Sara Ali Khan: ಅಮರ್‌ನಾಥ್ ಯಾತ್ರೆ ಕೈಗೊಂಡ ಸಾರಾ ಅಲಿ ಖಾನ್; ವಿಡಿಯೊ ವೈರಲ್
ತನ್ನ ನಟನೆ ಹಾಗೂ ಚಿತ್ರಗಳ ಆಯ್ಕೆಯ ವಿಚಾರದಿಂದ ಇತ್ತೀಚೆಗೆ ಟ್ರೋಲ್‌ಗಳಿಗಿಂತ ಹೆಚ್ಚು ಮೆಚ್ಚುಗೆಗಳನ್ನು ಪಡೆದುಕೊಳ್ಳು ಆರಂಭಿಸಿರುವ ನಟಿ ಸಾರಾ ಅಲಿ ಖಾನ್. ಹೌದು, ಆರಂಭದ ದಿನಗಳಲ್ಲಿ ಸೈಫ್ ಅಲಿ ಖಾನ್ ಪುತ್ರಿ ಸಾರಾ ನೆಪೊ ಕಿಡ್ ಎಂಬ ಟ್ಯಾಗ್ ಹೊಂದಿದ್ದರು.
ಆದರೆ ಈಗ ಸಾಲು ಸಾಲು ಒಳ್ಳೆಯ ಕಥೆಗಳಿರುವ ಚಿತ್ರಗಳನ್ನು ಆರಿಸಿಕೊಳ್ಳುವ ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ. ಅದರಲ್ಲಿಯೂ ಜೂನ್ 2ರಂದು ಬಿಡುಗಡೆಗೊಂಡ ಝರ ಹಟ್ಕೆ ಝರ ಬಚ್ಕೆ ಚಿತ್ರ ಸೂಪರ್ ಹಿಟ್ ಆಗಿದ್ದು, ಸಾರಾ ಅಲಿ ಖಾನ್ ನಟನೆ, ಡಾನ್ಸ್‌ಗೆ ಸಿನಿ ರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಚಿತ್ರ ಯಶಸ್ಸಿನ ಬಳಿಕ ಸಾರಾ ಅಲಿ ಖಾನ್ ಪ್ರವಾಸವನ್ನು ಕೈಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪ್ರವಾಸದಲ್ಲಿ ಸದ್ಯ ನಿರತರಾಗಿರುವ ಸಾರಾ ಅಲಿ ಖಾನ್ ಈ ಪ್ರವಾಸದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಹೀಗೆ ಜಮ್ಮ ಮತ್ತು ಕಾಶ್ಮೀರ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಸಾರಾ ಅಲಿ ಖಾನ್ ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಒಂದಾದ ಅಮರ್‌ನಾಥ್‌ಗೆ ಭೇಟಿ ನೀಡಿದ್ದಾರೆ. ಹೌದು, ನಟಿ ಸಾರಾ ಅಲಿ ಖಾನ್ ಅಮರ್‌ನಾಥ್ ಯಾತ್ರೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ ಸಾರಾ ಭದ್ರತೆಯ ನಡುವೆ ಅಮರ್‌ನಾಥ್ ಕಾಲ್ನಡಿಗೆ ಯಾತ್ರೆಯನ್ನು ಮಾಡುತ್ತಿದ್ದಾರೆ.
ಅಲ್ಲದೇ ಫೋಟೊವೊಂದೂ ಸಹ ಹೊರಬಿದ್ದಿದ್ದು, ಸಾರಾ ಅಲಿ ಖಾನ್ ಹಣೆಗೆ ವಿಭೂತಿ ಹಚ್ಚಿಸಿಕೊಂಡು ತ್ರಿಶೂಲ ಹಿಡಿದು ನಿಂತಿದ್ದಾರೆ. ಇನ್ನು ಈ ಕ್ಷೇತ್ರ ಮಾತ್ರವಲ್ಲದೇ ಇನ್ನೂ ಕೆಲ ಹಿಂದೂ ಪವಿತ್ರ ಸ್ಥಳಗಳಿಗೆ ಸಾರಾ ಅಲಿ ಖಾನ್ ಈ ಹಿಂದೆ ಭೇಟಿ ನೀಡಿದ್ದು ಸಾಕಷ್ಟು ಸುದ್ದಿಯಾಗಿತ್ತು.
ಝರ ಹಟ್ಕೆ ಝರ ಬಚ್ಕೆ ಚಿತ್ರ ಯಶಸ್ವಿಯಾದ ಬಳಿಕ ಚಿತ್ರದ ನಟ ವಿಕ್ಕಿ ಕೌಶಲ್ ಜತೆ ಗಣೇಶನ ದೇವಾಲಯಕ್ಕೂ ಸಹ ಭೇಟಿ ನೀಡಿದ್ದ ಸಾರಾ ಅಲಿ ಖಾನ್ "ಗಣಪತಿ ಬಪ್ಪ ಮೋರ್ಯ. ಎಲ್ಲದ್ದಕ್ಕೂ ಧನ್ಯವಾದಗಳು. ಶುಭ ಮಂಗಳ" ಎಂದು ಬರೆದುಕೊಂಡು ಗಣೇಶನಿಗೆ ಕೈ ಮುಗಿಯುತ್ತಾ ನಿಂತಿರುವ ಫೋಟೊವನ್ನು ಹಂಚಿಕೊಂಡಿದ್ದರು.
ಹೀಗೆ ಸಾರಾ ಅಲಿ ಖಾನ್ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವುದರ ಕುರಿತು ನೆಟ್ಟಿಗರು ಭಿನ್ನ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಅನೇಕರು ನಟಿಯ ಈ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ನಟಿ ಚಿತ್ರದ ಯಶಸ್ಸಿಗಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇನ್ನು ದೇವಾಲಯ ಮಾತ್ರವಲ್ಲದೇ ನಟಿ ಸಾರಾ ಅಲಿ ಖಾನ್ ಜಮ್ಮು ಕಾಶ್ಮೀರದ ಪ್ರವಾಸಿ ತಾಣಗಳಿಗೂ ಭೇಟಿ ನೀಡಿದ್ದಾರೆ. ಅಲ್ಲಿನ ಮಕ್ಕಳ ಜತೆ ಸಮಯ ಕಳೆದಿರುವ ಸಾರಾ ಆ ಜನರ ಜತೆ ಬೆರೆತು ಆ ಜನಗಳ ಹಾಗೆ ಊಟ ಸೇವಿಸಿ ಅವುಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











