ಜೈಲಿನಲ್ಲಿರುವ ಮಗನಿಗೆ 4500 ರು ಹಣ ಕಳಿಸಿದ ಶಾರುಖ್ ಖಾನ್
ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಸ್ತುತ ಮುಂಬೈನ ಆರ್ತರ್ ರಸ್ತೆಯ ಜೈಲಿನಲ್ಲಿದ್ದಾರೆ.
ಮಗನ ಬಂಧನ ಆದಾಗಿನಿಂದಲೂ ಶಾರುಖ್ ಖಾನ್ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಲ್ಲದೆ ಮಗನನ್ನು ನೋಡಲು ನ್ಯಾಯಾಲಯಕ್ಕಾಗಲಿ, ಜೈಲಿಗಾಗಲಿ ಹೋಗಿಲ್ಲ. ಆದರೆ ಈಗ ಜೈಲಿನಲ್ಲಿರುವ ಮಗನಿಗಾಗಿ 4500 ರು ಹಣವನ್ನು ಮನಿ ಆರ್ಡರ್ ಆಗಿ ಕಳಿಸಿದ್ದಾರೆ ಶಾರುಖ್ ಖಾನ್.
ಆರ್ತರ್ ರಸ್ತೆಯ ಜೈಲು ಸೂಪರಿಂಡೆಂಟ್ ಈ ಸುದ್ದಿಯನ್ನು ಖಾತ್ರಿಪಡಿಸಿದ್ದು, ಅಕ್ಟೋಬರ್ 11 ರಂದು ಆರ್ಯನ್ ಖಾನ್‌ಗೆ ಅವರ ಪೋಷಕರು 4500 ರು ಹಣ ಕಳಿಸಿದ್ದಾರೆ. ಜೈಲಿನ ಒಳಗೆ ಕ್ಯಾಂಟೀನ್ ಹಾಗೂ ಇತರೆ ಖರ್ಚುಗಳಿಗಾಗಿ 4500 ರು ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಇದು ಮಾತ್ರವೇ ಅಲ್ಲದೆ ಆರ್ಯನ್ ಖಾನ್ ಜೈಲಿನಿಂದಲೇ ತನ್ನ ಪೋಷಕರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾನೆ. ನ್ಯಾಯಾಂಗ ಬಂಧನದಲ್ಲಿ ಇರುವವರಿಗೆ ಕೆಲವು ಬಾರಿ ಕರೆ ಮಾಡುವ ಅವಕಾಶ ಇರುತ್ತದೆ ಅದನ್ನು ಬಳಸಿಕೊಂಡು ಆರ್ಯನ್ ಖಾನ್ ತಮ್ಮ ಪೋಷಕರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.
ಆರ್ಯನ್ ಖಾನ್ ಹಾಗೂ ಇತರ ಬಂಧಿತರನ್ನು ಆರ್ತರ್ ರೋಡ್‌ನಲ್ಲಿ ಸಾಮಾನ್ಯ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಅವರ ಕೋವಿಡ್ ವರದಿ ನೆಗೆಟಿವ್ ಬಂದಿದ್ದರಿಂದ ಅವರನ್ನು ಸಾಮಾನ್ಯ ಜೈಲಿಗೆ ವರ್ಗಾಯಿಸಲಾಗಿದೆ. ಆರ್ಯನ್ ಖಾನ್ ಇನ್ನೂ ಐದು ದಿನಗಳ ಕಾಲ ಜೈಲಿನಲ್ಲಿಯೇ ಇರಬೇಕಿದೆ. ಆ ನಂತರ ನ್ಯಾಯಾಲಯ ಏನು ಆದೇಶ ನೀಡುತ್ತದೆ ನೋಡಬೇಕಿದೆ.
ಆರ್ಯನ್ ಖಾನ್‌ರ ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಅಕ್ಟೋಬರ್ 20 ಕ್ಕೆ ಕಾಯ್ದಿರಿಸಲಾಗಿದ್ದು, ಅಂತು ಆದೇಶ ಆರ್ಯನ್ ಪರ ಬಂದರೆ ಆರ್ಯನ್ ಜಾಮೀನು ಪಡೆದು ಹೊರಬರುತ್ತಾರೆ. ಒಂದೊಮ್ಮೆ ಅವರಿಗೆ ವ್ಯತಿರಿಕ್ತವಾಗಿ ಬಂದರೆ ಅಕ್ಟೋಬರ್ 21 ಕ್ಕೆ ಅವರ ನ್ಯಾಯಾಂಗ ಬಂಧನ ಅವಧಿ ಮುಗಿಯಲಿದ್ದು, ಆ ನಂತರ ನ್ಯಾಯಾಲಯ ಏನು ಆದೇಶ ನೀಡುತ್ತದೆ ಎಂಬುದನ್ನು ನೋಡಬೇಕಿದೆ.
ಮುಂಬೈನ ಕೋರ್ಡೆಲಿಯಾ ಕ್ರೂಸ್‌ನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ಆರ್ಯನ್ ಖಾನ್ ಸೇರಿ ಒಂಬತ್ತು ಮಂದಿಯನ್ನು ವಶಕ್ಕೆ ಪಡೆದಿದ್ದರು. ಆರ್ಯನ್ ಖಾನ್ ಸ್ನೇಹಿತನೊಬ್ಬನಿಂದ ಡ್ರಗ್ಸ್ ಅನ್ನು ಸಹ ವಶಪಡಿಸಿಕೊಂಡಿದ್ದರು. ನಂತರ ಅಕ್ಟೋಬರ್ 03 ರಂದು ಆರ್ಯನ್ ಖಾನ್, ಅರ್ಬಾಜ್ ಸೇಠ್ ಮರ್ಚೆಂಟ್ ಹಾಗೂ ಮುನ್‌ಮುನ್ ಧಮೇಚಾ ಅವರುಗಳನ್ನು ಬಂಧಿಸಲಾಯ್ತು. ಆ ನಂತರ ಕ್ರೂಸ್‌ನಲ್ಲಿ ಪಾರ್ಟಿ ಆಯೋಜಿಸಿದ್ದ ಸಂಸ್ಥೆಯ ನೌಕರರನ್ನು ಸಹ ಬಂಧಿಸಲಾಗಿದ್ದು, ಒಟ್ಟು ಒಂಬತ್ತು ಮಂದಿಯು ನ್ಯಾಯಾಂಗ ಬಂಧನದಲ್ಲಿದ್ದಾರೆ.


Click it and Unblock the Notifications











