Sanjay Gadhvi: ಆತ್ಮೀಯ ಗೆಳೆಯನ ಅಗಲಿಕೆಗೆ ಸಂತಾಪ ಸೂಚಿಸಿದ 'ಧೂಮ್' ಸಿನಿಮಾ ಸ್ಟಾರ್ ನಟರು
ಧೂಮ್ ಮತ್ತು ಧೂಮ್ 2 ನಂತಹ ಸೂಪರ್ ಹಿಟ್ ಚಿತ್ರಗಳಿಗ್ ಆಕ್ಷನ್ ಕಟ್ ಹೇಳಿದ್ದ ಬಾಲಿವುಡ್ ನಿರ್ದೇಶಕ ಸಂಜಯ್ ಗಧ್ವಿ ಅವರು ಭಾನುವಾರ (ನವೆಂಬರ್ 19) ರಂದು ನಿಧನರಾದರು. ವರದಿಯ ಪ್ರಕಾರ, ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. 56 ವರ್ಷ ವಯಸ್ಸಿನ ನಿರ್ದೇಶಕರ ಅಕಾಲಿಕ ಅಗಲಿಕೆ ಇಡೀ ಚಿತ್ರರಂಗವನ್ನು ಶೋಕಕ್ಕೆ ನೂಕಿದೆ.
ಯಶ್ ರಾಜ್ ಫಿಲ್ಮ್ಸ್ ನ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಅವರು, ಖ್ಯಾತಿ ಗಳಿಸಿದ್ದು, ಧೂಮ್ ಮತ್ತು ಧೂಮ್ 2 ಸಿನಿಮಾಗಳಿಂದ. ಸಿನಿಮಾದಲ್ಲಿ ಅವರ ಜೊತೆಗೆ ಕೆಲಸ ಮಾಡಿದ್ದ ನಟ ಹೃತಿಕ್ ರೋಷನ್, ಜಾನ್ ಅಬ್ರಹಾಂ ಮತ್ತು ಅಭಿಷೇಕ್ ಬಚ್ಚನ್ ಅಗಲಿದ ಗೆಳೆಯನಿಗೆ ಅಂತಿಮ ವಿದಾಯ ಹೇಳಿದ್ದಾರೆ.

ಆತ್ಮೀಯ ಸ್ನೇಹಿತನ ಅಗಲಿಕೆಯಿಂದ ತೀವ್ರ ದುಃಖವಾಗಿದೆ: ಹೃತಿಕ್ ರೋಷನ್
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟ ಹೃತಿಕ್ ರೋಷನ್ ಧೂಮ್ ಸಿನಿಮಾ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಹೃತಿಕ್ ರೋಷನ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ನೋವಿನ ಸಂತಾಪ ಸೂಚಿಸಿದ್ದಾರೆ. ಧೂಮ್ 2 ಸಿನಿಮಾ ಸೆಟ್‌ಗಳ ನೆನಪುಗಳನ್ನು ಹಂಚೊಕೊಂಡಿದ್ದಾರೆ.
"ನನ್ನ ಆತ್ಮೀಯ ಸ್ನೇಹಿತ ಸಂಜಯ್ ಗಧ್ವಿ ಅವರ ಅಗಲಿಕೆಯಿಂದ ತೀವ್ರ ದುಃಖವಾಗಿದೆ. ನಾವು ಜೊತೆಯಾಗಿ ಹಂಚಿಕೊಂಡ ಕ್ಷಣಗಳಿಗೆ ಎಂದೆಂದಿಗೂ ಕೃತಜ್ಞರಾಗಿರುತ್ತೇವೆ. ಅವರು ನನ್ನಲ್ಲಿರುವ ಆರ್ಯನ್ ಅನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವನಿಲ್ಲದೆ ಆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ" ಎಂದಿದ್ದಾರೆ.
