ದೈಹಿಕ ಹಲ್ಲೆ, ಮಕ್ಕಳ ಜೊತೆ ಮನೆಯಿಂದ ಹೊರಬಂದ ಖ್ಯಾತ ಗಾಯಕಿ ; ನ್ಯಾಯಾಲಯದಲ್ಲಿ ಹೊರ ಬಿತ್ತು ಬೆಚ್ಚಿ ಬೀಳಿಸುವ ವಿವರ
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಹಣ, ಅಂತಸ್ತು, ಕೀರ್ತಿ, ಎಲ್ಲವೂ ಇರುವ ಕೆಲ ಸೆಲೆಬ್ರೆಟಿಗಳ ಬದುಕಿನಲ್ಲಿ ಒಮ್ಮೊಮ್ಮೆ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರನ್ನು ಇವರು ಹೆಚ್ಚು ಪ್ರೀತಿಸುತ್ತಾರೋ? ಅತಿಯಾಗಿ ಮೋಹಿಸುತ್ತಾರೋ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ ? ಅವರೇ ಕಾಡಿಸಿ ಪೀಡಿಸಿ ನಿರಾಸೆಯನ್ನುಂಟು ಮಾಡುತ್ತಾರೆ.
ಇಷ್ಟೇ ಅಲ್ಲ ಹಲವು ನಾಯಕಿಯರು-ಗಾಯಕಿಯರು ಗಂಡನಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ. ನರಕಯಾತನೆ ಅನುಭವಿಸಿದ್ದಾರೆ. ನೋವು ಇನ್ನೂ ಸಹಿಸಲು ಸಾಧ್ಯ ಇಲ್ಲ ಎಂದುಕೊಂಡು ವಿಚ್ಚೇದನ ಪಡೆದಿದ್ದಾರೆ. ಮತ್ತೂ ಕೆಲವರು ಡಿವೋರ್ಸ್ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ತಮ್ಮ ಮೇಲಿನ ದೌರ್ಜನ್ಯದ ಕಥೆಯನ್ನು ಹೇಳಿ ಕಣ್ಣೀರಾಗುತ್ತಿದ್ದಾರೆ. ಉದಾಹರಣೆಗೆ ಸಪ್ನಾ ಚೌಧರಿ.

ಹೌದು, ಸಪ್ನಾ ಚೌಧರಿ.. ಹರಿಯಾಣದ ಖ್ಯಾತ ಗಾಯಕಿ. ಹರಿಯಾಣದ ಹಾಡುಗಳು ಇವತ್ತು ದೇಶವ್ಯಾಪಿ ಸದ್ದು ಮಾಡುತ್ತಿರುವುದರಲ್ಲಿ ಇವರ ಪಾಲು ಕೂಡ ಇದೆ.
ಬಡತನದ ಬೇಗೆಯಲ್ಲಿ ಬೆಂದು ಆರ್ಕೆಸ್ಟ್ರಾದಲ್ಲಿ ಹಾಡುತ್ತಾ, ಸ್ಟೇಜ್ ಮೇಲೆ ಕುಣಿಯುತ್ತಾ ಬದುಕಿನ ಬಂಡಿ ಎಳೆಯುತ್ತಿದ್ದ ಸಪ್ನಾ ಚೌಧರಿ ಬದುಕು ಅದೊಂದು ದಿನ ಬದಲಾಯ್ತು. ಇವರ ''ತೇರಿ ಆಖ್ಯಾ ಕಾ ಯೋ ಕಾಜಲ್'' ಹಾಡಿಗೆ ಕೇವಲ ಹರಿಯಾಣ ಮಾತ್ರವಲ್ಲ ಇಡೀ ಉತ್ತರ ಭಾರತ ಹುಚ್ಚೆದ್ದು ಕುಣಿದಿತ್ತು.
ಆ ನಂತರ ''ಗಬ್ಬನ್ ಪಾನಿ ನೇ ಚಾಲಿ''.. ''ಬದಲಿ ಬದಲಿ ಲಾಗೆ''.. ''ಥಡಾ ಭರ್ತಾರ್''.. ''ಚೀಜ್ ಲಾಜ್‌ವಾಬ್''.. ''ಇಂಗ್ಲೀಷ್ ಮೀಡಿಯಂ''.. ಹೀಗೆ ಹಲವು ಚಾರ್ಟ್ ಬಸ್ಟರ್ ಹಾಡುಗಳನ್ನು ನೀಡಿದ ಸ್ವಪ್ನಾ ಚೌಧರಿ ''ಬಿಗ್ ಬಾಸ್'' 11ನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದರು.
ಇಂಥಾ ಸಪ್ನಾ ಚೌಧರಿ ವಿಚ್ಚೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮ್ಮ ಪತಿ ವೀರ್ ಸಾಹು ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.ತಮ್ಮ ಪತಿ ವೀರ್ ಸಾಹು ತಮ್ಮ ಮೇಲೆ ಪದೇ ಪದೇ ದೈಹಿಕ ಹಲ್ಲೆ ನಡೆಸಿದ್ದು, ಸಾರ್ವಜನಿಕವಾಗಿ ತಮಗೆ ಅಪಮಾನ ಮಾಡುವ ಉದ್ದೇಶದಿಂದ ಗಲಾಟೆ ಮಾಡುತ್ತಿದ್ದರು ಎಂದು ಆರೋಪ ಮಾಡಿದ್ದಾರೆ.

