ಚಡ್ಡಿ, ಬನಿಯನ್ ಅಂತ ವ್ಯಂಗ್ಯ ಮಾಡಿದ್ದ ಶಾರುಖ್; ಹಾಗಾದ್ರೆ ಖಾನ್‌ತ್ರಯರಿಗೆ ಅಂಬಾನಿ ಎಷ್ಟು ಕೋಟಿ ಕೊಟ್ರು?
ಮೂರು ದಿನಗಳ ಕಾಲ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆ ಪೂರ್ವ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ದೇಶ ವಿದೇಶದ ಉದ್ಯಮಿಗಳು, ರಾಜಕೀಯ ಮುಖಂಡರು, ಸಿನಿಮಾ- ಕ್ರೀಡಾ ಕ್ಷೇತ್ರದ ತಾರೆಯರನ್ನು ಮುಖೇಶ್ ಅಂಬಾನಿ ಒಂದೆಡೆ ಸೇರಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಬಾಲಿವುಡ್ ಖಾತ್‌ತ್ರಯರು ಸೇರಿದಂತೆ ಹಲವರು ಸಂಭ್ರಮದಲ್ಲಿ ಭಾಗಿ ಆಗಿ ಸಮಾರಂಭಕ್ಕೆ ಕಳೆ ತಂದಿದ್ದರು.
ಗುಜರಾತಿನ ಜಾಮ್‌ನಗರದಲ್ಲಿ ತಾರಾಲೋಕವೇ ಧರೆಗಿಳಿದಿತ್ತು. ದಕ್ಷಿಣ ಭಾರತ ಚಿತ್ರರಂಗದಿಂದ ರಜನಿಕಾಂತ್ ಹಾಗೂ ರಾಮ್‌ಚರಣ್ ದಂಪತಿ ಸಮೇತರಾಗಿ ಹಾಜರಾಗಿದ್ದರು. ವೇದಿಕೆಯಲ್ಲಿ ಶಾರುಖ್ ಖಾನ್, ಆಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ಹೆಜ್ಜೆ ಹಾಕಿದ್ದರು. ರಾಮ್‌ಚರನ್ ಮೂವರಿಗೆ 'ನಾಟು ನಾಟು' ಡ್ಯಾನ್ಸ್ ಹೇಳಿಕೊಟ್ಟಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವೀಡಿಯೋಗಳು ವೈರಲ್ ಆಗುತ್ತಿದೆ.

ವೇದಿಕೆಯಲ್ಲಿ ಬಿಟೌನ್ ಖಾನ್‌ತ್ರಯರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಮೂವರನ್ನು ಒಟ್ಟಿಗೆ ತೆರೆಮೇಲೆ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆ. ಆದರೆ ಅದು ಸಾಧ್ಯ ಇಲ್ಲ ಎಂದೇ ಕೆಲವರು ಹೇಳುತ್ತಾರೆ. ಖುದ್ದು ಶಾರುಖ್ ಖಾನ ಕೂಡ ಬಹಳ ಈ ಹಿಂದೆ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದ ಕಿಂಗ್ ಖಾನ್ "ನಮ್ಮ ಮೂವರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವುದು ಕಷ್ಟ" ಎಂದಿದ್ದರು.
ಮೂವರಿಗೂ ಕಥೆ ಹೇಳಿ ಒಪ್ಪಿಸಿ, ಸಂಭಾವನೆ ಕೊಟ್ಟು, ಮೂವರ ಕಾಲ್‌ಶೀಟ್ ಪಡೆದು ಸಿನಿಮಾ ಮಾಡುವುದು ಅಂದ್ರೆ ತಮಾಷೆಯ ಮಾತಲ್ಲ. ಚಡ್ಡಿ ಬನಿಯನ್ ಹರಿದುಕೊಳ್ಳಬೇಕಾಗುತ್ತದೆ ಎಂದಿದ್ದರು. ಮುಖೇಶ್ ಅಂಬಾನಿ ಮಗನ ಮದುವೆ ಪೂರ್ವ ಸಮಾರಂಭದಲ್ಲಿ ಖಾನ್‌ತ್ರಯರನ್ನು ಒಟ್ಟಿಗೆ ನೋಡಿ ಕೆಲವರು ಶಾಕ್ ಆಗಿದ್ದರು. ಭಾರತದ ಕೋಟ್ಯಾಧಿಪತಿ ಮನಸ್ಸು ಮಾಡಿದರೆ ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್ ಮೂವರನ್ನು ಒಟ್ಟಿಗೆ ಸೇರಿಸುವುದು ಕಷ್ಟವಲ್ಲ. ದುಡ್ಡು ಇದ್ದರೆ ಎಲ್ಲವೂ ಸಾಧ್ಯ ಎನ್ನುವಂತೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಮಗನ ಮದುವೆ ಪೂರ್ವ ಸಮಾರಂಭದಲ್ಲಿ ತಾರೆಯರನ್ನು ಕರೆಸಿ ವಿಶೇಷ ಪ್ರದರ್ಶನ ಏರ್ಪಡಿಸಲು ಮುಖೇಶ್ ಅಂಬಾನಿ ಕೋಟ್ಯಂತರ ರೂಪಾಯಿ ವ್ಯಯಿಸಿದ್ದಾರೆ. ಬಹಳ ಅದ್ಧೂರಿಯಾಗಿ ನಡೆದ ಸಮಾರಂಭಕ್ಕೆ ನೂರಾರು ಕೋಟಿ ಸುರಿದಿದ್ದಾರೆ ಎನ್ನುವ ಚರ್ಚೆ ನಡೀತಿದೆ. ವೇದಿಕೆ ಸಿಂಗಾರ, ಅತಿಥಿಗಳ ಆತಿಥ್ಯ, ಔತಣ ಕೂಟ, ಅತಿಥಿಗಳ ಭದ್ರತೆಗೆ ನೂರಾರು ಕೋಟಿ ಖರ್ಚಾಗಿದೆ. ಜನಪ್ರಿಯ ಗಾಯಕಿ ರಿಯಾನಾಗೆ ಬರೋಬ್ಬರಿ 52 ಕೋಟಿ ರೂ. ಸಂಭಾವನೆ ಕೊಟ್ಟು ಕರೆಸಲಾಗಿತ್ತು ಎನ್ನುವ ಗುಸು ಗುಸು ಕೇಳಿಬರ್ತಿದೆ.
