ಅಟ್ಲೀ ನಿರ್ದೇಶನದ ಚಿತ್ರದಲ್ಲಿ ಶಾರುಖ್ ಖಾನ್ ಪಾತ್ರ ಬಹಿರಂಗ
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಎರಡು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಈಗಾಗಲೇ ಶಾರುಖ್ ಬಳಿ 4 ಸಿನಿಮಾಗಳಿವೆ ಎಂದು ಹೇಳಲಾಗುತ್ತಿದೆ. 4 ಸಿನಿಮಾಗಳಲ್ಲಿ ತಮಿಳು ನಿರ್ದೇಶಕ ಅಟ್ಲೀ ಕುಮಾರ್ ಸಹ ಒಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ವಿಶೇಷ ಅಂದರೆ ಚಿತ್ರದ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ವಿಚಾರಗಳು ಬಹಿರಂಗವಾಗಿವೆ. ಈ ಚಿತ್ರದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. 'ಫ್ಯಾನ್' ಸಿನಿಮಾದ ಬಳಿಕ ಖಾನ್ ಮತ್ತೆ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.
ವರದಿಗಳ ಪ್ರಕಾರ ಈ ಸಿನಿಮಾದ ಕಥೆಯು ಎರಡು ಪಾತ್ರಗಳ ಸುತ್ತ ಸುತ್ತಲಿದೆಯಂತೆ. ಶಾರುಖ್ ಈ ಚಿತ್ರದಲ್ಲಿ ತನಿಖಾ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮತ್ತೊಂದು ಪಾತ್ರ ಕ್ರಿಮಿನಲ್ ಪಾತ್ರವಾಗಿರಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಸಿನಿಮಾ ಜೊತೆಗೆ ಶಾರುಖ್ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಜೊತೆಯೂ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಪಂಜಾಬಿ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಕಾಮಿಡಿ ಪಾತ್ರ ಇದಾಗಿದ್ದು, ಶಾರುಖ್ ಖಾನ್ ಗೆ ನಾಯಕಿಯಾಗಿ ಬಾಲಿವುಡ್ ನ ಪ್ರತಿಭಾವಂತ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳಲಿದ್ದಾರಂತೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಸಿನಿಮಾ ಮಾಡುವುದನ್ನೆ ನಿಲ್ಲಿಸಿದ್ದರು. ಇದೀಗ ರಾಜ್ ಕುಮಾರ್ ಹಿರಾನಿ ಮತ್ತು ತಮಿಳು ನಿರ್ದೇಶಕ ಅಟ್ಲೀ ಸಿನಿಮಾ ಜೊತೆಗೆ ಸಿದ್ಧಾರ್ಥ ಆನಂದ್ ನಿರ್ದೇಶನದ 'ಪಠಾನ್' ಮತ್ತು ಇನ್ನೂ ಒಂದು ಸಿನಿಮಾವಿದೆ ಎಂದು ಹೇಳಲಾಗುತ್ತಿದೆ. ಆದರೆ ಶಾರುಖ್ ಖಾನ್ ಇದುವರೆಗೂ ಅಧಿಕೃತವಾಗಿ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ.


Click it and Unblock the Notifications











