ಒಂದೇ ಮನೆಗೆ ಸೊಸೆಯಾಗಿ ಹೋಗಲಿರುವ ಜಾಹ್ನವಿ ಕಪೂರ್ ಮತ್ತು ಸಾರಾ ಅಲಿ ಖಾನ್...?
ಈ ಸಿನಿಮಾದವರೇ ಹಾಗೇ. ಇವರ ಹೆಜ್ಜೆ ಮತ್ತು ಮೀನಿನ ಹೆಜ್ಜೆಯನ್ನ ಕಂಡು ಹಿಡಿಯಲು ಸಾಧ್ಯವೇ ಆಗುವುದಿಲ್ಲ. ಕೆಲವೊಮ್ಮೆ ಪ್ರಣಯ ಪಕ್ಷಿಗಳ ಹಾಗೆ ಜೊತೆ ಜೊತೆಯಾಗಿ ಸುತ್ತಾಡುತ್ತಾ, ಖಾಸಗಿ ಕಾರ್ಯಕ್ರಮಗಳಲ್ಲಿ ಎಲ್ಲರ ಕಣ್ಣುಕುಕ್ಕುವಂತೆ ಓಡಾಡುತ್ತಾ, ಇಲ್ಲ ಸಲ್ಲದ ಮಾತುಗಳು ಹೊರಬಿದ್ದರೂ ದಿವ್ಯ ಮೌನಕ್ಕೆ ಶರಣಾಗುವ ಈ ಬಣ್ಣದ ಮಂದಿ ಆ ನಂತರ ಮದುವೆ ಸುದ್ದಿಯನ್ನ ಕೊಡ್ತಾರೆ.
ಇನ್ನೂ ಕೆಲವರು ಯಾರ ಜೊತೆ ಓಡಾಡದೇ ಇದ್ದರೂ, ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗದೇ ಇದ್ದರೂ.. ಮದುವೆಯಾಗ್ತಿರುವ ಸುದ್ದಿಯನ್ನ ಕೊಡ್ತಾರೆ. ಬಾಲಿವುಡ್‌ನ ಚೋಟೆ ನವಾಬ್ ಸೈಫ್ ಅಲಿ ಖಾನ್ ಅವರ ಮುದ್ದಾದ ಮಗಳು ಸಾರಾ ಅಲಿ ಖಾನ್ ಈ ಎರಡನೇ ಸಾಲಿಗೆ ಸೇರುತ್ತಾರಾ ಗೊತ್ತಿಲ್ಲ. ಆದರೆ ಸದ್ಯಕ್ಕೆ ಸಾರಾ ಮದುವೆ ಬಗ್ಗೆ ಅಖಂಡ ಮಹಾರಾಷ್ಟ್ರ ತಲೆ ಕೆಡಿಸಿಕೊಂಡಿದೆ.

ಹೌದು, ಸಾರಾ ಅಲಿ ಖಾನ್ ಮದುವೆ ಬಗ್ಗೆ ಸದ್ಯಕ್ಕೆ ಸುದ್ದಿಯೊಂದು ಗುಲ್ಲಾಗಿದೆ. ಯಾರಿಗೂ ಹೇಳದೇ ಕೇಳದೇ ಸಾರಾ ಅಲಿ ಖಾನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೂ ಅಂತೆ-ಕಂತೆಯ ಸಂತೆಯಲ್ಲಿ ಈ ಸುದ್ದಿ ಬಿಕರಿಯಾಗಿದ್ದೇ ತಡ, ಸಾಮಾಜಿಕ ಜಾಲತಾಣದ ಪ್ರವೀಣರು ಸಾರಾ ಅಲಿ ಖಾನ್ ಮದುವೆಯಾಗಲಿರುವ ಹುಡುಗನ ಜಾತಕವನ್ನೇ ಹೆಕ್ಕಿ ತೆಗೆದಿದ್ದಾರೆ. ಸಾರಾ ಅಲಿ ಖಾನ್ ಮದುವೆ ಆಗುವ ಆ ಅದೃಷ್ಟವಂತ ಬೇರೆ ಯಾರು ಅಲ್ಲ ಬದಲಿಗೆ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗ ವೀರ್ ಪಹಾರಿಯಾ ಎಂದು ಹುಯಿಲೆಬ್ಬಿಸಿದ್ದಾರೆ
ಹಾಗೊಂದು ವೇಳೆ ಹರಿದಾಡುತ್ತಿರುವ ಈ ಸುದ್ದಿ ಭವಿಷ್ಯದಲ್ಲಿ ನಿಜ ಆಗಿದ್ದೇ ಆದಲ್ಲಿ, ಜಾಹ್ನವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಒಂದೇ ಮನೆಯ ಸೊಸೆಯಾಗಲಿದ್ದಾರೆ. ಯಾಕೆಂದರೆ ಜಾಹ್ನವಿ ಕಪೂರ್ ಹೃದಯವನ್ನ ಗೆದ್ದಿರುವ ಶಿಖರ್ ಇದೇ ಸುಶೀಲ್ ಕುಮಾರ್ ಶಿಂಧೆ ಅವರ ಮತ್ತೊಬ್ಬ ಮೊಮ್ಮಗ ಅನ್ನುವುದೇ ಈ ಕ್ಷಣದ ವಿಶೇಷ.

