ನನ್ನ ಮಗ ಕೆಟ್ಟವನಾಗಿ ಸಮಾಜ ಹಾಳು ಮಾಡಬೇಕು: ಶಾರುಖ್ ಖಾನ್ ಹೀಗಂದಿದ್ಯಾಕೆ?
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ ಹೆಸರು ಹೆಚ್ಚಾಗಿ ಸದ್ದು ಮಾಡಿದ್ದು ಡ್ರಗ್ಸ್ ಪ್ರಕರಣದಲ್ಲಿ. ಈ ಪ್ರಕರಣದಲ್ಲಿ ಆರ್ಯನ್ ಖಾನ್ ಜೈಲುವಾಸವನ್ನು ಕೂಡ ಅನುಭವಿಸಿದರು. ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಹೆಸರು ಕೇಳಿ ಬಂದ ಬಳಿಕ ಆರ್ಯನ್ ಖಾನ್‌ರನ್ನು ಅರೆಸ್ಟ್ ಮಾಡಲಾಗಿತ್ತು. ನಂತರ ಜಾಮೀನು ಪಡೆದು ಹೊರಬಂದ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ಕೂಡ ಸಿಕ್ಕಿದೆ.
ಸೂಪರ್ ಸ್ಟಾರ್ ನಟನೊಬ್ಬನ ಮಗನ ಹೆಸರು ಈ ರೀತಿ ಡ್ರಗ್ ಪ್ರಕರಣದಲ್ಲಿ ಕೇಳಿಬಂದಿದ್ದು ಸಮಾಜಕ್ಕೆ ಮಾದರಿಯಲ್ಲ ಎಂದು ಸಾಕಷ್ಟು ಜನರು ಜರಿದಿದ್ದರು. ಆದರೆ ಕ್ಲೀನ್ ಚಿಟ್ ಬಳಿಕ ಇದೆಲ್ಲವೂ ಅಂತ್ಯವಾಗಿದೆ. ಕಾಕತಾಳೀಯ ಎಂಬಂತೆ ಈ ಹಿಂದೆ ಶಾರುಖ್ ಖಾನ್ ಆಡಿದ ಮಾತುಗಳು ಇದೀಗ ಮಗನ ನಡವಳಿಕೆಯಲ್ಲಿ ಕಂಡುಬರುತ್ತಿದೆ ಎನ್ನುವ ಚರ್ಚೆ ಶುರುವಾಗಿದೆ.
ಹಲವು ವರ್ಷಗಳ ಹಿಂದೆ ಶಾರುಖ್ ಖಾನ್ ಮತ್ತು ಗೌರಿ ಖಾನ್ ಸಂದರ್ಶನವೊಂದರಲ್ಲಿ ಮಾತನಾಡಿದ ವೇಳೆ ಶಾರುಖ್ ಖಾನ ನನ್ನ ಮಗ ಒಳ್ಳೆಯ ಹುಡುಗ ಆದರೆ ಆತನನ್ನು ಮನೆಯಿಂದ ಹೊರದೂಡುತ್ತೇನೆ ಎಂದಿದ್ದರು.

ನನ್ನ ಮಗ ಕೆಟ್ಟ ಹುಡುಗ ಆಗ್ಬೇಕು: ಶಾರುಖ್ ಖಾನ್!
1997ರಲ್ಲಿ ಸಂದರ್ಶನದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಭಾಗಿ ಆಗಿದ್ದರು. ಈ ವೇಳೆ ಮಗ ಆರ್ಯನ್ ಖಾನ್ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಮಗು ಬಗ್ಗೆ ಏನಾದರೂ ನಿರ್ದಿಷ್ಟ ಕನಸುಗಳಿವೆಯೇ ಎಂದು ಕೇಳಿದಾಗ, ಗೌರಿ ಖಾನ್ "ಅವನ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ, ಆದರೆ ಅವನು ಒಳ್ಳೆಯ ಹುಡುಗನಾಗಬೇಕು" ಎಂದು ಹೇಳುತ್ತಾರೆ. ಆದರೆ ಶಾರುಖ್ ಮಾತ್ರ "ಅವನು ಒಳ್ಳೆಯ ಹುಡುಗನಾದರೆ, ಅವನು ಮನೆಯಿಂದ ಹೊರಗಿರುತ್ತಾನೆ" ಎಂದು ಉತ್ತರಿಸಿ ತಮಾಷೆ ಮಾಡಿದ್ದರು. ನಂತರ ಗೌರಿ ತನ್ನ ಪತಿಯನ್ನು ಗೇಲಿ ಮಾಡಿದ್ದರು.

