ಜವಾನ್ ಬಿಡುಗಡೆಗೂ ಮುನ್ನ ತಿರುಪತಿಗೆ ಭೇಟಿ ಕೊಟ್ಟ ಶಾರುಖ್ ಖಾನ್, ನಯನತಾರಾ
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ತಮಿಳು ತಾರೆ ನಯನತಾರಾ ತಮ್ಮ ಚಿತ್ರ ಜವಾನ್ ಬಿಡುಗಡೆಗೆ ಮುನ್ನ ಮಂಗಳವಾರ ಬೆಳಗ್ಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಜವಾನ್ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ .
ಮಂಗಳವಾರ (ಸೆಪ್ಟೆಂಬರ್ 5 ರಂದು) ಬೆಳಗ್ಗೆಯೇ ನಟ ಶಾರುಖ್ ಖಾನ್, ನಯನತಾರಾ ಅವರ ಪತಿ ವಿಘ್ನೇಶ್ ಮತ್ತು ಎಸ್‌ಆರ್‌ಕೆ ಪುತ್ರಿ ಸುಹಾನಾ ಖಾನ್ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ಶಾರುಖ್ ಖಾನ್ ಅವರನ್ನು ಸ್ವಾಗತಿಸಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿದರು.

ಇದಾದ ಬಳಿಕ ಗರ್ಭಗುಡಿಯಲ್ಲಿರುವ ವೆಂಕಟೇಶ್ವರನ ದರ್ಶನ ಪಡೆದು, ಎಲ್ಲರೂ ಪೂಜೆಯಲ್ಲಿ ಭಾಗವಹಿಸಿದ್ದರು. ದರ್ಶನದ ನಂತರ, ಅರ್ಚಕರು ನಟರಿಗೆ ರಂಗನಾಯಕುಲ ಮಂಟಪದಲ್ಲಿ ವೇದಗಳನ್ನು ಪಠಿಸಿ, ತೀರ್ಥ ಪ್ರಸಾದವನ್ನು ನೀಡಿ ಆಶೀರ್ವಾದ ನೀಡಿದ್ದಾರೆ.
ಜಮ್ಮುವಿನ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿದ ವಾರಗಳ ನಂತರ, ಶಾರುಖ್ ಖಾನ್ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಈ ವೇಳೆ ಹಾಜರಿದ್ದರು.
ಮಂಗಳವಾರ ಮುಂಜಾನೆ, ಶಾರುಖ್ ಖಾನ್ ತಿಳಿ ಕಂದು ಬಣ್ಣದ ಕಾರ್ಗೋ ಪ್ಯಾಂಟ್, ಕಪ್ಪು ಹೂಡಿ ಮತ್ತು ಟೋಪಿ ಧರಿಸಿ ತಿರುಪತಿಗೆ ಆಗಮಿಸಿದ್ದರು. ಅಂಗರಕ್ಷಕರಿಂದ ಸುತ್ತುವರೆದಿದ್ದ ಅವರು, ದೇವರ ದರ್ಶನಕ್ಕೆ ತೆರಳುವ ವೇಳೆ ಬಿಳಿ ಪಂಚೆ, ಶರ್ಟ್ ಧರಿಸಿದ್ದರು. ಸುಹಾನಾ ಖಾನ್ ಕೂಡ ಬಿಳಿಯ ಚೂಡಿದಾರ್ ಧರಿಸಿದ್ದರು. ನಟಿ ನಯನತಾರಾ, ವಿಘ್ನೇಶ್ ಶಿವನ್ ದಂಪತಿ ಬಿಳಿ ಉಡುಗೆಯಲ್ಲಿದ್ದರು.

ಶಾರುಖ್ ಅಭಿನಯದ ಜವಾನ್ ಚಿತ್ರವು ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಆರು ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದ್ದು, ಜವಾನ್ ಕ್ರೇಜ್ ಹೆಚ್ಚಾಗಿದೆ. ಚಿತ್ರ ಬಿಡುಗಡೆಗೆ ಇನ್ನೇರಡು ದಿನ ಬಾಕಿಯಿದ್ದು, ಸಿನಿಮಾತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ.


Click it and Unblock the Notifications