ಹೌದು.. . ಶಿಖರ್ ಜೊತೆ ಪ್ರೇಮ ಶಿಖರವನ್ನೇರಿರುವ ವಿಚಾರವನ್ನ ಖುದ್ದು ಜಾಹ್ನವಿ ಕಪೂರ್ ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಶಿಖರ್ ಹೆಸರಿನ ನೆಕ್ಲೆಸ್ ನ ಕೊರಳಿನಲ್ಲಿ ಹಾಕಿಕೊಂಡು ಕ್ಯಾಮರಾ ಕಣ್ಣಿಗೆ ಫೋಸ್ ಕೊಟ್ಟಿದ್ದಾರೆ. ಈ ಕಾರಣಕ್ಕೆ.. ಸಾರಾ ಅಲಿ ಖಾನ್ ಮದುವೆಯ ಬಗ್ಗೆ ಹರಡಿರುವ ಈ ಸುದ್ದಿಯ ಬಗ್ಗೆ ಬಾಲಿವುಡ್‌ನಲ್ಲೊಂದು ಕುತೂಹಲ ಮನೆ ಮಾಡಿದೆ. ಬಾಲಿವುಡ್‌ನ ಎರಡು ಅತ್ಯಮೂಲ್ಯ ರತ್ನಗಳು ಅಣ್ಣ-ತಮ್ಮನ ಪಾಲಾಗಲಿವೆಯಾ ಎಂಬ ಚಿಂತೆ ಕೂಡ ಅನೇಕರನ್ನ ಕಾಡುತ್ತಿದೆ.
ಅಂದ್ಹಾಗೇ ಸಾರಾ ಅಲಿ ಖಾನ್ ಅವರ ಹೆಸರು ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಜೊತೆ ತಳುಕು ಹಾಕಿಕೊಂಡಿತ್ತು. ಆ ನಂತರ ಕಾರ್ತಿಕ್ ಆರ್ಯನ್, ಸೋನಂ ಕಪೂರ್ ಸಹೋದರ ಹರ್ಷವರ್ಧನ್ ಕಪೂರ್, ಶಾಹಿದ್ ಕಪೂರ್ ತಮ್ಮ ಇಶಾನ್ ಮತ್ತು ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಕೂಡ ಸಾರಾ ಅಲಿ ಖಾನ್ ಮದುವೆಯಾಗ್ತಾರೆ ಅನ್ನುವ ಮಾತು ಹಿಂದೆ ಕೇಳಿ ಬಂದಿತ್ತು. ಮೊನ್ನೆ ಮೊನ್ನೆಯಷ್ಟೇ ಆದಿತ್ಯ ರಾಯ್ ಕಪೂರ್ ಜೊತೆ ಕೂಡ ಇವರ ಸಂಬಂಧವನ್ನು ಕೂಡ ಕಲ್ಪಿಸಲಾಗಿತ್ತು.

ಆದರೆ ಈಗ ವೀರ್ ಪಹಾರಿಯಾ ಜೊತೆ ಮದುವೆಯಾಗಲಿದ್ದಾರೆ ಅನ್ನುವ ಸುದ್ದಿ ಹಬ್ಬಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹಿಂದೊಮ್ಮೆ ಸಾರಾ ಅಲಿ ಖಾನ್ ಖುದ್ದು ಹಂಚಿಕೊಂಡು ಆ ನಂತರ ಡಿಲೀಟ್ ಮಾಡಿದ್ದ ಫೋಟೋ ಒಂದು ವೈರಲ್ ಆಗುತ್ತಿದೆ. ಇಬ್ಬರ ನಡುವೆ ಆತ್ಮೀಯತೆ ಅನೇಕರ ಕಣ್ಣಿಗೆ ಪ್ರೇಮದ ಸಂಕೇತದಂತೆಯೂ ಕೂಡ ಕಾಣ್ತಿದೆ.
ಇದಿಷ್ಟೇ ಅಲ್ಲ ಜಾಹ್ನವಿ ಕಪೂರ್- ಶಿಖರ್ ಪಹಾರಿಯಾ-ಸಾರಾ ಅಲಿ ಖಾನ್ ಹಾಗೂ ವೀರ್ ಪಹಾರಿಯಾ ಜೊತೆ ಜೊತೆಯಲ್ಲಿ ಮಾಡಿದ್ದ ಪಾರ್ಟಿಯ ಫೋಟೋ ಕೂಡ ವಾಟ್ಸಾಫ್ ಯುನಿವರ್ಸಿಟಿಯಲ್ಲಿ ಹರಿದಾಡುತ್ತಿದೆ.

ಒಟ್ನಲ್ಲಿ ಸದ್ಯಕ್ಕೆ ಸಾರಾ ಅಲಿ ಖಾನ್ ಅವರ ಮದುವೆಯ ಬಗ್ಗೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಸಾರಾ ಅಲಿ ಖಾನ್ ಜೊತೆ ಜೊತೆ ಜಾಹ್ನವಿ ಕಪೂರ್ ಹೆಸರು ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದೆ. ನಿಜಕ್ಕೂ ಸಾರಾ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಒಂದೇ ಮನೆಗೆ ಸೊಸೆಯಾಗಿ ಹೋಗ್ತಾರಾ ಅನ್ನುವುದಕ್ಕೆ ಉತ್ತರ ಕಾಲವೇ ನೀಡಲಿದೆ.


Click it and Unblock the Notifications











