಾನೇ ಮಾಮೂಲು ಎನ್ನುವಂತೆ ಆಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವು ಲವ್ವು ಮತ್ತು ನೋವನ್ನು ಒಳಗೊಂಡಿರುವ ಕಥೆಗಳು ಈ ಚಿತ್ರರಂಗದಲ್ಲಿವೆ. ಹೀಗಿರುವಾಗ ಬಾಲಿವುಡ್‌ನ ಖಳನಾಯಕ ಸಂಜಯ್ ದತ್ ತಮ್ಮ 65ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿ ಮದುವೆಯಾಗಿದ್ದಾರೆ. ಅಚ್ಚರಿ ಅನಿಸಿದರೂ ಇದು ನಿಜಾ.

ಹೌದು, ಸಂಜಯ್ ದತ್ ನಾಲ್ಕನೇ ಬಾರಿ ಸಪ್ತಪದಿಯನ್ನು ತುಳಿದಿದ್ದಾರೆ. ಹಾಗಂಥ, ಸಂಜಯ್ ದತ್ ಈ ವಯಸ್ಸಿನಲ್ಲಿ ಯಾರೋ ಬೀಸಿದ ಮೋಹದ ಜಾಲದಲ್ಲಿ ಸಿಲುಕಿದ್ದಾರೆ ಎಂದಾಗಲಿ, ತಮ್ಮ ಪತ್ನಿ ಮಾನ್ಯತಾ ಅವರಿಗೆ ಸಂಜಯ್ ದತ್ ಮೋಸ ಮಾಡಿದರು ಎಂದಾಗಲಿ ಅಥವಾ ಮಾನ್ಯತಾ ಅವರಿಗೆ ವಿಚ್ಛೇದನವನ್ನು ನೀಡಿದ್ದಾರೆ ಎಂದು ಅಂದುಕೊಳ್ಳುವಂತೆ ಇಲ್ಲ. ಯಾಕೆಂದರೆ ಸಂಜಯ್ ದತ್ ಮತ್ತೊಮ್ಮೆ ಮದ್ವೆಯಾಗಿರುವುದು ಬೇರೆ ಯಾರ ಜೊತೆಯೂ ಅಲ್ಲ ಬದಲಿಗೆ ಅವರ ಪತ್ನಿ ಮಾನ್ಯತಾ ದತ್ ಅವರ ಜೊತೆಯೇ ಎನ್ನುವುದು ವಿಶೇಷ.
ತಮ್ಮ ಮದುವೆಯ ಹದಿನಾರನೇ ವಾರ್ಷಿಕೋತ್ಸವದ ಪ್ರಯುಕ್ತ, ಸಂಜಯ್ ದತ್ ತಮ್ಮ ಪ್ರೀತಿಯ ಮಡದಿ ಮಾನ್ಯತಾ ಅವರ ಜೊತೆ ಮತ್ತೊಮ್ಮೆ ಸಪ್ತಪದಿಯನ್ನು ತುಳಿದಿದ್ದಾರೆ. ಕೇಸರಿ ಬಣ್ಣದ ಧೋತಿ ಮತ್ತು ಕುರ್ತಾ ಧರಿಸಿ ಹಣೆಯ ಮೇಲೆ ಕುಂಕುಮ ಹಂಚಿಕೊಂಡು ಮಾನ್ಯತಾ ಅವರ ಜೊತೆ ಅಗ್ನಿಯ ಸುತ್ತ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಂಜಯ್ ದತ್ ಅವರಿಗೆ ಅನೇಕರು ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನು ಕೋರುತ್ತಿದ್ದಾರೆ.