ರಿಯಾನಾ 10 ನಿಮಿಷದ ಪ್ರದರ್ಶನಕ್ಕೆ ಬರೋಬ್ಬರಿ 52 ಕೋಟಿ ರೂ.ನಾ? ಎಂದು ಕೆಲವರು ಹುಬ್ಬೇರಿಸಿದ್ದಾರೆ. ಇನ್ನು ಬಾಲಿವುಡ್ ಖಾನ್‌ತ್ರಯರನ್ನು ಒಟ್ಟಿಗೆ ಸೇರಿಸಲು, ಮೂವರು ಕೂಡ ವೇದಿಕೆ ಏರಿ ಕುಣಿಯಲು ಮುಖೇಶ್ ಅಂಬಾನಿ ಎಷ್ಟು ಕೋಟಿ ಕೊಟ್ಟರು? ಎನ್ನುವ ಪ್ರಶ್ನೆ ಎದ್ದಿದೆ. ಒಂದು ಲೆಕ್ಕಾಚಾರದ ಪ್ರಕಾರ 3 ದಿನಗಳ ಕಾಲ ನಡೆದ ಅನಂತ್- ರಾಧಿಕಾ ವಿವಾಹ ಪೂರ್ವ ಸಮಾರಂಭಕ್ಕೆ ಅಂದಾಜು 1000 ಕೋಟಿ ರೂ.ವರೆಗೂ ಖರ್ಚಾಗಿದೆ ಎನ್ನಲಾಗ್ತಿದೆ. ಹಾಗಾದರೆ ಖಾನ್‌ತ್ರಯರು ಎಷ್ಟು ಕೋಟಿ ಸಂಭಾವನೆ ಪಡೆದಿರಬಹುದು? ಎಂದು ಅಭಿಮಾನಿಗಳು ಆಲೋಚಿಸುತ್ತಿದ್ದಾರೆ.
ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಮುಖೇಶ್ ಅಂಬಾನಿ ಮನೆ ಕಾರ್ಯಕ್ರಮಕ್ಕೆ ಹಾಜರಾಗಲು ವೇದಿಕೆ ಏರಿ ಹೆಜ್ಜೆ ಹಾಕಲು ಖಾನ್‌ತ್ರಯರು ನಯಾಪೈಸೆ ಪಡೆದಿಲ್ಲವಂತೆ. ಮುಖೇಶ್ ಅಂಬಾನಿ ಕುಟುಂಬದ ಜೊತೆ ಶಾರುಖ್, ಸಲ್ಮಾನ್, ಆಮೀರ್‌ಗೆ ಆತ್ಮೀಯ ಒಡನಾಟವಿದೆ. ಈ ಹಿಂದೆ ಕೂಡ ಅಂಬಾನಿ ಕುಟುಂಬದ ಕಾರ್ಯಕ್ರಮಗಳಲ್ಲಿ ಮೂವರು ಭಾಗಿ ಆಗಿದ್ದಾರೆ. ಈ ಬಾಂಧವ್ಯದಿಂದಲೇ ಈ ಬಾರಿ ಕೂಡ ಮೂವರು ಅನಂತ್ ಮದುವೆ ಪೂರ್ವ ಸಮಾರಂಭದಲ್ಲಿ ಭಾಗಿ ಆಗಿದ್ದರು. ವೇದಿಕೆ ಏರಿ ಕುಣಿದರು. ಇದಕ್ಕಾಗಿ ಯಾವುದೇ ಸಂಭಾವನೆ ಪಡೆಯಲಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.


Click it and Unblock the Notifications











