'ಜವಾನ್' ಅಡ್ವಾನ್ಸ್ ಬುಕ್ಕಿಂಗ್ ನಂಬರ್‌ಗಳು ನಿಜವೇ ಎಂದು ಕೇಳಿದವರಿಗೆ ಶಾರುಖ್ ಖಾನ್ ಹೇಳಿದ್ದೇನು?
ಜವಾನ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಶಾರುಖ್ ಖಾನ್ ಅಭಿಮಾನಿಗಳು ಭಾರಿ ಉತ್ಸಾಹದಲ್ಲಿದ್ದಾರೆ. ನೆಚ್ಚಿನ ನಟನ ಸಿನಿಮಾ ಬಿಡುಗಡೆಯನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ಈಗಾಗಲೇ ಜವಾನ್ ಆಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು ದಾಖಲೆ ಮಟ್ಟದಲ್ಲಿ ಟಿಕೆಟ್ ಮಾರಾಟವಾಗಿವೆ.
ಕಳೆದ ಮೂರು ದಿನಗಳಲ್ಲೇ ಜವಾನ್ ಸಿನಿಮಾದ 2 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಇದಕ್ಕೆ ಎಸ್‌ಆರ್‌ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದರೇ, ಮತ್ತೆ ಕೆಲವರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಅದು ನೇರವಾಗಿ ಶಾರುಖ್ ಅವರನ್ನೇ!.

ಎರಡು ಲಕ್ಷ ಟಿಕೆಟ್ ಮಾರಾಟ ನಿಜವೇ?
ಶಾರುಖ್ ಖಾನ್ ಭಾನುವಾರ ಟ್ವಿಟರ್‌ನಲ್ಲಿ 'ಆಸ್ಕ್ ಎಸ್‌ಆರ್‌ಕೆ' ಸೆಷನ್ ನಡೆಸಿದ್ದಾರೆ. ಈ ವೇಳೆ ಅಭಿಮಾನಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. "ಜವಾನ್ ಬಿಡುಗಡೆಗೆ 4 ದಿನಗಳು ಬಾಕಿಯಿದೆ. ಅಲ್ಲಿಯವರೆಗೆ ನಾವು ಮಾತನಾಡೋಣ. ಜವಾನ್ ಮತ್ತು ಜೀವನದ ಎಲ್ಲಾ ವಿಷಯಗಳ ಬಗ್ಗೆ ಸ್ವಲ್ಪ ಹಂಚಿಕೊಳ್ಳೋಣ. ಇದು ಭಾನುವಾರದ ಸೆಷನ್" ಎಂದು ಹೇಳಿದ್ದರು.
ಈ ವೇಳೆ ಕವಾನ್ ಬುಕ್ಕಿಂಗ್ ಬಗ್ಗೆ ಶಾರುಖ್ ಖಾನ್ ಅವರನ್ನು ಪ್ರಶ್ನೆ ಮಾಡಲಾಗಿದೆ. ಯಾರೋ ಒಬ್ಬರು, "ಜವಾನ್ ಮುಂಗಡ ಬುಕಿಂಗ್ ಸಂಖ್ಯೆಗಳು ಎಷ್ಟು ನಿಜ ಮತ್ತು ಎಷ್ಟು ನಕಲಿ?" ಎಂದು ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ "ಈ ಸೋಷಿಯಲ್ ಮಿಡಿಯಾದವರಂತೆ ಸುಮ್ಮನೆ ಕೆಟ್ಟ ಮಾತು ಆಡಬೇಡಿ. ಎಲ್ಲದರ ಬಗ್ಗೆ ಸಕಾರಾತ್ಮಕ ಆಲೋಚನೆಗಳು ಮತ್ತು ಒಳ್ಳೆಯ ಭಾವನೆಗಳು ಇರಲಿ. ಇದು ಜೀವನಕ್ಕೆ ಉತ್ತಮ" ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಜವಾನ್ ಹಿಂದಿಯಲ್ಲಿ (2D) 12.17 ಕೋಟಿ (ಒಟ್ಟು) ಗಳಿಸುವ 4 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮತ್ತು IMAX ನಲ್ಲಿ 78.58 ಲಕ್ಷಕ್ಕೂ ಹೆಚ್ಚು ಮೌಲ್ಯದ ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ.
ಪ್ರೇಯಸಿಗೆ ಉಚಿತ ಟಿಕೆಟ್ ಕೇಳಿದ ಅಭಿಮಾನಿ
ಇದೇ ವೇಳೆ ಶಾರುಖ್ ಕೂಡ ಜವಾನ್ ಬಗ್ಗೆ ಹಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ಬಳಕೆದಾರರಲ್ಲಿ ಒಬ್ಬರು, "ನೀವು ನನ್ನ ಗರ್ಲ್‌ಫ್ರೆಂಡ್‌ಗೆ ಜವಾನ್ ಉಚಿತ ಟಿಕೆಟ್ ನೀಡಬಹುದೇ? ನಾನು ಉಪಯೋಗಕ್ಕೆ ಬರದ ಬಾಯ್‌ಫ್ರೆಂಡ್" ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಶಾರುಖ್ ಖಾನ್, ನನ್ನ ಪ್ರೀತಿ ಮಾತ್ರ ಉಚಿತ! ಸಿನಿಮಾ ಟಿಕೆಟ್‌ಗೆ ಹಣ ನೀಡಬೇಕು. ಪ್ರೀತಿಯಲ್ಲಿ ಚೀಪ್ ಆಗಬೇಡಿ ಹೋಗಿ ಟಿಕೆಟ್ ಖರೀದಿಸಿ ... ಮತ್ತು ನಿಮ್ಮ ಗರ್ಲ್‌ಫ್ರೆಂಡ್ ಅನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿ" ಎಂದಿದ್ದಾರೆ.

