Sarfira trailer: ಕನ್ನಡಿಗನ ಯಶೋಗಾಥೆಯಲ್ಲಿ ಅಕ್ಷಯ್ ಕುಮಾರ್, ಟ್ರೈಲರ್ ನೋಡಿದ್ರಾ?
ಅಕ್ಷಯ್ ಕುಮಾರ್ ನಟನೆಯ 'ಸರ್ಫಿರಾ' ಸಿನಿಮಾ ಟ್ರೈಲರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಸುಧಾ ಕೊಂಗರ ನಿರ್ದೇಶನದ ಈ ಬಯೋಪಿಕ್ ಸಿನಿಮಾ ಜುಲೈ 12ಕ್ಕೆ ತೆರೆಗೆ ಬರಲಿದೆ. ಅರುಣಾ ಬಾಟಿಯಾ, ಜ್ಯೋತಿಕಾ, ಸೂರ್ಯ ಹಾಗೂ ವಿಕ್ರಂ ಮಲ್ಹೋತ್ರಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ತಮಿಳಿನ 'ಸುರರೈ ಪೊಟ್ರು' ರೀಮೆಕ್ 'ಸರ್ಫಿರಾ'. 2020ರಲ್ಲಿ ಸೂರ್ಯ ನಟನೆಯ 'ಸುರರೈ ಪೊಟ್ರು' ಸಿನಿಮಾ ನೇರವಾಗಿ ಓಟಿಟಿಗೆ ಬಂದು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಚಿತ್ರದಲ್ಲಿ ಕನ್ನಡಿಗರ ಜಿ. ಆರ್ ಗೋಪಿನಾಥ್ ಸಾಹಸಗಾಥೆಯನ್ನು ತೆರೆದಿಡಲಾಗಿತ್ತು. ಅದೇ ಕಥೆಯನ್ನು ಇದೀಗ ಬಾಲಿವುಡ್‌ನಲ್ಲಿ ಸುಧಾ ಕೊಂಗರ ಕಟ್ಟಿಕೊಟ್ಟಿದ್ದಾರೆ. ಜಿ. ಆರ್ ಗೋಪಿನಾಥ್ ಆಗಿ ಅಕ್ಷಯ್ ಕುಮಾರ್ ಬಣ್ಣ ಹಚ್ಚಿದ್ದಾರೆ. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ಅಂತೂ ಇಂತೂ ತೆರೆಗೆ ಬರಲು ಸಜ್ಜಾಗಿದೆ.

ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾಮಾನ್ಯ ಜನರಿಗೆ ವಿಮಾನ ಸೇವೆ ಒದಗಿಸಬೇಕು ಎನ್ನುವ ಒಬ್ಬ ಯುವಕನ ಕನಸಿನ ಕಥೆಯ ಸುತ್ತ ಸಿನಿಮಾ ಸುತ್ತುತ್ತದೆ. ಈ ಹಾದಿಯಲ್ಲಿ ಆತನ ಏಳು ಬೀಳುಗಳಿಗೆ ದೃಶ್ಯ ರೂಪ ಸಿಕ್ಕಿದೆ. ಇನ್ನು ತಮಿಳು ನಟ ಸೂರ್ಯ ಕೂಡ 'ಸರ್ಫಿರಾ' ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಪರೇಶ್ ರಾವಲ್, ರಾಧಿಕಾ ಮದನ್, ಸೀಮಾ ಬಿಸ್ವಾಸ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ.
'ಸರ್ಫಿರಾ' ಟ್ರೈಲರ್ 'ಸುರರೈ ಪೊಟ್ರು' ಸಿನಿಮಾವನ್ನೇ ನೆನಪಿಸುತ್ತಿದೆ. ಆದರೆ ಮತ್ತಷ್ಟು ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿರುವುದು ಗೊತ್ತಾಗುತ್ತಿದೆ. ಇನ್ನು ಸೂರ್ಯ ಮಾಡಿದ್ದ ಪಾತ್ರಕ್ಕೆ ಅಕ್ಷಯ್ ನ್ಯಾಯ ಸಲ್ಲಿಸುವ ಸುಳಿವು ಸಿಕ್ಕಿದೆ. ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಏರ್ ಡೆಕ್ಕನ್ ಸಂಸ್ಥೆ ಸ್ಥಾಪಿಸಿ ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ವಿಮಾನ ಪ್ರಯಾಣ ಸೌಲಭ್ಯ ಒದಗಿಸಿದ ಕ್ಯಾಪ್ಟನ್ ಗೋಪಿನಾಥ್ ಜೀವನದ ಪ್ರಮುಖ ಘಟ್ಟಗಳನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ. ಆತನ ಪ್ರಯತ್ನ ನೋಡಿ ಎಲ್ಲರೂ ಹುಚ್ಚ ಎಂದು ಕರೆಯುತ್ತಿದ್ದರೂ ತಲೆ ಕೆಡಿಸಿಕೊಳ್ಳದೇ ತನ್ನ ಕನಸ್ಸನ್ನು ಹೇಗೆ ನನಸು ಮಾಡಿದ ಎನ್ನುವುದೇ 'ಸರ್ಫಿರಾ' ಸಿನಿಮಾ ಎಂದು ಚಿತ್ರತಂಡ ಹೇಳಿದೆ.

