ಶಾರುಖ್ ಮಗಳು, ಅಮಿತಾಬ್ ಮೊಮ್ಮಗ, ಶ್ರೀದೇವಿ ಮಗಳು 1960ರ ಕತೆಯಲ್ಲಿ ಒಂದು!
ಬಾಲಿವುಡ್ ಎಂದರೆ ನೆಪೊಟಿಸಮ್ (ಸ್ವಜನಪಕ್ಷಪಾತ). ಪ್ರತಿಭೆ ಇಲ್ಲದಿದ್ದರೂ ಸ್ಟಾರ್‌ಗಳ ಮಕ್ಕಳಿಗೆ ಅವಕಾಶ ನೀಡುವ ಬಾಲಿವುಡ್‌ನ ಕೆಟ್ಟ ಪದ್ಧತಿ ಈಗಾಗಲೇ ಸಾಕಷ್ಟು ಟೀಕೆಗೆ ಒಳಗಾಗಿದೆ. ಹಾಗಿದ್ದರೂ ನೆಪೊಟಿಸಮ್ ಅನ್ನು ಬಿಟ್ಟಿಲ್ಲ ಬಾಲಿವುಡ್.
ಬಾಲಿವುಡ್‌ನಲ್ಲಿ ತಮ್ಮ ಭಿನ್ನ ಸಿನಿಮಾಗಳಿಂದ ಹೆಸರು ಮಾಡಿರುವ ಜೋಯಾ ಅಖ್ತರ್ ಸಹ ಇದೇ ಹಾದಿ ಹಿಡಿದಾಗ ಹಲವು ಸಿನಿಮಾ ಪ್ರಿಯರು ಬೇಸರ ವ್ಯಕ್ತಪಡಿಸಿದ್ದರು. ಜೋಯಾ ಅಖ್ತರ್ ಒಮ್ಮೆಲೆ ಮೂವರು ಸ್ಟಾರ್ ನಟರ ಮಕ್ಕಳನ್ನು ಸಿನಿಮಾಕ್ಕೆ ಎಳೆತಂದಿದ್ದಾರೆ.
ಜೋಯಾ ಅಖ್ತರ್ 'ಆರ್ಚಿಸ್' ಕಾಮಿಕ್ಸ್ ಅನ್ನು ಸಿನಿಮಾ ಮಾಡುತ್ತಿದ್ದು, ಸಿನಿಮಾದಲ್ಲಿ ಶಾರುಖ್ ಖಾನ್ ಪುತ್ರಿ, ಅಮಿತಾಬ್ ಬಚ್ಚನ್ ಮೊಮ್ಮಗ ಹಾಗೂ ಶ್ರೀದೇವಿಯ ಎರಡನೇ ಪುತ್ರಿಗೆ ಅವಕಾಶ ನೀಡಿದ್ದಾರೆ. ಇವರುಗಳು ಮಾತ್ರವೇ ಅಲ್ಲದೆ ಇನ್ನೂ ಕೆಲವು ಹೊಸ ನಟ-ನಟಿಯರು ಸಿನಿಮಾದಲ್ಲಿದ್ದಾರೆ.

ಆರ್ಚಿಸ್ ಆಂಗ್ಲದ ಬಹು ಜನಪ್ರಿಯ ಕಾದಂಬರಿ 1940 ರಲ್ಲಿ ಈ ಕಾರ್ಟೂನ್ ಅನ್ನು ಸೃಷ್ಟಿಸಲಾಗಿತ್ತು. ಈ ಕಾರ್ಟೂನ್ ಕತೆಗಳು ರಿವರ್‌ಡೆಲ್ ಎಂಬ ಕಾಲ್ಪನಿಕ ಸುಂದರ ಸ್ಥಳದಲ್ಲಿ ನಡೆಯುತ್ತವೆ. ಇದೀಗ ಜೋಯಾ ಅಖ್ತರ್ ಅದೇ ಕಾರ್ಟೂನ್ ಕತೆಗಳನ್ನು ಭಾರತೀಯ ಪರಿಸ್ಥಿತಿಗೆ ಒಗ್ಗಿಸಿದ್ದು, 1960 ರಲ್ಲಿ ನಡೆವ ಕತೆಯಂತೆ ಇವನ್ನು ಹೆಣೆದಿದ್ದಾರೆ.
ಸಿನಿಮಾದಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಶ್ರೀದೇವಿ ಎರಡನೇ ಮಗಳು ಖುಷಿ ಕಪೂರ್, ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ, ಮಿಹಿರ್ ಅಹುಜಾ, ಡಾಟ್, ವೇದಾಂಗ್ ರೈನಾ, ಯುವರಾಜ್ ಮೆಂಡಾ ಅವರಗಳು ನಟಿಸುತ್ತಿದ್ದಾರೆ.
ಸಿನಿಮಾ ಬಗ್ಗೆ ಜೋಯಾ ಅಖ್ತರ್ ಮಾತನಾಡಿದ್ದು, ತಮ್ಮ 'ಆರ್ಚೀಸ್' ಸಿನಿಮಾ ಸಹ ಸುಂದರವಾದ ಬೆಟ್ಟ ಗುಡ್ಡಗಳು, ಝರಿ, ಜಲಪಾತಗಳಿಂದ ಕೂಡಿದ ಊರಿನಲ್ಲಿ ನಡೆಯುವುದಾಗಿಯೂ. ಸಿನಿಮಾದಲ್ಲಿ ಗೆಳೆತನ, ಪ್ರೇಮ, ಪ್ರೀತಿ, ಹತಾಶೆ, ಕೋಪ ಎಲ್ಲವೂ ಇರುತ್ತದೆ. ಜೊತೆಗೆ ಇದೊಂದು ಸಂಗೀತಮಯ ಸಿನಿಮಾ ಆಗಿರಲಿದೆ ಎಂದಿದ್ದಾರೆ.
ಜೋಯಾ ಅಖ್ತರ್ ಈ ಹಿಂದೆ 'ಜಿಂದಗಿ ನಾ ಮಿಲೇಗಿ ದುಬಾರಾ', 'ಗಲ್ಲಿ ಬಾಯ್', 'ದಿಲ್ ಧಡಕ್ನೆ ದೊ', 'ಲಕ್ ಬೈ ಚಾನ್ಸ್' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರ ನಿರ್ದೇಶನದ 'ಗಲ್ಲಿ ಬಾಯ್' ಸಿನಿಮಾ ಆಸ್ಕರ್‌ಗೆ ಪ್ರವೇಶ ಪಡೆದಿತ್ತು. ಆದರೆ ಮೊದಲ ಸುತ್ತಿನಿಂದ ನಿರ್ಗಮಿಸಿತು. ಇದೀಗ ವಿಶ್ವವಿಖ್ಯಾತ ಕಾರ್ಟೂನ್ ಅನ್ನು ಹಿಂದಿಗೆ ರೂಪಾಂತರಗೊಳಿಸಿ ತೆರೆಗೆ ತುರುತ್ತಿದ್ದಾರೆ ಸಿನಿಮಾವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.


Click it and Unblock the Notifications











