ಪಂತ್ ನೋ ಲುಕ್ ಶಾಟ್‌ಗೆ ಶಾರುಖ್ ಫಿದಾ; ಪಂದ್ಯದ ಬಳಿಕ ಆತ್ಮೀಯ ಅಪ್ಪುಗೆ
ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಮತ್ತೆ ತಮ್ಮ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದ್ದಾರೆ. ಐಪಿಎಲ್ 17ನೇ ಸೀಸನ್‌ನಲ್ಲಿ ರನ್ ಹೊಳೆ ಹರಿಸುತ್ತಿದ್ದಾರೆ. ತಮ್ಮ ಅದ್ಭುತ ಪ್ರದರ್ಶನದಿಂದ ಎದುರಾಳಿ ತಂಡದ ಆಟಗಾರರು ಹಾಗೂ ಮಾಲೀಕರ ಮನಸ್ಸನ್ನು ಗೆದ್ದಿದ್ದಾರೆ. ರಿಷಬ್ ಪಂತ್ ಆಟಕ್ಕೆ ನಟ, ಕೆಕೆಆರ್ ತಂಡದ ಮಾಲೀಕ ಶಾರುಖ್ ಖಾನ್ ಮನಸೋತಿದ್ದಾರೆ.
ನಿನ್ನೆ (ಏಪ್ರಿಲ್ 4) ವಿಶಾಖಪಟ್ಟಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಬಾಲಿವುಡ್ ಕಿಂಗ್ ಖಾನ್ ವೀಕ್ಷಿಸಿದರು. ಪಂದ್ಯದ ಬಳಿಕ ಮೈದಾನಕ್ಕಿಳಿದ ಶಾರುಖ್ ಕೆಕೆಆರ್ ಆಟಗಾರರ ಜೊತೆ ಮಾತ್ರವಲ್ಲದೇ ಡೆಲ್ಲಿ ಆಟಗಾರರ ಜೊತೆಗೂ ಮಾತನಾಡಿದ್ದು ಕಂಡು ಬಂತು. ವಿಶೇಷವಾಗಿ ರಿಷಬ್ ಪಂತ್ ಆಟ ಮೆಚ್ಚಿದ ಶಾರುಖ್ ಅವರನ್ನು ಪ್ರೀತಿಪೂರ್ವಕವಾಗಿ ಅಪ್ಪಿಕೊಂಡರು. ಈ ದೃಶ್ಯ ಕೆಕೆಆರ್ ಹಾಗೂ ಡಿಸಿ ಅಭಿಮಾನಿಗಳಿಗೆ ಸಂತಸ ತಂದಿದೆ.

