ಅರಳುವ ಮುನ್ನವೇ ಮುದುಡಿತು ದಂಗಲ್ ಚೆಲುವೆಯ ಪ್ರೀತಿ ; ಮುರಿದು ಹೋಯ್ತು ಸಿತಾರದ ತಂತಿ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಇಂದು ಪ್ರೀತಿ ಕೇವಲ ಸುಂದರ ಸುಮಧುರ ಭಾವನೆಯಾಗಿ ಮಾತ್ರ ಉಳಿದಿಲ್ಲ. ಬದಲಿಗೆ ಬಹುತೇಕರ ಪಾಲಿಗೆ ಪ್ರೀತಿ ಸಾರ್ವಜನಿಕವಾಗಿ ಪ್ರದರ್ಶನಕ್ಕಿಟ್ಟ ವಸ್ತುವಾಗಿದೆ. ಇಂದಿನ 5G ಯುಗದಲ್ಲಿ ಲೈಕ್ ಮತ್ತು ಪೋಸ್ಟ್‌ಗಳ ಆಧಾರದ ಮೇಲೆ ಪ್ರೀತಿಯನ್ನು ಅಳೆಯಲಾಗುತ್ತದೆ.
ಅಗಾಧ ಪ್ರೀತಿಗಿಂತ ಹೆಚ್ಚಾಗಿ ವೈಭವದ ಪ್ರದರ್ಶನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಯುವಸಮೂಹದ ಪಾಲಿಗೆ ಪ್ರೀತಿ ಎನ್ನುವುದು ಕೇವಲ ಟೈಮ್ ಪಾಸ್ ಆಗಿ ಬದಲಾಗಿದ್ದು ಸೋಶಿಯಲ್ ಮೀಡಿಯಾಗಳ ಕಣ್ತಪ್ಪಿಸಿ ಬದುಕುವುದು ಕಷ್ಟವಾಗಿದೆ. ಈ ಮಾತು ಚಿತ್ರರಂಗಕ್ಕೂ ಕೂಡ ಅನ್ವಯವಾಗುತ್ತೆ.

ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಪ್ರೇಮ ಕಥೆ ಮತ್ತು ವ್ಯಥೆಗಳು ಸೋಶಿಯಲ್ ಮೀಡಿಯಾ ಮೂಲಕ ಜಗಜ್ಜಾಹೀರಾಗಿವೆ. ಆ ಪೈಕಿ ಸಾನ್ಯಾ ಮಲ್ಹೋತ್ರಾ ಅವರ ಲವ್ & ಬ್ರೇಕಪ್ ಕಥೆ ಕೂಡ ಒಂದು ಎನ್ನೋದು ಸದ್ಯಕ್ಕೆ ಗುಲ್ಲಾಗಿರುವ ಸುದ್ದಿ.
ಹೌದು. ಸಾನ್ಯಾ ಮಲ್ಹೋತ್ರಾ.. ಬಾಲಿವುಡ್‌ನ ಚೆಲುವೆ. ಬ್ಯಾಲೆ ಡ್ಯಾನ್ಸರ್ ಆಗಿ ಮುಂಬೈಗೆ ಬಂದ ಸಾನ್ಯಾ ಮಲ್ಹೋತ್ರಾ ಅವರ ಬದುಕು ''ದಂಗಲ್'' ಚಿತ್ರದ ಮೂಲಕ ಮತ್ತೊಂದು ಮಗ್ಗಲಿನತ್ತ ಹೊರಳಿತು.
ಇಲ್ಲಿಂದಾಚೆ ''ಬದಾಯಿ ಹೋ''.. ''ಲುಡೋ''.. ''ಪಠಾಕಾ''.. ''ಸ್ಯಾಮ್ ಬಹದ್ದೂರ್''.. ''ಜವಾನ್''.. '' ಕಠಲ್'' ವೆಬ್ ಸರಣಿ ಹೀಗೆ ಒಂದಾದ ಮೇಲೊಂದರಂತೆ ಚಿತ್ರ ಮತ್ತು ವೆಬ್ ಸರಣಿಗಳನ್ನು ಮಾಡಿಕೊಂಡು ಬಂದ ಸಾನ್ಯಾ ಇಂದು ಬಿಡುವಿರದ ನಟಿ.
ಇಂಥಾ ಸಾನ್ಯಾ ಮಲ್ಹೋತ್ರಾ ಸಿತಾರ್ ವಾದಕ ರಿಷಭ್ ರಿಖಿರಾಮ್ ಶರ್ಮಾ ಅವರ ಜೊತೆ ಪ್ರೇಮದ ಅಮಲೇರಿಸಿಕೊಂಡಿದ್ದಾರೆ ಎನ್ನುವ ಅನುಮಾನ ಎರಡು ವರ್ಷದಿಂದ ಹಲವರಲ್ಲಿತ್ತು. ಇದಕ್ಕೆ ಪೂರಕವಾಗಿ ಇಬ್ಬರ ನಡಾವಳಿ ಕೂಡ ಹಾಗೇ ಇತ್ತು.

