Munna is Back: ಹಿರಾನಿ ನಿರ್ದೇಶನದಲ್ಲಿ ಮತ್ತೆ ಒಂದಾದ ಮುನ್ನಾ- ಸರ್ಕ್ಯೂಟ್.. ಪ್ರೋಮೊ ಶೂಟ್.. ಆದ್ರೆ..
ಬಾಲಿವುಡ್ ನಟ ಸಂಜಯ್ ದತ್ ಹಾಗೂ ಅರ್ಷದ್ ವಾರ್ಸಿ ಮತ್ತೆ ಒಂದಾಗಿದ್ದಾರೆ. ರಾಜ್‌ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಇದೇ ಕಾಂಬಿನೇಷನ್‌ನಲ್ಲಿ 'ಮುನ್ನಾಭಾಯ್ ಎಂಬಿಬಿಎಸ್', 'ಲಗೆ ರಹೋ ಮುನ್ನಾಭಾಯ್' ಸಿನಿಮಾಗಳು ಬಂದು ಸೂಪರ್ ಹಿಟ್ ಆಗಿತ್ತು. ಮುನ್ನಾಭಾಯ್, ಸರ್ಕ್ಯೂಟ್ ಗೆಟಪ್‌ನಲ್ಲೇ ಸಂಜುಬಾಬಾ, ಅರ್ಷದ್ ದರ್ಶನ ಕೊಟ್ಟಿದ್ದಾರೆ.
ಸಂಜಯ್ ದತ್ ಹಾಗೂ ಅರ್ಷನ್ ಇಬ್ಬರೂ ಮುನ್ನಾಭಾಯ್, ಸರ್ಕ್ಯೂಟ್ ಅವತಾರದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇನ್ನು ಇವರಿಬ್ಬರನ್ನು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಒಟ್ಟಿಗೆ ಸೇರಿಸಿರೋದನ್ನು ವಿಡಿಯೋದಲ್ಲಿ ನೋಡಬಹುದು. ಇದ್ದಕ್ಕಿದಂತೆ ಈ ವಿಡಿಯೋ ವೈರಲ್ ಆಗ್ತಿದ್ದು 'ಮುನ್ನಾಭಾಯ್-3' ಸಿನಿಮಾ ಬಗ್ಗೆ ಊಹಾಪೋಹ ಹುಟ್ಟಾಕ್ಕಿದೆ.

20 ವರ್ಷಗಳ ಹಿಂದೆ ಬಂದಿದ್ದ 'ಮುನ್ನಾಭಾಯ್ ಎಂಬಿಬಿಎಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಕಾಮಿಡಿ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡಿತ್ತು. ಮುಂದೆ ತೆಲುಗಿನಲ್ಲಿ ಚಿರಂಜೀವಿ, ತಮಿಳಿನಲ್ಲಿ ಕಮಲ್ ಹಾಸನ್, ಕನ್ನಡದಲ್ಲಿ ಉಪೇಂದ್ರ ರೀಮೆಕ್ ಮಾಡಿದ್ದರು. ಅದರ ಮುಂದುವರೆದ ಭಾಗ ಎನ್ನುವಂತೆ 2006ರಲ್ಲಿ 'ಲಗೆ ರಹೋ ಮುನ್ನಾಭಾಯ್' ಸಿನಿಮಾ ಬಂದು ಒಂದು ರೇಂಜ್‌ಗೆ ಸಕ್ಸಸ್ ಕಂಡಿತ್ತು. ಚಿರಂಜೀವಿ ಮತ್ತೆ ಈ ಚಿತ್ರವನ್ನು ರೀಮೆಕ್ ಮಾಡಿದ್ದರು.