ಪಂದ್ಯವನ್ನು ಶಾರುಖ್ ಖಾನ್ ಬಹಳ ಎಂಜಾಯ್ ಮಾಡಿದರು. ಉಭಯ ತಂಡಗಳ ಬ್ಯಾಟಿಂಗ್ ವೇಳೆ ಬಹಳ ಜೋಶ್‌ನಿಂದ ಚಪ್ಪಾಳೆ ತಟ್ಟಿ, ಕೇಕೆ ಹಾಕಿ ಸಂಭ್ರಮಿಸಿದರು. ಅದರಲ್ಲೂ ರಿಷಬ್ ಪಂತ್ ತನ್ನ ಅದ್ಭುತ ಹೊಡೆತಗಳ ಮೂಲಕ ಕೆಕೆಆರ್ ಬೌಲರ್‌ಗಳನ್ನು ಬೆಂಡೆತ್ತಿದರು. ಆದರೂ ಆತನನ್ನು ಪ್ರಶಂಸಿಸದೇ ಇರಲು ಶಾರುಖ್‌ಗೆ ಸಾಧ್ಯವಾಗಲಿಲ್ಲ. ಬಾಲಿವುಡ್ ಬಾದ್‌ಶಾ ಈ ಗುಣಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಡಿಸಿ ತಂಡದ ನಾಯಕನ ಆಕರ್ಷಕ ನೋ ಲುಕ್ ಶಾಟ್ ನೋಡಿ ಕಿಂಗ್ ಎದ್ದು ನಿಂತು ಶಾರುಖ್ ಚಪ್ಪಾಳೆ ತಟ್ಟಿದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ವೆಂಕಟೇಶ್ ಅಯ್ಯರ್ ಎಸೆದ 12ನೇ ಓವರ್‌ನಲ್ಲಿ ರಿಷಬ್ ಪಂತ್ ಅಬ್ಬರಿಸಿ ಬೊಬ್ಬಿರಿದರು. ಆ ಓವರ್‌ನಲ್ಲಿ ಪಂತ್ 28 ರನ್ ಗಳಿಸಿದರು. ಅಯ್ಯರ್ ಎಸೆದ ಫುಲ್ ಲೆಂಗ್ತ್ ಎಸೆತವನ್ನು ಲೆಗ್ ಸೈಡ್ ಫ್ಲಿಕ್ ಶಾಟ್ ಬಾರಿಸಿದರು. ನಿಂತಲ್ಲೇ ಹೆಚ್ಚು ಬಲವನ್ನು ಬಳಸದೇ ತನ್ನ ಮೊಣಕಾಲುಗಳು ಹಾಗೂ ಕೈಗಳ ಸಹಾಯದಿಂದ ಪರ್ಫೆಕ್ಟ್ ಟೈಮಿಂಗ್‌ನಲ್ಲಿ ಚೆಂಡನ್ನು ಫ್ಲಿಕ್ ಮಾಡಿದರು. ಕೇವಲ ಬಾಲ್ ಬಂದಾಗ ಮಾತ್ರ ನೋಡಿದ ಪಂತ್ ಬಳಿಕ ಶಾಟ್ ಮುಗಿಸಿದ ಮೇಲೆ ತಿರುಗಿ ನೋಡಿದರು. ಈ ಶಾಟ್ ನಿಜಕ್ಕೂ ಸಖತ್ ಮಜವಾಗಿತ್ತು. ಶಾರುಖ್ ಖಾನ್ ಕೂಡ ಫಿದಾ ಆಗಿ ಬಿಟ್ಟರು.
25 ಎಸೆತಗಳಲ್ಲಿ 4 ಬೌಂಡರಿ 5 ಸಿಕ್ಸರ್ ಸೇರಿ ರಿಷಬ್ ಪಂತ್ ಒಟ್ಟು 55 ರನ್ ಗಳಿಸಿದರು. ಆದರೂ ಕೆಕೆಆರ್ ನೀಡಿದ 272 ರನ್‌ಗಳ ಬೃಹತ್ ಟಾರ್ಗೆಟ್ ಅನ್ನು ಚೇಸ್ ಮಾಡಲು ದೆಹಲಿ ತಂಡಕ್ಕೆ ಸಾಧ್ಯವಾಗಲಿಲ್ಲ. 166 ರನ್‌ಗಳಿಗೆ ತಂಡ ಆಲ್‌ಔಟ್ ಆಯಿತು. ಸೋಲಿನ ಹೊರತಾಗಿಯೂ, ಪಂತ್ ಹಾಗೂ ಸ್ಟಬ್ಸ್ ಆಟ ಎಲ್ಲರ ಮೆಚ್ಚುಗೆ ಪಾತ್ರವಾಯಿತು.

ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿರುವ ಪಂತ್, ಬ್ಯಾಟಿಂಗ್‌ನಲ್ಲಿ ಕೂಡ ಅಬ್ಬರಿಸುತ್ತಿದ್ದಾರೆ. ಐಪಿಎಲ್-2024 ರಲ್ಲಿ ಆಡಿದ 4 ಇನ್ನಿಂಗ್ಸ್‌ಗಳಲ್ಲಿ ಒಟ್ಟು 152 ರನ್ ಗಳಿಸಿದ್ದಾರೆ. ಸತತ 2 ಅರ್ಧಶತಕ ಬಾರಿಸಿದ್ದಾರೆ.
ಕೆಕೆಆರ್ Vs ಡಿಸಿ ಪಂದ್ಯ ನೋಡಲು ವಿಶಾಖಪಟ್ಟಣಕ್ಕೆ ಹೀಗಿ ಇಳಿದ ಶಾರುಖ್ ಖಾನ್‌ಗೆ ಭರ್ಜರಿ ಸ್ವಾಗತವೇ ಲಭಿಸಿತು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಪೊಲೀಸರ ಭದ್ರತೆಯೊಂದಿಗೆ ನೋವೊಟೆಲ್ ಸೇರಿಕೊಂಡರ. 2 ದಿನಗಳ ಕಾಲ ಅಲ್ಲೇ ಬೀಡುಬಿಟ್ಟಿದ್ದಾರೆ. ಗುರುವಾರವೂ ಕೆಲ ಕಾರ್ಯಕ್ರಮಗಳಲ್ಲಿ ಭಾಗಿ ಆಗಿ ಬಳಿಕ ಮುಂಬೈಗೆ ಕಿಂಗ್ ಖಾನ್ ವಾಪಸ್ ಆಗಲಿದ್ದಾರೆ.


Click it and Unblock the Notifications