ಎಲ್ಲರಂತೆ ಇವರು ಕೂಡ ಕದ್ದು ಮುಚ್ಚಿ ಓಡಾಡುವ ಪ್ರಯತ್ನ ಮಾಡಿದರು. ಚಿತ್ರರಂಗದ ಉಳಿದವರ ಫಾರ್ಮುಲಾ ಅನುಸರಿಸಿದರು. ಒಂದೇ ಸ್ಥಳದಿಂದ ಬೇರೆ ಬೇರೆ ಫೋಟೋಗಳನ್ನು ಹಂಚಿಕೊಂಡರು. ಇವರ ಪೋಸ್ಟ್‌ಗೆ ಅವರು ಅವರ ಪೋಸ್ಟ್‌ಗೆ ಇವರು ಕಾಮೆಂಟ್ ಮಾಡುತ್ತಿದ್ದರು.
ಆದರೆ 2025ರಲ್ಲಿ ಒಂದೇ ಕಾರ್ಯಕ್ರಮದಲ್ಲಿ ಒಬ್ಬನೇ ವ್ಯಕ್ತಿಯ ಜೊತೆ ಇಬ್ಬರು ಸೆಲ್ಪಿ ಕ್ಲಿಕಿಸಿಕೊಂಡರು. ತಮಗೆ ಗೊತ್ತಿಲ್ಲದಂತೆ ತಪ್ಪು ಮಾಡಿದರು. ಈ ಮೂಲಕ ಸಿಕ್ಕಿ ಬಿದ್ದರು. ಅಲ್ಲಿಂದ ಇಲ್ಲಿಯವರೆಗೆ ಇವರ ಸಂಬಂಧ ತೀವೃ ಚರ್ಚೆಗೆ ಗ್ರಾಸವಾಗಿತ್ತು.
ಸದ್ಯದ ಸಮಾಚಾರ ಅಂದರೆ ಇವರ ಈ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಊರಲೆಲ್ಲಾ ಗುಲ್ಲಾಗಿದೆ. ಈ ಮಾತುಗಳಿಗೆ ಸಾಕ್ಷಿ ಎಂಬಂತೆ ಇನ್ ಸ್ಟಾಗ್ರಾಮ್ ನಲ್ಲಿ ಇಬ್ಬರು ಪರಸ್ಪರ ಅನ್ ಫಾಲೋ ಮಾಡಿರುವ ವಿಚಾರವನ್ನು ಕೂಡ ನಮ್ಮ ಜನ ಕಂಡು ಹಿಡಿದಿದ್ದಾರೆ.
ಇನ್ನೂ ಆಗಲೇ ಹೇಳಿದಂತೆ ಸಂಬಂಧಗಳ ಸುಳಿವನ್ನು ಸೋಶಿಯಲ್ ಮೀಡಿಯಾ ನಿರ್ಧಾರ ಮಾಡುವ ಕಾಲ ಇದು. ಹೀಗಾಗಿಯೇ ಹಲವರು ಈಗ ಸಾನ್ಯಾ ಮಲ್ಹೋತ್ರಾ ಬೆನ್ನು ಬಿದ್ದಿದ್ದಾರೆ. ಬ್ರೇಕಪ್ ಮತ್ತು ಲವ್ ಕುರಿತ ಪ್ರಶ್ನೆ ಕೇಳುತ್ತಿದ್ದಾರೆ.
''ಹಿಂದೂಸ್ತಾನ್ ಟೈಮ್ಸ್'' ವರದಿಯ ಪ್ರಕಾರ ರಿಷಭ್ ಈಗಾಗಲೇ ಈ ಸಂಬಂಧದಿಂದ ಹೊರಬಂದು, ಮತ್ತೊಬ್ಬ ಚೆಲುವೆಯ ಸಾಂಗತ್ಯ ಬೆಳೆಸಿಕೊಂಡಿದ್ದಾರೆ. ಈ ಬಾರಿ ತಮ್ಮ ಈ ಲವ್ ಮ್ಯಾಟರ್ ತುಂಬಾನೇ ಗೌಪ್ಯವಾಗಿಡುವ ಪ್ರಯತ್ನ ಮಾಡುತ್ತಿದ್ದಾರೆ.
ಇನ್ನುಳಿದಂತೆ ರಿಷಭ್ ವಿಶ್ವವಿಖ್ಯಾತ ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಅವರ ಕೊನೆಯ ಶಿಷ್ಯರಲ್ಲಿ ಒಬ್ಬರು.ದೆಹಲಿಯ ಪ್ರಸಿದ್ಧ ರಿಖಿರಾಮ್ ಸಂಗೀತ ಮನೆತನಕ್ಕೆ ಸೇರಿದವರು. ಇವರ ತಂದೆ ಸಂಜಯ್ ರಿಖಿರಾಮ್ ಶರ್ಮಾ ಅವರು ದೆಹಲಿಯ ಖ್ಯಾತ ವಾದ್ಯ ತಯಾರಕರು. ಪಂಡಿತ್ ರವಿಶಂಕರ್, ಪಂಡಿತ್ ಶಿವಕುಮಾರ್ ಶರ್ಮಾ ಅವರಂತಹ ದಿಗ್ಗಜರಿಗೆ ರಿಷಭ್ ಕುಟುಂಬದವರೇ ಸಿತಾರ್ ಮತ್ತು ಇತರ ವಾದ್ಯಗಳನ್ನು ತಯಾರಿಸಿಕೊಡುತ್ತಿದ್ದರು.ಹೀಗಾಗಿ ಸಂಗೀತ ಇವರ ರಕ್ತದಲ್ಲಿಯೇ ಇದೆ.
ಸದ್ಯ ಸಾನ್ಯಾ ಮಲ್ಹೋತ್ರಾ ಮತ್ತು ರಿಷಭ್ ರಿಖಿರಾಮ್ ಶರ್ಮಾ ಅವರ ಬ್ರೇಕಪ್ ವಿಚಾರ ಚರ್ಚೆಯಲ್ಲಿದ್ದು ಇಬ್ಬರು ತಮಮ್ ಈ ವೈಯಕ್ತಿಕ ಜೀವನದ ಕುರಿತ ಸುದ್ದಿಗೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.


Click it and Unblock the Notifications