ಅಂದ್ಹಾಗೇ ಸಂಜಯ್ ದತ್ 2008ರಲ್ಲಿ ಗೋವಾದಲ್ಲಿ ಮಾನ್ಯತಾ ಅವರ ಜೊತೆ ಮದುವೆಯಾಗಿದ್ದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಇಬ್ಬರಿಗೆ ಅವಳಿ ಮಕ್ಕಳಿದ್ದಾರೆ. ಶಹ್ರಾನ್ ದತ್ ಮತ್ತು ಇಕ್ರಾ ದತ್ ಎಂಬ ಮಗ ಮತ್ತು ಮಗಳನ್ನು ಈ ಜೋಡಿ ಹೊಂದಿದ್ದಾರೆ. ಇನ್ನೂ ಮಾನ್ಯತಾ ಅವರನ್ನು ಮದುವೆಯಾಗುವ ಮುನ್ನ ಸಂಜಯ್ ದತ್ ರಿಚಾ ಶರ್ಮಾ ಅವರನ್ನು 1987ರಲ್ಲಿ ಮದುವೆಯಾಗಿದ್ದರು. ಆದರೆ ರೀಚಾ ಶರ್ಮಾ 1996ರಲ್ಲಿ ಬ್ರೈನ್ ಟ್ಯೂಮರ್‌ನಿಂದಾಗಿ ಇಹಲೋಕ ತ್ಯಜಿಸಿದರು. ಇವರಿಗೆ ತ್ರಿಶಲಾ ದತ್ ಎಂಬ ಮಗಳಿದ್ದು ಅವರು ಬಣ್ಣದ ಪ್ರಪಂಚದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಪ್ರಸ್ತುತ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ರಿಚಾ ಶರ್ಮಾ ಅವರ ಅಗಲಿಕೆಯ ನಂತರ ಮಾಡೆಲ್ ಮತ್ತು ಗಗನ ಸಖಿ ರಿಯಾ ಪಿಳ್ಳೈ ಅವರನ್ನು 1998ರಲ್ಲಿ ಸಂಜಯ್ ದತ್ ಮದುವೆಯಾದರು. ಆದರೆ. ಈ ಸಂಬಂಧ ಹತ್ತು ವರ್ಷದ ನಂತರ ಮುರಿದು ಬಿತ್ತು. 2008ರಲ್ಲಿ ಸಂಜಯ್ ದತ್ ರಿಯಾ ಅವರಿಂದ ದೂರವಾದರು. ಅದೇ ವರ್ಷ ಮಾನ್ಯತಾ ಅವರ ಜೊತೆ ಹೊಸ ಬದುಕನ್ನು ಸಂಜಯ್ ದತ್ ಆರಂಭ ಮಾಡಿದರು.
ಅಲ್ಲಿಂದ ಇಲ್ಲಿಯವರೆಗೆ ಇಬ್ಬರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹದಿನಾರು ವಸಂತಗಳನ್ನು ಜೊತೆಯಾಗಿ ಪೂರೈಸಿದ್ದಾರೆ. ಇನ್ನೂ 2013ರಲ್ಲಿ ಸಂಜಯ್ ದತ್ ಜೈಲುಪಾಲಾದಾಗ ಪತಿಯನ್ನು ಹೊರ ಕರೆತರಲು ಮಾನ್ಯತಾ ದತ್ ಅನೇಕ ಕಸರತ್ತು ಮಾಡಿದ್ದರು. 2020ರಲ್ಲಿ ಸಂಜಯ್ ದತ್ ಕ್ಯಾನ್ಸರ್‌ಗೊಳಗಾದಾಗ ಕೂಡ ಕುಗ್ಗದೇ ಸಂಜಯ್ ದತ್ ಗೆ ಆತ್ಮ ವಿಶ್ವಾಸವನ್ನು ತುಂಬಿ ಅವರ ಜೊತೆ ಬಂಡೆಗಲ್ಲಿನಂತೆ ನಿಂತಿದ್ದರು. ಉಳಿದಂತೆ ಸಂಜಯ್ ದತ್ ಸದ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿ ಜೊತೆ ಕನ್ನಡ ಸೇರಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೂಡ ತಮ್ಮನ್ನು ತಾವು ತೋಡಗಿಸಿಕೊಂಡಿದ್ಧಾರೆ.


Click it and Unblock the Notifications