ನನ್ನ ಮಗ ಕಿವಿಯೋಲೆ, ಉದ್ದ ಕೂದಲ ಹೀರೋ!
ಇನ್ನು ಆರ್ಯನ್ ಖಾನ್ ಸಿನಿಮಾರಂಗಕ್ಕೆ ಬರಬೇಕಾ ಎನ್ನುವ ಪ್ರಶ್ನೆಗೆ ಕೂಡ ಶಾರುಖ್ ಖಾನ್ ಉತ್ತರ ನೀಡಿದ್ದರು. ಇದು ಕೂಡ ಅವನು ಮಾಡುವ ಕೆಟ್ಟ ಕೆಲಸಗಳಲ್ಲಿ ಒಂದಾಗ ಬೇಕು. ಕಿವಿಯೋಲೆ ಮತ್ತು ಉದ್ದನೆಯ ಕೂದಲು ಬಿಟ್ಟು ಹೀರೋ ಆಗ್ಬೇಕು ಎಂದಿದ್ದರು. ಮಗನ ಬಗ್ಗೆ ತಮಾಷೆಯ ಹೇಳಿಕೆಯನ್ನು ಕೊಟ್ಟ ಶಾರುಖ್ ಖಾನ್ ನನ್ನ ಮಗ ನಿಜವಾಗಲೂ ಹಾಳಬೇಕು ಎಂದು ನಾನು ಬಯಸುತ್ತೇನೆ ಎಂದಿದ್ದರು.

ಎಲ್ಲರೂ ನನ್ನ ಮಗನ ಬಗ್ಗೆ ದೂರು ಹೇಳ್ಬೇಕು!
ಇನ್ನು ಮಾತು ಮುಂದುರೆಸಿದ ನಟ ಶಾರುಖಾನ್, "ನಾನು ಹಲವು ನಾಯಕಿಯರಿಗೆ ಹೇಳಿದ್ದೇನೆ. ನಿಮಗೆ ಹೆಣ್ಣು ಮಕ್ಕಳಿದ್ದರೆ ಅವರನ್ನು ನನ್ನ ಮಗನಿಂದ ದೂರ ಇಡಿ, ಇಲ್ಲವಾದರೆ ಅವನು ಅವರ ಹಿಂದೆ ಬೀಳುತ್ತಾನೆ ಎಂದು. ಮತ್ತು ನನ್ನ ಮಗನನ್ನು ಮನೆಯಿಂದ ಹೊರ ದೂಡುವಂತೆ ಸದಾ ದೂರುಗಳು ಬರುತ್ತಿರಬೇಕು. ಒಟ್ಟಾರೆ ನನ್ನ ಮಗ ಸಿಟಿಯನ್ನು ಹಾಳು ಮಾಡಬೇಕು" ಎಂದಿದ್ದಾರೆ.

ಆರ್ಯನ್ ಖಾನ್ ಹೀರೋ ಆಗ್ತಾನಾ?
ಆರ್ಯನ್ ಖಾನ್ ಸದ್ಯ ಕ್ಲೀನ್ ಚಿಟ್ ಪಡೆದು ನಿರಾಳವಾಗಿದ್ದಾನೆ. ಸದ್ಯ ಆರ್ಯನ್ ಖಾನ್ ಮುಂದಿನ ನಡೆ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ. ಆರ್ಯನ್ ಖಾನ್ ಸಿನಿಮಾರಂಗದಲ್ಲಿ ಸಂಪೂರ್ಣವಾಗಿ ಯಾವಾಗ ತೊಡಗಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಇನ್ನು ಸುಳಿವು ಸಿಕ್ಕಿಲ್ಲ. ಆದರೆ ನಟನೆಗೂ ಮೊದಲು ಆರ್ಯನ್ ಖಾನ್ ನಿರ್ದೇಶಕನಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.


Click it and Unblock the Notifications











