Shah Rukh Khan: 58 ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಬಾದ್‌ಷಾ: ಮಧ್ಯರಾತ್ರಿಯೇ ಅಭಿಮಾನಿಗಳ ಮುಂದೆ ಪ್ರತ್ಯಕ್ಷ
ನಟ ಶಾರುಖ್ ಖಾನ್ ಅವರಿಗೆ ಈ ಬಾರಿಯ ಹುಟ್ಟುಹಬ್ಬ ತುಂಬಾ ವಿಶೇಷ. ಈ ವರ್ಷ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಅವರು 58 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳಿ ಮಧ್ಯರಾತ್ರಿಯೇ ನೆಚ್ಚಿನ ನಟನ ಮನೆ ಮುಂದೆ ಜಮಾಯಿಸಿದ್ದರು. ಅಭಿಮಾನಿಗಳ ಪ್ರೀತಿಗೆ ಮನಸೋತ ಬಾಲಿವುಡ್ ಬಾದ್‌ಷಾ ಮಧ್ಯರಾತ್ರಿಯೇ ದರ್ಶನ ನೀಡಿದ್ದಾರೆ.
ಮುಂಬೈ ಬಂಗಲೆಯಾದ ಮನ್ನತ್‌ನ ಹೊರಗೆ ಅಭಿಮಾನಿಗಳು ಕಾಯುತ್ತಿದ್ದಾಗ ಶಾರುಖ್ ಖಾನ್ ಕಾಣಿಸಿಕೊಂಡರು. ಅಭಿಮಾನಿಗಳಿಗೆ ಕೈ ಮುಗಿದು ಸ್ವಾಗತಿಸಿದ ಅವರು, ಅಭಿಮಾನಿಗಳತ್ತ ಕೈ ಬೀಸಿ, ಪ್ಲೈಯಿಂಗ್ ಕಿಸ್‌ಗಳ ಸುರಿಮಳೆ ಸುರಿಸಿದ್ದಾರೆ. ಇದರ ಜೊತೆಗೆ ತಮ್ಮ ಸಿಗ್ನೇಚರ್ ಫೋಸ್ ನೀಡಿ ಫ್ಯಾನ್ಸ್‌ಗೆ ರಿಟರ್ನ್ ಗಿಫ್ಟ್ ನೀಡಿದ್ದಾರೆ.

