Salaar Vs Dunki: ಪ್ರಭಾಸ್- ಶಾರುಖ್ ಫೈಟ್ ಕನ್ಫರ್ಮ್: ಆದ್ರು 'ಡಂಕಿ' ರಿಲೀಸ್ ಡೇಟ್‌ನಲ್ಲಿ ಬದಲಾವಣೆ ಯಾಕೆ?
ಕ್ರಿಸ್‌ಮಸ್ ಸಂಭ್ರಮದಲ್ಲಿ ಬಾಕ್ಸಾಫೀಸ್‌ನಲ್ಲಿ ಸಲಾರ್ ವರ್ಸಸ್ ಡಂಕಿ ಫೈಟ್ ಪಕ್ಕಾ ಆಗಿದೆ. 'ಸಲಾರ್' ರಿಲೀಸ್ ಡೇಟ್ ಬದಲಾಗಿದ್ದೇ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 28ಕ್ಕೆ ಬರಬೇಕಿದ್ದ ಪ್ರಭಾಸ್ ಸಿನಿಮಾ ರಿಲೀಸ್ ಡೇಟ್ ಡಿಸೆಂಬರ್ 22ಕ್ಕೆ ಮುಂದೂಡಲಾಗಿದೆ. ಆದರೆ ಅದೇ ದಿನ ಶಾರುಖ್ ನಟನೆಯ 'ಡಂಕಿ' ರಿಲೀಸ್ ಮಾಡೋದಾಗಿ ಮೊದ್ಲೆ ಘೋಷಿಸಲಾಗಿತ್ತು.
ದಿಢೀರನೇ 'ಸಲಾರ್' ಸಿನಿಮಾ ಡಿಸೆಂಬರ್ 22ಕ್ಕೆ ರಿಲೀಸ್ ಅಂದಾಗ ಸಹಜವಾಗಿಯೇ ಬಾಕ್ಸಾಫೀಸ್ ಕ್ಲ್ಯಾಶ್ ಲೆಕ್ಕಾಚಾರ ಶುರುವಾಯಿತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತು. 'ಡಂಕಿ' ರಿಲೀಸ್ ಪೋಸ್ಟ್‌ಪೋನ್ ಆಗುತ್ತದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಅದನ್ನು ಚಿತ್ರತಂಡ ನಿರಾಕರಿಸಿತ್ತು. ಇದೀಗ 'ಡಂಕಿ' ಚಿತ್ರದ ಓವರ್‌ಸೀಸ್ ಡಿಸ್ಟ್ರಿಬ್ಯೂಟರ್ಸ್ ಚಿತ್ರದ ರಿಲೀಸ್ ಡೇಟ್ ಅನ್ನು ಹೊಸ ಪೋಸ್ಟರ್ ಸಮೇತ ಘೋಷಿಸಿದ್ದಾರೆ.

ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ 'ಡಂಕಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸೂಪರ್ ಹಿಟ್ ಸಿನಿಮಾಗಳ ಸರದಾರ ಹಿರಾನಿ ಹಾಗೂ ಕಿಂಗ್ ಖಾನ್ ಕಾಂಬಿನೇಷನ್ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಶಾರುಖ್ ಸೈನಿಕನ ಪಾತ್ರ ಮಾಡಿದ್ದಾರೆ ಎನ್ನಲಾಗ್ತಿದೆ. ಹೊಸ ಪೋಸ್ಟರ್‌ನಲ್ಲೂ ಇದನ್ನೇ ಹೈಲೆಟ್ ಮಾಡಲಾಗಿದೆ. ಕ್ರಿಸ್‌ಮಸ್ ಲಾಂಗ್ ವೀಕೆಂಡ್ ಟಾರ್ಗೆಟ್ ಮಾಡಿ ಚಿತ್ರವನ್ನು ಡಿಸೆಂಬರ್ 21ಕ್ಕೆ ರಿಲೀಸ್ ಮಾಡಲಾಗುತ್ತಿದೆ.
