ಪ್ರಿಯಾಂಕಾ ಮದುವೆ ಬಗ್ಗೆ ಕೇಳಿದ್ದಕ್ಕೆ, ಶಾರುಖ್ ಖಾನ್ ಹೀಗಾ ಹೇಳೋದು.?
ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಸದ್ಯದಲ್ಲಿಯೇ ಮದುವೆ ಆಗುತ್ತಿದ್ದಾರೆ ಎಂಬ ಗುಸುಗುಸು ಬಿಟೌನ್ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ಮದುವೆ ತಯಾರಿಗಾಗಿಯೇ 'ಭಾರತ್' ಚಿತ್ರದಿಂದ ಪ್ರಿಯಾಂಕಾ ಹೊರಬಂದರು ಎಂಬ ಗುಲ್ಲು ಕೂಡ ಹಬ್ಬಿದೆ.
ವೈಯುಕ್ತಿಕ ವಿಚಾರವಾಗಿ ಇಷ್ಟೆಲ್ಲಾ ಗಾಸಿಪ್ ಕೇಳಿಬರುತ್ತಿದ್ದರೂ, ಇಲ್ಲಿಯವರೆಗೂ ಪ್ರಿಯಾಂಕಾ ಛೋಪ್ರಾ ಆಗಲಿ ನಿಕ್ ಜೊನಾಸ್ ಆಗಲಿ ತುಟಿಕ್ ಪಿಟಿಕ್ ಎಂದಿಲ್ಲ. ಪ್ರಿಯಾಂಕಾ ಕುಟುಂಬ ಕೂಡ ಈ ಬಗ್ಗೆ ಸ್ಪಷ್ಟ ಚಿತ್ರಣ ನೀಡಿಲ್ಲ.
ಹೀಗಿರುವಾಗಲೇ, ಪ್ರಿಯಾಂಕಾ ಮದುವೆ ಬಗ್ಗೆ ಕಿಂಗ್ ಖಾನ್ ಶಾರುಖ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ''ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಮದುವೆ ಆಗ್ತಿರೋದು ನಿಜವೇ.?'' ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ ''ನಾನೂ ಕೂಡ ಮದುವೆ ಆಗುತ್ತಿರುವೆ. ಸದ್ಯದಲ್ಲಿಯೇ ಆಹ್ವಾನ ಪತ್ರಿಕೆ ನೀಡುವೆ. ರಿಸೆಪ್ಷನ್ ಗೂ ಇನ್ವೈಟ್ ಮಾಡುವೆ. ತಪ್ಪದೆ ಮೆಹಂದಿ ಕಾರ್ಯಕ್ರಮಕ್ಕೂ ಬನ್ನಿ'' ಅಂತ ಉತ್ತರಿಸಿದ್ದಾರೆ ಶಾರುಖ್ ಖಾನ್.

ಶಾರುಖ್ ಖಾನ್ ಕೊಟ್ಟಿರುವ ಈ ಪ್ರತಿಕ್ರಿಯೆ ನೋಡಿ, ಮಾಧ್ಯಮಗಳು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಪ್ರಿಯಾಂಕಾ ಮದುವೆ ಸುದ್ದಿಯನ್ನ ಶಾರುಖ್ ಖಚಿತ ಪಡಿಸಿಲ್ಲ, ತಳ್ಳಿಯೂ ಹಾಕಿಲ್ಲ. ಪ್ರಿಯಾಂಕಾ ಮದುವೆ ಮ್ಯಾಟರ್ ಬಿಟ್ಟು ತಮ್ಮ ಮದುವೆ ಅಂತ ನಗೆ ಚಟಾಕಿ ಹಾರಿಸಿದ್ದಾರೆ ಶಾರುಖ್.
ವರದಿಗಳ ಪ್ರಕಾರ, ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ನಿಶ್ಚಿತಾರ್ಥ ಮುಗಿದು ಹೋಗಿದೆ. ಪ್ರಿಯಾಂಕಾ ಹುಟ್ಟುಹಬ್ಬದ ದಿನವೇ, ಆಕೆಯ ಬೆರಳಿಗೆ ನಿಕ್ ಉಂಗುರ ತೊಡಿಸಿದರಂತೆ. ಇನ್ನೂ ಈ ವರ್ಷದ ಸೆಪ್ಟೆಂಬರ್ ನಲ್ಲಿ ಪ್ರಿಯಾಂಕಾ-ನಿಕ್ ಮದುವೆ ನಡೆಯಲಿದೆ ಎನ್ನಲಾಗಿದೆ. ಇದರಲ್ಲಿ ಸುಳ್ಳೆಷ್ಟು, ನಿಜವೆಷ್ಟು ಅನ್ನೋದು ಗೊತ್ತಿಲ್ಲ.


Click it and Unblock the Notifications