ಶಾರುಖ್ ಖಾನ್‌ಗೆ ಅನೇಕರು ತಾವು ಮುಂಗಡ ಬುಕ್ಕಿಂಗ್ ಮಾಡಿರುವ ಟಿಕೆಟ್‌ಗಳನ್ನು ತೋರಿಸಿದ್ದಾರೆ. ಜೊತೆಗೆ ಮೊದಲ ಬಾರಿಗೆ ನಯನತಾರಾ ಅವರೊಂದಿಗೆ ನಟಿಸಿರುವ ಕುರಿತು ಮಾತನಾಡಿದ ಅವರು, "ನಯನತಾರ ತುಂಬಾ ಸುಂದರ ಮತ್ತು ಅದ್ಭುತವಾದ ನಟಿ. ತಮಿಳುನಾಡಿನಲ್ಲಿರುವ ಅವರ ಅಭಿಮಾನಿಗಳು ಆಕೆಯನ್ನು ಇನ್ನು ಹೆಚ್ಚು ಪ್ರೀತಿಸುತ್ತಾರೆ. ಹಿಂದಿ ಪ್ರೇಕ್ಷಕರು ಅವರ ಶ್ರಮವನ್ನು ಮೆಚ್ಚುತ್ತಾರೆ ಎಂದು ಭಾವಿಸುತ್ತೇವೆ" ಎಂದು ಹೇಳಿದ್ದಾರೆ.
ಜವಾನ್
ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಾಣದ ಜವಾನ್ ಚಿತ್ರಕ್ಕೆ ಅಟ್ಲಿ ನಿರ್ದೇಶನವಿದೆ. ಶಾರುಖ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ ಮತ್ತು ದೀಪಿಕಾ ಪಡುಕೋಣೆ (ಅತಿಥಿ ಪಾತ್ರದಲ್ಲಿ) ಸಹ ಇದ್ದಾರೆ. ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ಡೋಗ್ರಾ ಮತ್ತು ಸುನಿಲ್ ಗ್ರೋವರ್ ಕೂಡ ಚಿತ್ರದ ಭಾಗವಾಗಿದ್ದಾರೆ.


Click it and Unblock the Notifications











