ಹೊಸ ಉದ್ಯಮ ಆರಂಭಿಸಿದ ಶಾರುಖ್ ಖಾನ್ ಪುತ್ರ: 'ಹರಾಮ್' ಎಂದು ಟೀಕೆ
ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕಳೆದ ವರ್ಷ ಭಾರತದಲ್ಲಿ ಅತಿಯಾಗಿ ಸುದ್ದಿಯಲ್ಲಿದ್ದ ವ್ಯಕ್ತಿಯಾಗಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರ್ಯನ್ ಖಾನ್ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆದರು. ಆರ್ಯನ್ ಅನ್ನು ಉದ್ದೇಶಪೂರ್ವಕವಾಗಿ ಬಂಧಿಸಲಾಗಿತ್ತು ಎಂದು ಸ್ವತಃ ಎನ್‌ಸಿಬಿಯ ಆಂತರಿಕ ತನಿಖೆಯಿಂದ ಬಹಿರಂಗಗೊಂಡಿತು.
ಡ್ರಗ್ಸ್ ಘಟನೆ ಬಳಿಕ ಬಹುತೇಕ ಸೈಲೆಂಟ್ ಆಗಿಬಿಟ್ಟಿದ್ದ ಆರ್ಯನ್ ಖಾನ್ ಇದೀಗ ಮತ್ತೆ ಜನರೆದುರು ಬಂದಿದ್ದಾರೆ. ಈ ಬಾರಿ ಬೇರೆ ಕಾರಣಕ್ಕೆ ಅವರು ಸುದ್ದಿಗೆ ಬಂದಿದ್ದಾರೆ.
ಆರ್ಯನ್ ಖಾನ್ ಹೊಸ ಉದ್ಯಮವೊಂದನ್ನು ಕೆಲವು ಗೆಳೆಯರೊಟ್ಟಿಗೆ ಸೇರಿ ಆರಂಭಿಸಿದ್ದಾರೆ. ಆದರೆ ಈ ಬಾರಿಯೂ ಅವರು ಟೀಕೆಗಳನ್ನು ಎದುರಿಸಬೇಕಾಗಿ ಬಂದಿದೆ.
ಆರ್ಯನ್ ಖಾನ್ ಹಾಗೂ ಇನ್ನು ಕೆಲವರು ಸೇರಿಕೊಂಡು ಐಶಾರಾಮಿ ಫ್ಯಾಷನ್ ಬ್ರ್ಯಾಂಡ್ ಮತ್ತು ವೋಡ್ಕಾ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ತಂದಿದ್ದಾರೆ.
'ಡಿ'ಯಾವೋಲ್' ಹೆಸರಿನ ಬ್ರ್ಯಾಂಡ್ ಅನ್ನು ಆರ್ಯನ್ ಖಾನ್ ಹಾಗೂ ಗೆಳೆಯರು ಹೊರತಂದಿದ್ದು, ಈ ಬ್ರ್ಯಾಂಡ್ ಮೂಲಕ ಉತ್ತಮ ಗುಣಮಟ್ಟದ ಮದ್ಯ ವೋಡ್ಕಾ ಸೇರಿದಂತೆ ಇನ್ನೂ ಹಲವು ಫ್ಯಾಷನ್ ಸಾಮಗ್ರಿಗಳನ್ನು ಆರ್ಯನ್ ಮಾರಾಟ ಮಾಡಲಿದ್ದಾರೆ.

ಆದರೆ ಆರ್ಯನ್ ಖಾನ್ ಮದ್ಯ ಮಾರಾಟ ಮಾಡುತ್ತಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಮುಸ್ಲಿಂ ಆಗಿ ಮದ್ಯ ಮಾರಾಟ ಮಾಡುತ್ತಿರುವುದು ತಪ್ಪು, ಮುಸ್ಲೀಮರಿಗೆ ಮದ್ಯ ಹರಾಮ್ ಎಂದಿದ್ದಾರೆ.
ತಮ್ಮ ಹೊಸ ಉದ್ಯಮದ ಬಗ್ಗೆ ವೋಗ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಆರ್ಯನ್ ಖಾನ್, ''ನನ್ನ ಹೊಸ ಉದ್ದಿಮೆಗೆ ಪೋಷಕರ ಬೆಂಬಲ ದೊರೆತಿದೆ. ಅವರಿಬ್ಬರೂ ಬಹಳ ಖುಷಿಯಿಂದ ನನ್ನ ಈ ಹೊಸ ಸಾಹಸಕ್ಕೆ ಬೆಂಬಲ ನೀಡಿದ್ದಾರೆ. ನಮ್ಮ ಮನೆಯಲ್ಲಿನ ವ್ಯವಸ್ಥೆಯೇ ಹಾಗಿದೆ. ಯಾರಿಗೆ ಯಾವುದು ಇಷ್ಟವಿರುತ್ತದೆಯೋ ಅದನ್ನು ಮಾಡಲು ಅವರು ಸದಾ ಸ್ಪೂರ್ತಿ ತುಂಬುತ್ತಾರೆ'' ಎಂದಿದ್ದಾರೆ ಆರ್ಯನ್ ಖಾನ್.
ಆರ್ಯನ್ ಖಾನ್, ವೆಬ್ ಸೀರೀಸ್ ಒಂದನ್ನು ನಿರ್ದೇಶನ ಮಾಡಲಿದ್ದಾರೆ. ಆ ವೆಬ್ ಸರಣಿಯು 2023 ರಲ್ಲಿ ಆರಂಭಗೊಳ್ಳಲಿದ್ದು, ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೈನ್‌ಮೆಂಟ್ ಸಂಸ್ಥೆಯೇ ಅದನ್ನು ನಿರ್ಮಾಣ ಮಾಡಲಿದೆ.
ಇನ್ನು ಶಾರುಖ್ ಖಾನ್‌ರ ಪುತ್ರಿ ಸುಹಾನಾ ಹೊಸದೊಂದು ಸಿನಿಮಾದಲ್ಲಿ ನಟಿಸಿದ್ದಾರೆ. ವಿದೇಶದಲ್ಲಿ ಸಿನಿಮಾ ಕುರಿತು ಪದವಿ ಓದುತ್ತಿರುವ ಸುಹಾನಾ, ಖ್ಯಾತ ನಿರ್ದೇಶಕಿ ಝೋಯಾ ಅಖ್ತರ್ ನಿರ್ದೇಶನದ 'ಆರ್ಚೀಸ್' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಲವು ಬಾಲಿವುಡ್ ತಾರೆಯರ ಮಕ್ಕಳು ನಟಿಸಿದ್ದಾರೆ.


Click it and Unblock the Notifications