ಓವರ್‌ಸೀಸ್‌ನಲ್ಲಿ ಒಂದು ದಿನ ಮೊದ್ಲೆ 'ಡಂಕಿ' ಸಿನಿಮಾ ರಿಲೀಸ್ ಆಗಲಿದ್ದು ಭಾರತದಲ್ಲಿ ಡಿಸೆಂಬರ್ 22ಕ್ಕೆ ತೆರೆಗಪ್ಪಳಿಸುವ ಸಾಧ್ಯತೆಯಿದೆ. ಮತ್ತೊಂದು ಕಡೆ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ 'ಸಲಾರ್' ಕೂಡ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಎರಡೂ ಕೂಡ ದೊಡ್ಡ ಸಿನಿಮಾಗಳು. ಹಾಗಾಗಿ ಸಹಜವಾಗಿಯೇ ಬಾಕ್ಸಾಫೀಸ್‌ನಲ್ಲಿ ಫೈಟ್ ನಡೆಯುವ ಸಾಧ್ಯತೆಯಿದೆ. ಬಹುಕೋಟಿ ವೆಚ್ಚದಲ್ಲಿ ಎರಡೂ ಸಿನಿಮಾಗಳು ನಿರ್ಮಾಣವಾಗಿದೆ. ಸಾವಿರಾರು ಸ್ಕ್ರೀನ್‌ಗಳಲ್ಲಿ ಏಕಕಾಲಕ್ಕೆ ತೆರೆಗಪ್ಪಳಿಸಲಿವೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ 'ಸಲಾರ್' ಸಿನಿಮಾ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರ್ತಿದೆ. KGF ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರವನ್ನು ಕಟ್ಟಿಕೊಟ್ಟಿವೆ. ಅದರಲ್ಲೂ ಪ್ರಶಾಂತ್ ನೀಲ್ ಎಲಿವೇಷನ್ಸ್, ಪ್ರಭಾಸ್ ಪರ್ಫಾರ್ಮನ್ಸ್ ಮಿಕ್ಸ್ ಆದ್ರೆ ಹೇಗಿರುತ್ತೋ ಎಂದು ಕಲ್ಪಿಸಿಕೊಂಡೇ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಬರೀ ಪೋಸ್ಟರ್ ಹಾಗೂ ಸಣ್ಣ ಟೀಸರ್‌ನಿಂದ 'ಸಲಾರ್' ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಾಕ್ಕಿದೆ.
ಶಾರುಖ್ ಖಾನ್ ಕೂಡ ತಮ್ಮ ಸಿನಿಮಾ ಬಗ್ಗೆ ಬಹಳ ಕಾನ್ಫಿಡೆಂಟ್ ಆಗಿ ಇದ್ದಾರೆ. ಹಾಗಾಗಿ 'ಸಲಾರ್' ಎದುರು ತಮ್ಮ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ. ಈ ವರ್ಷ 'ಪಠಾಣ್' ಹಾಗೂ 'ಜವಾನ್' ಎರಡೂ ಸಿನಿಮಾಗಳು 1000 ಕೋಟಿ ರೂ. ಕ್ಲಬ್ ಸೇರಿವೆ. ಇದೇ ವರ್ಷ 'ಡಂಕಿ' ಸಿನಿಮಾ ಕೂಡ ರಿಲೀಸ್ ಆಗುತ್ತಿರುವುದು ಕಿಂಗ್ ಖಾನ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಸಲಾರ್' ಸಿನಿಮಾ ರಿಲೀಸ್ ಆಗಲಿದೆ. ಶ್ರುತಿ ಹಾಸನ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಜಗಪತಿ ಬಾಬು, ದೇವರಾಜ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕತೆಯ ಬಗ್ಗೆ ಸುಳಿವು ಬಿಟ್ಟುಕೊಡದೇ ಸಿನಿಮಾ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ ಪ್ರಶಾಂತ್ ನೀಲ್. ಇನ್ನು ರವಿ ಬಸ್ರೂರು ಮ್ಯೂಸಿಕ್, ಭುವನ್ ಗೌಡ ಛಾಯಾಗ್ರಹಣ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕಿದೆ.
'ಡಂಕಿ' ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ದಿಯಾ ಮಿರ್ಜಾ, ಬೊಮನ್ ಇರಾನಿ, ಧರ್ಮೇಂದ್ರ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಪ್ರೀತಂ ಸಂಗೀತವಿದೆ. ಶಾರುಖ್ ಖಾನ್ ಜೊತೆ ಸೇರಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ.


Click it and Unblock the Notifications