ಸಂತಾಪ ಸೂಚಿಸಿದ್ದ ಜಾನ್ ಅಬ್ರಹಾಂ ಮತ್ತು ಅಭಿಷೇಕ್ ಬಚ್ಚನ್
ಇನ್ನು ಧೂಮ್ ಸೀಕ್ವೆಲ್‌ಗಳಲ್ಲಿ ಪ್ರಮುಖ ಪಾತ್ರವಾಗಿರುವ ನಟ ಅಭಿಷೇಕ್ ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಟಿಪ್ಪಣಿ ಹಂಚಿಕೊಂಡಿದ್ದಾರೆ. ಧೂಮ್ ಒಂದರಲ್ಲಿ ನಟಿಸಿದ್ದ ನಟ ಜಾನ್ ಅಬ್ರಹಾಂ ಕೂಡ ಸಂಜಯ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಅಭಿಷೇಕ್ ಬಚ್ಚನ್, ಸಂಜಯ್ ಮತ್ತು ಉದಯ್ ಚೋಪ್ರಾ ಅವರೊಂದಿಗಿನ ಥ್ರೋಬ್ಯಾಕ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಅಭಿಷೇಕ್ ಬಚ್ಚನ್ ಟಿಪ್ಪಣಿ ಹೀಗಿದೆ "ನಾವು ದಕ್ಷಿಣ ಆಫ್ರಿಕಾದಲ್ಲಿ ಧೂಮ್ 2 ಸಿನಿಮಾ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡುವಾಗ ನಾನು ಸಂಜಯ್ ಅವರ ಈ ಫೋಟೋವನ್ನು ತೆಗೆದುಕೊಂಡೆ. ನಾವು ಧೂಮ್ ಮತ್ತು ಧೂಮ್ 2 ಒಟ್ಟಿಗೆ 2 ಚಿತ್ರಗಳನ್ನು ಮಾಡಿದ್ದೇವೆ. ಸಂಜು, ಕಳೆದ ವಾರ ನಾನು ನಿಮ್ಮೊಂದಿಗೆ ಮಾತನಾಡುವಾಗ ಮತ್ತು ನೆನಪುಗಳನ್ನು ಮೆಲುಕು ಹಾಕಿದಾಗ ನಾನು ಈ ರೀತಿಯ ಪೋಸ್ಟ್ ಅನ್ನು ಬರೆಯಬೇಕಾಗುತ್ತದೆ ಎಂದು ನನ್ನ ಕನಸುಗಳಲ್ಲಿಯೂ ನಾನು ಊಹಿಸಿರಲಿಲ್ಲ. ನಾನು ನಂಬಲಾಗದಷ್ಟು ಆಘಾತಕ್ಕೊಳಗಾಗಿದ್ದೇನೆ" ಎಂದಿದ್ದಾರೆ.
"ನಾನು ನಂಬದಿದ್ದರೂ ನಿನಗೆ ನನ್ನ ಮೇಲೆ ನಂಬಿಕೆ ಇತ್ತು. ನೀವು ನನಗೆ ನನ್ನ ಮೊದಲ ಹಿಟ್ ಕೊಟ್ಟಿದ್ದೀರಿ. ನಾನು ಅದನ್ನು ಎಂದಿಗೂ ಮರೆಯಲಾರೆ ಅಥವಾ ಅದು ನನಗೆ ಎಷ್ಟು ಮುಖ್ಯ ಎಂಬುದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ನಿಮ್ಮ ಸ್ನೇಹವನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ರೆಸ್ಟ್ ಇನ್ ಪೀಸ್ ಬ್ರದರ್" ಎಂದು ನೋವು ವ್ಯಕ್ತಪಡಿಸಿದ್ದಾರೆ.
ಸಂಜಯ್ ಧನ್ವಿ
ಭಾನುವಾರ ಬೆಳಗ್ಗೆ ವಾಕಿಂಗ್ ಮಾಡುವಾಗ ನಿರ್ದೇಶಕ ಸಂಜಯ್ ಧನ್ವಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು ಎಂದು ಹಲವಾರು ವರದಿಗಳು ಹೇಳುತ್ತವೆ. ಅವರನ್ನು ತಕ್ಷಣವೇ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದುರದೃಷ್ಟವಶಾತ್, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅವರ ವಾಕಿಂಗ್ ಮಾಡುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
ಸಂಜಯ್ ಧನ್ವಿ ಅವರು ಧೂಮ್ ಸರಣಿಯ ಹೊರತಾಗಿ, ತೇರೆ ಲಿಯೇ, ಮೇರೆ ಯಾರ್ ಕಿ ಶಾದಿ ಹೈ, ಕಿಡ್ನಾಪ್ ಮತ್ತು ಅಜಬ್ ಗಜಾಬ್ ಲವ್ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. 2020 ರಲ್ಲಿ ಬಿಡುಗಡೆಯಾದ ಆಪರೇಷನ್ ಪರಿಂದೇ ಅವರ ಕೊನೆಯ ಚಿತ್ರ.


Click it and Unblock the Notifications











