Viral Video ; ಶಾರುಖ್ ಖಾನ್ ಇನ್ನು ಸತ್ತಿಲ್ಲ, ನಾವು ಹೇಗೆ ಸಾಯ್ತೀವಿ ..?
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು.
ಈ ಕಾರಣಕ್ಕೆ ಸಮಾಜಕ್ಕೆ ಉಪಕಾರಿಯಾಗದ ಅನೇಕರು, ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ. ಯಾರಾದರೂ ಹಾಳಾಗಿ ಹೋಗಲಿ ನಾವು ನಮ್ಮ ಮನೆಯವರು ಚೆನ್ನಾಗಿದ್ದರೆ ಸಾಕು ಎಂದು ತಪ್ಪು ಸಂದೇಶವನ್ನ ನೀಡಿ ಕೈ ತೊಳೆದುಕೊಳ್ಳುತ್ತಾರೆ.

ಆದರೆ ಇವರ ಈ ಜಾಹೀರಾತುಗಳಿಂದ ಆಗುವ ಪರಿಣಾಮ ದೊಡ್ಡದು ಮತ್ತು ಗಾಢವಾದದ್ದು. ಯಾಕೆಂದರೆ ಸಿನಿಮಾ ತಾರೆಯರನ್ನ ದೇವರೆಂದು ಪೂಜಿಸುವವರ ಸಂಖ್ಯೆ ನಮ್ಮಲ್ಲಿ ತುಸು ಹೆಚ್ಚೇ ಇದೆ. ಇನ್ನೂ.. ತಮ್ಮ ನೆಚ್ಚಿನ ತಾರೆಯರ ಹಾವ-ಭಾವ ಅವರ ಜೀವನ ಶೈಲಿಯನ್ನ ಅನುಸರಿಸುವವರು ಕೂಡ ಇದ್ದಾರೆ. ಇದೆಲ್ಲದಕ್ಕೂ ತಾಜಾ ಉದಾಹರಣೆ ಎಂಬಂತೆ ಜಾಹೀರಾತುಗಳಿಂದ ಆಗುವ ದುಷ್ಟ ಪರಿಣಾಮದ ಸಂಕೇತದಂತೆ ಇರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು. ಸತ್ಯ-ನ್ಯಾಯ-ಪ್ರೀತಿ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿನ ವಿಡಿಯೋ ಒಂದು ಎಲ್ಲರ ಚಿತ್ತ ಕದಿಯುತ್ತಿದೆ. ಅನೇಕರ ಆತಂಕವನ್ನೂ ಹೆಚ್ಚಿಸಿದೆ. ಯಾಕೆಂದರೆ.. ಈ ವಿಡಿಯೋದಲ್ಲಿ ಬಾಲಕ ಗುಟ್ಕಾ ತಿನ್ನುತ್ತಿರುವುದನ್ನು ಕಾಣಬಹುದು.

ಮಕ್ಕಳ ಈ ದುರಭ್ಯಾಸ ಕಂಡ ವ್ಯಕ್ತಿಯೊಬ್ಬರು ಯಾಕೆ ಗುಟ್ಕಾ ತಿನ್ನುತ್ತೀರಾ. ಇದರಿಂದ ಸಾವು ಸಂಭವಿಸುತ್ತದೆ ಎಂದು ಬುದ್ಧಿವಾದ ಹೇಳಿದ್ದಾರೆ. ಆದರೆ ಆ ವ್ಯಕ್ತಿಗೆ ಬಾಲಕ ನೀಡಿದ ಉತ್ತರ ನೋಡುಗರನ್ನು ದಂಗಾಗಿಸಿದೆ. ಗುಟ್ಕಾ ತಿಂತಿದ್ದೀಯಲ್ವಾ, ಸತ್ತು ಹೋದರೆ ಏನು ಮಾಡುತ್ತೀಯಾ ಎಂದು ವ್ಯಕ್ತಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಬಾಲಕ ಶಾರುಖ್ ಖಾನ್ ಇನ್ನೂ ಸತ್ತಿಲ್ಲ ಮತ್ತೆ ನಾವು ಹೇಗೆ ಸಾಯ್ತೀವಿ ಎಂದು ಕೇಳಿದ್ದಾನೆ.
ಬಾಲಕನ ಉತ್ತರ ಕೇಳಿ ಶಾಕ್ ಆದ ವ್ಯಕ್ತಿ ಶಾರುಖ್ ಖಾನ್ ಏಕೆ ಸಾಯಬೇಕು ಎಂದು ಕೇಳಿದ್ದಾರೆ. ಇದಕ್ಕೂ ಅಚ್ಚರಿಯ ಉತ್ತರವನ್ನೇ ನೀಡಿದ ಬಾಲಕ ಅವರು ಗುಟ್ಕಾ ತಿನ್ನುತ್ತರಲ್ಲಾ. ಶಾರುಖ್ ಖಾನ್ ಗುಟ್ಕಾ ತಿನ್ನುತ್ತಾರೆ ಎಂದು ನಿಂಗೆ ಯಾರು ಹೇಳಿದ್ದು ಎಂದು ಕೇಳಿದರೆ, ಅದಕ್ಕೆ ಬಾಲಕ ಅವರು ಗುಟ್ಕಾ ತಿನ್ತಾರಲ್ವಾ, ನಾನು ಜಾಹೀರಾತಿನಲ್ಲಿ ನೋಡಿದ್ದೇನೆ ಅವರು ಗುಟ್ಕಾ ತಿನ್ನೋದನ್ನು ಎಂದು ಹೇಳುತ್ತಾನೆ.
ಸದ್ಯಕ್ಕೆ ಈ ವಿಡಿಯೋ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನ ಕಂಡಿದೆ. ಗುಟ್ಕಾ ಕಂಪನಿಗಳ ವಿರುದ್ಧ ಮತ್ತು ಗುಟ್ಕಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಶಾರುಖ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸೇರಿ ಅನೇಕ ತಾರೆಯರ ವಿರುದ್ಧ ಆಕ್ರೋಶವೂ ಕೂಡ ವ್ಯಕ್ತವಾಗುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಈ ಗುಟ್ಕಾ ತಿಂದು ಯಾರಾದರೂ ಮೃತ ಪಟ್ಟರೆ ಆಯಾ ಜಾಹಿರಾತು ಕಂಪನಿ ಮತ್ತು ಜಾಹಿರಾತು ನೀಡುವ ಸೆಲೆಬ್ರಿಟಿಗಳು ಪರಿಹಾರ ಕೊಡಬೇಕೆಂದು ಕಾನೂನು ಬಂದರೆ ಸರಿ ಹೋಗುತ್ತೆ ಎಂಬ ಅಭಿಪ್ರಾಯವನ್ನ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಇನ್ನೂ ಕೆಲವರು ಸೆಲೆಬ್ರಿಟಿಗಳು ನಮ್ಮ ಕನ್ನಡದ ಕಣ್ಮಣಿ ಡಾಕ್ಟರ್ ರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ರಂತವರನ್ನು ನೋಡಿ ಕಲಿಯಬೇಕು. ಇಂತಹ ಜಾಹೀರಾತು ಕೊಟ್ಟು ಯುವ ಜನತೆಯ ದಾರಿ ತಪ್ಪಿಸುತಿರುವರಿಗೆ ಧಿಕ್ಕಾರವಿರಲಿ ಎಂದಿದ್ದಾರೆ.


Click it and Unblock the Notifications