ಶಾರುಖ್ ಕಣ್ಣಿಗೆ ಏನಾಯ್ತು? ಸರ್ಜರಿಗಾಗಿ ವಿದೇಶಕ್ಕೆ ಹೊರಟ್ರಾ ಕಿಂಗ್‌ಖಾನ್?
ಬಾಲಿವುಡ್ ನಟ ಶಾರುಖ್ ಖಾನ್ ಅಮೆರಿಕಾಗೆ ಹೊರಟುನಿಂತಿದ್ದಾರೆ. ಚಿಕಿತ್ಸೆಗಾಗಿ ಅವರು ವಿದೇಶಕ್ಕೆ ತೆರಳುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳಲ್ಲಿ ಕಿಂಗ್ ಖಾನ್ ನಟಿಸಿದ್ದರು. ಈ ವರ್ಷ ಯಾವುದೇ ಸಿನಿಮಾ ಶುರುವಾಗಿಲ್ಲ.
ಕಿಂಗ್ ಖಾನ್‌ಗೆ ಕಣ್ಣಿನ ಸಮಸ್ಯೆ ಎದುರಾಗಿದ್ದರು ಚಿಕಿತ್ಸೆ ಪಡೆಯಲು ಯೂಸ್‌ಗೆ ಹೋಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅಲ್ಲಿ ಸರ್ಜರಿ ನಡೆಯುತ್ತದೆ ಎಂದು ಕೂಡ ಗುಸುಗುಸು ಕೇಳಿಬರ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಶಾರುಖ್ ಖಾನ್ ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಿಗಬೇಕಿದೆ.

ಶಾರುಖ್ ಜೊತೆಗೆ ಪತ್ನಿ ಗೌರಿ ಖಾನ್ ಹಾಗೂ ಪುತ್ರ ಆರ್ಯನ್ ಖಾನ್ ಕೂಡ ಅಮೆರಿಕಕ್ಕೆ ತೆರಳಲಿದ್ದಾರಂತೆ. ಬಾದ್ ಷಾ ಕಣ್ಣಿನ ಸಮಸ್ಯೆಯಿಂದ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಈ ವರ್ಷ ಕೋಲ್ಕತ್ತಾದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಶಾರುಖ್ ಖಾನ್ ಬಿಸಿಲಿನಿಂದ ಬಳಲಿದ್ದು ಗೊತ್ತೇ ಇದೆ. 2014ರಲ್ಲಿ ಕಿಂಗ್ ಖಾನ್ ಕಣ್ಣಿನ ಶಸ್ತ್ರ ಚಿಕಿತ್ಸೆ ಆಗಿತ್ತು. ಈ ಬಗ್ಗೆ ಹೇಳಿದ್ದರು.
ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ಶಾರುಖ್ ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಎದುರಾಗಿದ್ದು ಚಿಕಿತ್ಸೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ನಿನ್ನೆ(ಜುಲೈ 29) ಕಣ್ಣಿನ ಚೆಕ್‌ಅಪ್‌ಗಾಗಿ ಕಿಂಗ್ ಖಾನ್ ಮುಂಬೈನ ಆಸ್ಪತ್ರೆಗೆ ಹೋಗಿದ್ದರಂತೆ. ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲು ಸೂಚಿಸಿದ್ದಾರೆ, ಹಾಗಾಗಿ ಶಾರುಖ್ ಅಮೆರಿಕಾಗೆ ಹೊರಟು ನಿಂತಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ.
ಇನ್ನೆರಡು ದಿನಗಳಲ್ಲಿ ಶಾರುಖ್ ಅಮೆರಿಕಾಗೆ ಹೋಗಬಹುದು ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಕಿಂಗ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಯಾವುದೇ ಮಾಹಿತಿ ನೀಡಿಲ್ಲ. ಸುಜಯ್ ಘೋಷ್ ನಿರ್ದೇಶನದ 'ಕಿಂಗ್' ಎನ್ನುವ ಚಿತ್ರದಲ್ಲಿ ಶಾರುಖ್ ಖಾನ್ ನಟಿಸಬೇಕಿದೆ. ಈ ಚಿತ್ರದಲ್ಲಿ ಮಗಳು ಸುಹಾನಾ ಹಾಗೂ ಅಭಿಷೇಕ್ ಬಚ್ಚನ್ ಸಹ ಬಣ್ಣ ಹಚ್ಚಲಿದ್ದಾರೆ.
ಕಳೆದ ವರ್ಷ 'ಪಠಾನ್', 'ಜವಾನ್' ಹಾಗೂ ಡಂಕಿ ಹೀಗೆ 3 ಸಿನಿಮಾಗಳಲ್ಲಿ ಕಿಂಗ್ ಖಾನ್ ನಟಿಸಿದ್ದರು. ಜೀರೊ ಸಿನಿಮಾ ಸೋಲಿನ ಬಳಿಕ ಸೈಲೆಂಟ್ ಆಗಿದ್ದ ಕಿಂಗ್ ಖಾನ್ ಕೊನೆಗೆ 'ಪಠಾನ್' ಆಗಿ ಗೆದ್ದಿದ್ದರು. ಇನ್ನು ಜವಾನ್ ಚಿತ್ರವನ್ನು ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಟಿಸಿ ಸಕ್ಸಸ್ ಕಂಡರು. ಈ ಎರಡೂ ಸಿನಿಮಾಗಳು 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಇನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಿನಿಮಾ ಕೂಡ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು.


Click it and Unblock the Notifications