'ಸರ್ಫಿರಾ' ಸಿನಿಮಾ ಮೂಲಕ ಅಕ್ಷಯ್ ಕುಮಾರ್ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ವರ್ಷಗಳ ಹಿಂದೆ ಅಕ್ಕಿ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿತ್ತು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಆಗುತ್ತಿದ್ದವು. ಆದರೆ ಬಾಲಿವುಡ್ ಖಿಲಾಡಿ ದಿಢೀರ್ ಕ್ರೇಜ್ ಕಮ್ಮಿ ಆಗಿದೆ. ಕೊನೆಯದಾಗಿ ಅಕ್ಷಯ್ ಕುಮಾರ್ ನಟಿಸಿದ 10 ಸಿನಿಮಾಗಳಲ್ಲಿ 2 ಸಿನಿಮಾ ಮಾತ್ರ ಗೆದ್ದಿದ್ದಾರೆ. 'ಸರ್ಫಿರಾ' ಮೂಲಕ ಮತ್ತೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
ಸುಧಾ ಕೊಂಗರ ನಿರ್ದೇಶನದ 'ಸುರರೈ ಪೊಟ್ರು' ಸಿನಿಮಾ ನೋಡಿ ಕ್ಯಾಪ್ಟನ್ ಗೋಪಿನಾಥ್ ಸಹ ಮೆಚ್ಚಿಕೊಂಡಿದ್ದರು. ಜಿ. ಆರ್ ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನ ಶಾಲಾ ಶಿಕ್ಷಕರೊಬ್ಬರ ಮಗ. ಕನ್ನಡ ಮಾಧ್ಯಮದಲ್ಲಿ ಓದಿ, ಸೈನ್ಯಕ್ಕೆ ಸೇರಿ ಕ್ಯಾಪ್ಟನ್ ಆಗಿದ್ದರು. ಸೇನೆಯಲ್ಲಿದ್ದ ಅವರಿಗೆ ದುಬಾರಿ ವಿಮಾನ ಪ್ರಯಾಣದ ಕಾರಣ ಹಾಸಿಗೆ ಹಿಡಿದಿದ್ದ ತನ್ನ ತಂದೆಯನ್ನು ಸಕಾಲದಲ್ಲಿ ಬಂದು ನೋಡಲಾಗುವುದಿಲ್ಲ. ಆ ಕೊರಗು ಅವರನ್ನು ವಿಮಾನಯಾನವನ್ನು ಸಾಮಾನ್ಯ ಜನರ ಕೈಗೆಟುಕುವಂತೆ ಮಾಡಬೇಕೆಂದು ಪಣ ತೊಡುವಂತೆ ಮಾಡಿತು. ಮುಂದೆ ಅದನ್ನು ಸಾಧಿಸಿ ತೋರಿಸಿದ್ದರು.


Click it and Unblock the Notifications