ರಾಜ್‌ಕುಮಾರ್ ಹಿರಾನಿಗೆ ಮುನ್ನಾಭಾಯ್ ಸೀರಿಸ್ ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ 'ಮುನ್ನಾಭಾಯ್ ಚಲೇ ಅಮೆರಿಕಾ' ಹೆಸರಿನಲ್ಲಿ ಸಿನಿಮಾ ಬರೋದಾಗಿ ದೊಡ್ಡಮಟ್ಟದಲ್ಲಿ ಸುದ್ದಿ ಆಗಿತ್ತು. ಸಣ್ಣ ಪ್ರೋಮೊ ಕೂಡ ಬಂದಿತ್ತು. ಆದರೆ ಸಿನಿಮಾ ಮಾಡಲು ಹಿರಾನಿ ಸಾಕಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ಸದ್ಯ ನಿರ್ದೇಶಕರು ಶಾರುಖ್ ಖಾನ್ ನಟನೆಯ 'ಡಂಕಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಡಂಕಿ' ಸಿನಿಮಾದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತೆ ಸಂಜಯ್ ದತ್ ಹಾಗೂ ಅರ್ಷದ್ ವಾರ್ಸಿ ಇಬ್ಬರನ್ನು ಸೇರಿಸಿ, ಸ್ಪೆಷಲ್ ಶೂಟ್ ಮಾಡಿದ್ದಾರೆ. ಇಬ್ಬರು ಮತ್ತೆ ಅದೇ ಗೆಟಪ್‌ನಲ್ಲಿ ಕ್ಯಾಮರಾ ಮುಂದೆ ಬಂದು ಕಮಾಲ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು 'ಮುನ್ನಾಭಾಯ್'-3 ಸಿನಿಮಾ ಪ್ರೋಮೊ ಶೂಟ್ ಆಗಿದೆ ಎಂದುಕೊಂಡಿದ್ದಾರೆ. ಆದರೆ ಅಸಲಿ ಕತೆ ಬೇರೆನೇ ಇದೆ.
ಅಂದಹಾಗೆ ಇದು 'ಮುನ್ನಾಭಾಯ್'-3 ಅನೌನ್ಸ್‌ಮೆಂಟ್ ಪ್ರೋಮೊ ಶೂಟ್ ಅಲ್ಲ ಬದಲಿಗೆ 'ಡಂಕಿ' ಸಿನಿಮಾ ಚಿತ್ರೀಕರಣ ಎನ್ನಲಾಗ್ತಿದೆ. 'ಡಂಕಿ' ಚಿತ್ರದಲ್ಲಿ ಸಂಜಯ್ ದತ್ ಹಾಗೂ ಅರ್ಷದ್ ವಾರ್ಸಿ ತಮ್ಮ ಐಕಾನಿಕ್ ರೋಲ್‌ಗಳಲ್ಲಿ ಅತಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಅಂದ್ರೆ 'ಡಂಕಿ' ಚಿತ್ರದಲ್ಲಿ ಮುನ್ನಾಭಾಯ್ ಹಾಗೂ ಸರ್ಕ್ಯೂಟ್ ಸ್ಪೆಷಲ್ ಝಲಕ್ ಇರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಅಭಿಮಾನಿಗಳು ಮಾತ್ರ 'ಮುನ್ನಾಭಾಯ್'- 3 ಚಿತ್ರಕ್ಕಾಗಿ ಕಾಯುತ್ತಿದ್ದಾರೆ.
ವಿಭಿನ್ನ ಟೈಟಲ್‌ನಿಂದಲೇ 'ಡಂಕಿ' ಕುತೂಹಲ ಮೂಡಿಸಿದೆ. ಮುನ್ನಾಭಾಯ್ ಸರಣಿ, ತ್ರೀ ಈಡಿಯಟ್ಸ್, ಪಿಕೆ, ಸಂಜು ರೀತಿ ಸೂಪರ್ ಹಿಟ್ ಸಿನಿಮಾಗಳ ಬಳಿಕ ರಾಜ್‌ಕುಮಾರ್ ಹಿರಾನಿ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ನಿರ್ದೇಶನದ ಜೊತೆಗೆ ಚಿತ್ರಕ್ಕೆ ಬಂಡವಾಳ ಕೂಡ ಹೂಡುತ್ತಿದ್ದಾರೆ. ಡಿಸೆಂಬರ್ 22ಕ್ಕೆ ಕ್ರಿಸ್‌ಮಸ್ ಸಂಭ್ರಮದಲ್ಲಿ 'ಡಂಕಿ' ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.
ಇನ್ನು 'KGF'-2 ಬಳಿಕ ಸಂಜಯ್ ದತ್ ಸೌತ್ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ನಟಿಸ್ತಿದ್ದಾರೆ. ಈಗಾಗಲೇ ತಮಿಳಿನ 'ಲಿಯೋ' ಚಿತ್ರದಲ್ಲಿ ನಟಿಸಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ 'KD' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಪ್ರಭಾಸ್ ಜೊತೆ 'ರಾಜಾ ಡೀಲಕ್ಸ್' ಚಿತ್ರದಲ್ಲೂ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