ಮಧ್ಯರಾತ್ರಿ ಬಾದ್‌ಷಾ ದರ್ಶನ
ಶಾರುಖ್ ಅಭಿಮಾನಿಗಳು ಮಧ್ಯರಾತ್ರಿಯೇ ಸಂಭ್ರಮಾಚರಣೆ ಶುರು ಮಾಡಿದ್ದು, ಈ ವೇಳೆ ನಟ ಅಭಿಮಾನಿಗಳಿಗಾಗಿ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ದರ್ಶನ ನೀಡಿದ್ದಾರೆ. ಶಾರುಖ್ ಅವರನ್ನು ನೋಡಿ ಫ್ಯಾನ್ಸ್ ಜೋರಾಗಿ ಶುಭಾಶಯಗಳನ್ನು ಕೋರಿದ್ದಾರೆ. ಬ್ಲ್ಯಾಕ್ ಟಿ ಶರ್ಟ್, ಬ್ಲ್ಯಾಕ್ ಟೋಪಿ, ಬ್ಲ್ಯಾಕ್ ಸನ್‌ಗ್ಲಾಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಶಾರುಖ್ ಖಾನ್ ಹುಟ್ಟುಹಬ್ಬದಂದು ಭಾರತದಾದ್ಯಂತ ಇರುವ ಅವರ ಅಭಿಮಾನಿಗಳು ಮುಂಬೈ ತಲುಪಿದ್ದಾರೆ. ಶುಭಾಶಯ ಹೇಳಲು, ಅವರನ್ನು ಒಮ್ಮೆ ಕಣ್ತುಂಬಿಕೊಳ್ಳುವ ಆಸೆಯಿಂದ ಮಧ್ಯರಾತ್ರಿಯಿಂದಲೇ ಮನ್ನತ್‌ನ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಅನೇಕರು ನಟನಿಗೆ ನೀಡಲು ಉಡುಗೊರೆಗಳು, ಹುಟ್ಟುಹಬ್ಬದ ಕೇಕ್‌ಗಳು, ಪೋಸ್ಟರ್‌ಗಳು, ಸಿಹಿತಿಂಡಿಗಳು, ಹೂಗುಚ್ಛಗಳು ತೆಗೆದುಕೊಂಡು ಹೋಗಿದ್ದಾರೆ. ಪ್ರತಿ ವರ್ಷವೂ ಶಾರುಖ್ ಖಾನ್ ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಇನ್ನು, ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರನ್ನೂ ನಿಯೋಜಿಸಲಾಗಿದೆ.
ನಾನು ಕೇವಲ ನಟ: ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಶಾರುಖ್ ಖಾನ್
ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಧನ್ಯವಾದ ಹೇಳಿದ್ದಾರೆ. "ನಿಮ್ಮಲ್ಲಿ ಹಲವರು ತಡರಾತ್ರಿಯಲ್ಲಿ ಬಂದು ನನಗೆ ವಿಶ್ ಮಾಡುತ್ತಿರುವುದು ನಂಬಲಸಾಧ್ಯ. ನಾನು ಕೇವಲ ಒಬ್ಬ ನಟ. ನಾನು ನಿಮ್ಮನ್ನು ಸ್ವಲ್ಪಮಟ್ಟಿಗೆ ರಂಜಿಸಬಹುದು ಎಂಬುದಕ್ಕಿಂತ ಮತ್ಯಾವುದು ನನಗೆ ಸಂತೋಷ ನೀಡುವುದಿಲ್ಲ. ನಾನು ನಿಮ್ಮ ಕನಸಿನಲ್ಲಿ ಬದುಕುತ್ತೇನೆ. ನಿಮ್ಮೆಲ್ಲರನ್ನು ರಂಜಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಬೆಳಗ್ಗೆ ಮತ್ತೆ ಸಿಗುವ" ಎಂದಿದ್ದಾರೆ.

ಒಟಿಟಿಯಲ್ಲಿ ಜವಾನ್
ಶಾರುಖ್ ಖಾನ್ ಅವರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ಬ್ಲಾಕ್‌ಬಸ್ಟರ್ 'ಜವಾನ್' ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ 'ಹ್ಯಾಪಿ ಬರ್ತ್‌ಡೇ ಎಸ್‌ಆರ್‌ಕೆ' ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಮೂಲಗಳ ಪ್ರಕಾರ, ಅವರ ಮುಂಬರುವ ಚಿತ್ರವಾದ ಡುಂಕಿಯ ಟೀಸರ್ ಗುರುವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬಿಡುಗಡೆಯಾಗಲಿದೆ. ಡುಂಕಿಯ ಅಧಿಕೃತ ಟೀಸರ್ ಅವರ 58 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಕುತೂಹಲಕಾರಿಯಾಗಿ, ಬಾಲಿವುಡ್ ಸೂಪರ್‌ಸ್ಟಾರ್ ತಮ್ಮ ಅಭಿಮಾನಿಗಳಿಗೆ ನವೆಂಬರ್ 2ರಂದು ಮುಂಬೈನಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಆಯೋಜಿಸಲಿದ್ದು, ಎಲ್ಲರೊಂದಿಗೆ ಟೀಸರ್ ವೀಕ್ಷಿಸಲಿದ್ದಾರೆ.
ಹುಟ್ಟುಹಬ್ಬದ ಸಂಭ್ರಮಾಚರಣೆ ಮತ್ತು ಅದೇ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಏಕಕಾಲದಲ್ಲಿ ಡುಂಕಿ ಟೀಸರ್ ಬಿಡುಗಡೆಯಾಗಲಿದೆ. ರಾಜ್‌ಕುಮಾರ್ ಹಿರಾನಿ ಅವರು ನಿರ್ದೇಶಿಸಿರುವ ಈ ಸಿನಿಮಾ ಡಿಸೆಂಬರ್ 22, 2023 ರಂದು ಚಿತ್ರಮಂದಿರಗಳಿಗೆ ಬರಲಿದೆ.


Click it and Unblock the Notifications











