"ಸೂರ್ಯ ಏಕಾಂಗಿ.. ಬೆಳಕು ನೀಡಲು ಕತ್ತಲಿನಿಂದ ಹೊರಬರುತ್ತಾನೆ"; ಪಠಾಣ್ ಸಕ್ಸಸ್‌ಗೆ ಶಾರುಖ್ ವಿಶೇಷ ಸಾಲುಗಳು!
ಬಾಲಿವುಡ್ ಕಿಂಗ್ ಖಾನ್ ಎಂದೇ ಖ್ಯಾತಿಯನ್ನು ಪಡೆದಿರುವ ಸ್ಟಾರ್ ನಟ ಶಾರುಖ್ ಖಾನ್ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಹೌದು, ಕಳೆದ ತಿಂಗಳ 25ರಂದು ತೆರೆಗೆ ಬಂದ ಸಿದ್ಧಾರ್ಥ್ ಆನಂದ್ ನಿರ್ದೇಶನದ, ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಪಠಾಣ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ.
ಬಿಡುಗಡೆ ದಿನವೇ ಬರೋಬ್ಬರಿ 106 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ ಪಠಾಣ್ ಸಿನಿಮಾ ಸದ್ಯ ನಿನ್ನೆಯವರೆಗೂ 865 ಕೋಟಿ ರೂಪಾಯಿಗಳನ್ನು ಗಳಿಸಿದ್ದು, ಅಬ್ಬರಿಸುತ್ತಿದೆ. ಇನ್ನು ಈ ಚಿತ್ರ ಇಷ್ಟರ ಮಟ್ಟಿಗೆ ಕಲೆಕ್ಷನ್ ಮಾಡುತ್ತಿರುವುದು ನಿಜಕ್ಕೂ ಸಾಧನೆಯೇ ಸರಿ. ಕಳೆದ ವರ್ಷ ಬಿಡುಗಡೆಗೊಂಡ ಬಹುತೇಕ ಎಲ್ಲಾ ಬಾಲಿವುಡ್ ಸ್ಟಾರ್ ನಟರ ಚಿತ್ರಗಳೂ ಸಹ ಬಾಯ್‌ಕಟ್ ಟ್ರೆಂಡ್‌ಗೆ ಸಿಲುಕಿ ಮಕಾಡೆ ಮಲಗಿದವು.
ಇನ್ನು ಬಾಯ್‌ಕಟ್ ಟ್ರೆಂಡ್‌ನ ಅಡಿಯಲ್ಲಿ ಈ ಪಠಾಣ್ ಚಿತ್ರವನ್ನೂ ಸಹ ತುಳಿಯುವ ಪ್ರಯತ್ನಗಳು ನಡೆದವು. ಚಿತ್ರ ಬಿಡುಗಡೆಯಾಗುವ ಮುನ್ನವೇ ಚಿತ್ರದ ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ ವಿರುದ್ಧ ಕಿಡಿಕಾರಿದ್ದ ನೆಟ್ಟಿಗರು ಚಿತ್ರವನ್ನು ಬಾಯ್‌ಕಟ್ ಮಾಡಬೇಕು ಎಂದಿದ್ದರು ಹಾಗೂ ಪಠಾಣ್ ಚಿತ್ರದ ಪೋಸ್ಟರ್‌ಗಳಿದ್ದ ಚಿತ್ರಮಂದಿರಗಳಿಗೆ ನುಗ್ಗಿ ಪೋಸ್ಟರ್ ಹಾಗೂ ಸ್ಟಾಂಡಿಗಳನ್ನು ಹರಿದು ಆಕ್ರೋಶ ಹೊರಹಾಕಿ ವಿರೋಧ ವ್ಯಕ್ತಪಡಿಸಿದ್ದರು.

ಹೀಗೆ ಬೃಹತ್ ವಿರೋಧವನ್ನು ಎದುರಿಸಿದ್ದ ಪಠಾಣ್ ಸಿನಿಮಾ ಬಿಡುಗಡೆಯಾದ ಬಳಿಕ ಆ ಎಲ್ಲಾ ವಿರೋಧಗಳನ್ನು ಬದಿಗೆ ಸರಿಸಿ ತನ್ನ ಬಾವುಟವನ್ನು ಹಾರಿಸಿದೆ. ಹಲವು ದಿನಗಳ ಬಳಿಕ ಬಾಲಿವುಡ್ ಚಿತ್ರವೊಂದು 800 ಕೋಟಿ ಕಲೆಕ್ಷನ್ ದಾಟಿದ ದಾಖಲೆ ಬರೆದಿದೆ. ಈ ಮೂಲಕ ಶಾರುಖ್ ಖಾನ್ ಹಾಗೂ ಬಾಲಿವುಡ್ ಕಮ್‌ಬ್ಯಾಕ್ ಆದಂತಾಗಿದೆ.
ಹೀಗೆ ಚಿತ್ರ ದೊಡ್ಡ ಮಟ್ಟದಲ್ಲಿ ಗೆದ್ದ ಖುಷಿಯನ್ನು ನಟ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 'ಸೂರ್ಯ ಏಕಾಂಗಿ.. ಅವರು ಸುಡುತ್ತಾನೆ.. ಹಾಗೂ ಬೆಳಕು ನೀಡಲು ಕತ್ತಲಿನಿಂದ ಹೊರಬರುತ್ತಾನೆ. ಪಠಾಣ್ ಮೇಲೆ ಸೂರ್ಯನ ಬೆಳಕು ಬೀಳಲು ಕಾರಣಕರ್ತರಾದ ಎಲ್ಲರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ ಹಾಗೂ ತಮ್ಮ ಸೂರ್ಯನ ಬೆಳಕಿನೊಂದಿಗಿನ ತಮ್ಮ ಸೆಲ್ಫಿ ಚಿತ್ರವನ್ನೂ ಸಹ ಹಂಚಿಕೊಂಡಿದ್ದಾರೆ. ಈ ಮೂಲಕ ಪಠಾಣ್ ಗೆಲುವಿಗೆ ಕಾರಣರಾದ ತಮ್ಮ ಅಭಿಮಾನಿಗಳು ಹಾಗೂ ಸಿನಿ ರಸಿಕರಿಗೆ ಶಾರುಖ್ ಖಾನ್ ಧನ್ಯವಾದ ತಿಳಿಸಿದ್ದಾರೆ.


Click it and Unblock the Notifications











