ಮಹೇಶ್ ಬಾಬು ವಿವಾದಾತ್ಮಕ ಹೇಳಿಕೆ ನಡುವೆ ಶಾರುಖ್ ಖಾನ್ ಹಳೇ ವಿಡಿಯೋ ವೈರಲ್
ಇತ್ತೀಚಿಗಷ್ಟೇ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಬಾಲಿವುಡ್‌ಗೆ ನನ್ನನ್ನು ಭರಿಸುವ ಶಕ್ತಿ ಇಲ್ಲ ಎಂಬ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದರು. ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿದ್ದವು. ಬಾಲಿವುಡ್‌ನ ಕೆಲ ಮಂದಿ ಮಹೇಶ್ ಹೇಳಿಕೆ ಸರಿಯಾಗಿದೆ ಎಂದಿದ್ದರೆ ಮತ್ತೆ ಕೆಲವರು ಮಹೇಶ್‌ಗೆ ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ.
ಸದ್ಯ ಈಗ ಈ ವಿವಾದ ಮತ್ತಷ್ಟು ಕಿಡಿ ಹೊತ್ತಿಸಿದ್ದು, 2008 ರಲ್ಲಿ ಶಾರುಖ್ ಖಾನ್ ಪತ್ರಿಕಾಗೋಷ್ಠಿಯಲ್ಲಿ ಹಾಲಿವುಡ್‌ನಲ್ಲಿ ಯಾಕೆ ತಾನು ನಟಿಸಲ್ಲ ಎಂಬುದರ ಕುರಿತು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ಎಲ್ಲಡೆ ವ್ಯಾಪಕವಾಗಿ ಹರಿದಾಡುತ್ತಿದ್ದು, ಮಹೇಶ್ ಬಾಬು ಶಾರುಖ್ ಖಾನ್ ಅವರನ್ನು ನೋಡಿ ಕಲಿಯಬೇಕು ಎಂಬ ಕಮೆಂಟ್‌ಗಳು ಕೇಳಿ ಬರುತ್ತಿದೆ.