ಸಪ್ನಾ ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆ ದೆಹಲಿಯ ದ್ವಾರಕಾ ಮಹಿಳಾ ಕೋರ್ಟ್‌ನಲ್ಲಿ ನಡೆದಿದ್ದು, ಸಪ್ನಾ ಪರ ವಕೀಲೆ ಪ್ರೀತಿ ಸಿಂಗ್ ಪತಿಯ ನಿರಂತರ ಕಿರುಕುಳದಿಂದ ಬೇಸತ್ತು, ಸಪ್ನಾ ತಮ್ಮ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಸದ್ಯ ಪತಿಯ ಮನೆಯನ್ನು ತೊರೆದಿದ್ದಾರೆ ಎಂದು ಹೇಳಿದ್ಧಾರೆ. ಅಲ್ಲದೆ, ಸಪ್ನಾ ಅವರ ಮುಂಬರುವ ಚಿತ್ರದ ಪ್ರೀಮಿಯರ್ ಶೋ ವೇಳೆ ಪತಿ ಬಂದು ಗಲಾಟೆ ಮಾಡಿ ಅವರ ಘನತೆಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ ತುರ್ತು ಕಾನೂನು ರಕ್ಷಣೆ ಅಗತ್ಯವಿದೆ ಎಂದು ವಾದ ಮಂಡಿಸಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಧೀಶರಾದ ನಿಧಿ ಸಿಂಗ್, ವೈದ್ಯಕೀಯ ವರದಿಯನ್ನು ಪರಿಶೀಲಿಸಿದ್ಧಾರೆ. ಸಪ್ನಾ ಚೌಧರಿ ಅವರಿಗಾದ ಗಾಯದ ಫೋಟೊಗಳನ್ನು ಕೂಡ ನೋಡಿರುವ ನ್ಯಾಯಾಧೀಶರು ಬೆದರಿಕೆ ಕರೆಯನ್ನು ಕೂಡ ಆಲಿಸಿದ್ದಾರೆ. ದಾಖಲೆಗಳ ಆಧಾರದ ಮೇಲೆ ಪತಿ ವೀರ್ ಸಾಹುಗೆ ಕಠಿಣ ನಿರ್ಬಂಧ ವಿಧಿಸಿದ್ದಾರೆ.
ಸಪ್ನಾ ಚೌಧರಿ ಅವರನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಬಾರದು, ಅವರ ನಿವಾಸ, ಕೆಲಸದ ಸ್ಥಳ ಅಥವಾ ಅವರ ಚಿತ್ರದ ಪ್ರೀಮಿಯರ್ ನಡೆಯುವ ಸ್ಥಳಕ್ಕೆ ಭೇಟಿ ನೀಡಬಾರದು ಎಂದು ನ್ಯಾಯಾಲಯ ಆದೇಶವನ್ನು ನೀಡಿದ್ದು, ಸಪ್ನಾ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ (SHO) ನಿರ್ದೇಶನ ನೀಡಿದೆ. ಪತಿ ಯಶವೀರ್ ಸಾಹು ಅವರಿಗೆ ಈ ಬಗ್ಗೆ ಸಮನ್ಸ್ ನೀಡಲಾಗಿದೆ.
ಪ್ರಕರಣದ ಮುಂದಿನ ವಿಚಾರಣೆ ಜುಲೈ 25 ರಂದು ನಡೆಯಲಿದ್ದು, ನ್ಯಾಯಾಲಯವು ಯಶವೀರ್ ಸಾಹು ಅವರಿಗೆ ಕಡ್ಡಾಯ ಹಾಜರಿಗೆ ಸೂಚಿಸಿದೆ. ವಿಚಾರಣೆಯ ಸಮಯದಲ್ಲಿ ಅವರು ಖುದ್ದು ನ್ಯಾಯಾಲಯಕ್ಕೆ ಬರಬೇಕು ಎಂದು ನ್ಯಾಯಾಲಯ ಹೇಳಿದೆ.
ಅಂದ್ಹಾಗೇ ಸಪ್ನಾ ಚೌಧರಿ ಮತ್ತು ಯಶ್‌ವೀರ್ ಸಾಹು ಅವರದ್ದು ಪಕ್ಕಾ ಲವ್ ಮ್ಯಾರೇಜ್.
ನಾಲ್ಕು ವರ್ಷ ಪ್ರೀತಿಸಿ 2020ರಲ್ಲಿ ಇಬ್ಬರು ರಿಜಿಸ್ಟರ್ ಮದುವೆಯಾಗಿದ್ದರು. ಇವರ ಪ್ರೇಮದ ಸಂಕೇತವಾಗಿ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಈಗ ಕೇವಲ ಆರೇ ವರ್ಷಕ್ಕೆ ಇವರ ದಾಂಪತ್ಯ ವಿಚ್ಚೇದನದ ಹಂತಕ್ಕೆ ತಲುಪಿದೆ.


Click it and Unblock the Notifications