ಜರ್ಮನಿಯ ಬರ್ಲಿನ್‌ನಲ್ಲಿ 2008 ರಲ್ಲಿ ನಟ ಶಾರುಖ್ ಖಾನ್ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಶಾರುಖ್ ಖಾನ್‌ಗೆ ನೀವು ಹಾಲಿವುಡ್‌ನಲ್ಲಿ ಏಕೆ ನಟಿಸಿಲ್ಲ. ಆ ಚಿತ್ರರಂಗದಲ್ಲೂ ನಟಿಸಬಹುದಲ್ಲಾ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಧೀರ್ಘವಾಗಿ ಉತ್ತರಿಸಿದ ನಟ ಶಾರುಖ್ ಖಾನ್ "ನನ್ನ ಇಂಗ್ಲೀಷ್ ಚೆನ್ನಾಗಿಲ್ಲ. ಬಹುಶಃ ನಾನು ಹಾಲಿವುಡ್‌ನಲ್ಲಿ ಮೂಕನ ಪಾತ್ರ ಮಾಡಿದರೆ ಸರಿ ಹೋಗಬಹುದು. ನನಗೆ ಅಂತಹ ಪಾತ್ರ ಸಿಗಬಹುದೇನೋ? ನನಗೆ ಈಗಾಗಲೇ 42 ವರ್ಷವಾಗಿದೆ. ನನ್ನ ಮೈಬಣ್ಣ ಕಂದು ಬಣ್ಣದ್ದಾಗಿದೆ. ಒಬ್ಬ ನಟನಾಗಿ ನನಗೆ ಯಾವುದೇ ಆದ್ಯತೆ ಇಲ್ಲ. ಯಾವುದೇ ವಿಶೇಷತೆಗಳೂ ಇಲ್ಲ. ನನಗೆ ಕುಂಗ್ ಫೂ ಗೊತ್ತಿಲ್ಲಾ. ಸ್ಯಾಲ್ಸಾ ಬರಲ್ಲಾ. ನಾನು ತುಂಬಾ ಎತ್ತರವಾಗೂ ಇಲ್ಲಾ. ನೀವೂ ಯಾವುದನ್ನು ಕನಸಿನ ಕಾರ್ಖಾನೆ ಎನ್ನುತ್ತಿರೋ ಅಲ್ಲಿ ನನಗೆ ಜಾಗವೇ ಇಲ್ಲ ಅನಿಸುತ್ತಿದೆ. ನಾನು ಅಷ್ಟು ಪ್ರತಿಭಾವಂತನಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡಲು ಇಷ್ಟ ಪಡುತ್ತೇನೆ. ಭಾರತೀಯ ಸಿನಿಮಾವನ್ನು ಜಗತ್ತಿಗೆ ಕೊಂಡೊಯ್ಯಲು ಬಯಸುತ್ತೇನೆ. ಅದೇ ನನ್ನ ಮಹತ್ವಾಕಾಂಕ್ಷೆಯಾಗಿದೆ." ಎಂದು ಹೇಳಿಕೊಂಡಿದ್ದರು. ಸದ್ಯ ಈ ವಿಡಿಯೋ ಈಗ ಮಹೇಶ್ ಬಾಬು ಬಾಲಿವುಡ್ ಬಗ್ಗೆ ಹೇಳಿಕೆ ನೀಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಮಹೇಶ್ ಬಾಬುಗೆ ಶಾರುಖ್ ಖಾನ್ ಅವರನ್ನು ನೋಡಿ ಕಲಿಯುವಂತೆ ಕಮೆಂಟ್ ಹಾಕುತ್ತಿದ್ದಾರೆ. ಇನ್ನು ಕೆಲವರು ಇದು ಮಹೇಶ್ ಬಾಬು ಹಾಗೂ ಶಾರುಖ್ ಖಾನ್‌ಗೂ ಇರುವ ವ್ಯತ್ಯಾಸ ಅದಕ್ಕಾಗಿಯೇ ಶಾರುಖ್ ಖಾನ್‌ನ ಕಿಂಗ್ ಖಾನ್ ಅಂತ ಕರೆಯುವುದು ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ವ್ಯಾಪಕವಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಮಹೇಶ್ ಬಾಬು ಹೇಳಿಕೆಗೆ ಹಲವರು ಟಾಂಗ್ ಕೊಟ್ಟಿದ್ದಾರೆ. ಆದರೆ, ಮಹೇಶ್ ಬಾಬು ಹಾಗೂ ಶಾರುಖ್ ನೀಡಿದ ಹೇಳಿಕೆಯಲ್ಲಿ ಸಾಮ್ಯತೆಯಿದೆ. ಶಾರುಖ್ ಖಾನ್ ಬಾಲಿವುಡ್ ಬಿಟ್ಟು ಹೋಗಲ್ಲ ಎಂದಿದ್ದರೆ, ಇತ್ತ ಮಹೇಶ್ ಬಾಬು ಟಾಲಿವುಡ್ ಬಿಟ್ಟು ಹೋಗಲ್ಲ ಎಂದಿದ್ದಾರೆ.

ಇತ್ತೀಚಿಗಷ್ಟೇ ಮಹೇಶ್ ಬಾಬು "ಬಾಲಿವುಡ್‌ಗೆ ನನ್ನನ್ನು ಭರಿಸುವ ಶಕ್ತಿಯಿಲ್ಲ, ನನಗೆ ಹಿಂದಿ ಚಲನಚಿತ್ರದಿಂದ ಬಹಳಷ್ಟು ಆಫರ್ ಬಂದಿದೆ, ನನಗೆ ಹೋಗಲು ಇಷ್ಟವಿಲ್ಲ. ಅಲ್ಲಿ ಹೋಗಿ ನನ್ನ ಸಮಯ ವ್ಯರ್ಥ ಮಾಡಲು ಇಷ್ಟವಿಲ್ಲ. ತೆಲುಗು ಚಿತ್ರರಂಗವೇ ಎಲ್ಲಾ ಸ್ಟಾರ್‌ಡಮ್ ನೀಡಿದೆ. ನನಗೆ ಬೇರೆ ಚಿತ್ರರಂಗಕ್ಕೆ ಹೋಗಲು ಇಷ್ಟವಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ತಮ್ಮ ಹೇಳಿಕೆ ಬಗ್ಗೆ ಮಹೇಶ್ ಬಾಬು ಸ್ಪಷ್ಟಿಕರಣ ನೀಡಿದ್ದರು.," ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದರು.


Click it and Unblock the Notifications











