ತಮ್ಮದೇ ಚಿತ್ರಗಳ ದಾಖಲೆ ಮುರಿದ ಅಜಯ್ ದೇವಗನ್ ; 'ಸಿಂಗಂ'ಗೆ ಸೆಡ್ಡು ಹೊಡೆದ 'ಶೈತಾನ್' ಗಳಿಸಿದ್ದೆಷ್ಟು ಕೋಟಿ..?
ಹಿಂದೆ ಎಲ್ಲ ಬಾಲಿವುಡ್ ನವರು, ಮಾತಿಗೂ ಮುನ್ನ ನಮ್ಮ ಸಿನಿಮಾದ ಗಳಿಕೆ ನೂರು ಕೋಟಿಯ ಗಡಿ ದಾಟಿದೆ ಎಂಬ ಮಾತುಗಳನ್ನಾಡ್ತಿದ್ದರು. ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದರು. ಆದರೆ ಆ ನಂತರ ಲೆಕ್ಕ ತಪ್ಪಿತು. ಸಲೀಸಾಗಿ ನೂರು ಕೋಟಿಯನ್ನ ಗಳಿಸುತ್ತಿದ್ದ ಬಾಲಿವುಡ್ ನಲ್ಲಿ ಐವತ್ತು ಕೋಟಿಗೂ ಹಾಹಾಕಾರ ಎದ್ದಿತು. ಕಳೆದ ವರ್ಷ ಹೊರತು ಪಡಿಸಿದರೆ, ಕೊರೊನಾ ನಂತರ ಬಾಲಿವುಡ್ ಅನುಭವಿಸಿದ್ದು ಬಹುತೇಕ ನಷ್ಟನೇ.
ಇಂಥ ಬಾಲಿವುಡ್ ಈ ವರ್ಷದ ಆರಂಭದಲ್ಲಿಯೂ ಸೋಲನ್ನ ಅನುಭವಿಸಿದೆ. ದೊಡ್ಡದಾದ ಗೆಲುವನ್ನ ಪಡೆಯುವಲ್ಲಿ ವಿಫಲವಾಗಿದೆ. ಆದರೆ ಈಗ 2024ರಲ್ಲಿನ ಎರಡೂವರೆ ತಿಂಗಳು ಉರುಳಿದ ನಂತರ, ಹಿಂದಿ ಉದ್ಯಮದಲ್ಲಿ ಒಂದು ಅಲೆ ಎದ್ದಿದೆ. ಆ ಅಲೆಯ ಹೆಸರು ಶೈತಾನ್.

ಹೌದು, ಸೋಲಿನಿಂದ ಕಂಗೆಟ್ಟಿದ್ದ ಹಿಂದಿ ಚಿತ್ರರಂಗಕ್ಕೆ ಶೈತಾನ್ ಆಸರೆಯಾಗಿದೆ. ಚಿತ್ರದ ಗಳಿಕೆ ನೂರು ಕೋಟಿಯ ಗಡಿಯನ್ನ ದಾಟಿದೆ. ಈ ಕಾರಣಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಬಾಲಿವುಡ್ ಸದ್ಯಕ್ಕೆ ಶೈತಾನ್ ಚಿತ್ರದ ಗೆಲುವನ್ನ ಸಂಭ್ರಮಿಸುತ್ತಿದೆ.
ತಮ್ಮದೇ ಚಿತ್ರದ ದಾಖಲೆಗಳನ್ನ ಮುರಿದ ಅಜಯ್ ದೇವಗನ್..!
ಶೈತಾನ್ ಚಿತ್ರದ ಮೂಲಕ, ಅಜಯ್ ದೇವಗನ್ ತಮ್ಮದೇ ಕೆಲ ಚಿತ್ರಗಳ ದಾಖಲೆಯನ್ನ ಮುರಿದಿದ್ದಾರೆ. ಹೌದು, 2011ರಲ್ಲಿ ಅಜಯ್ ದೇವಗನ್ ಅಭಿನಯಿಸಿದ್ದ ಸಿಂಗಂ ಭಾರತದಲ್ಲಿ 100 ಕೋಟಿ ಗಳಿಸಿತ್ತು. ಆ ನಂತರ ಬಂದ ಬೋಲ್ ಬಚ್ಚನ್ ಕೂಡ 102 ಕೋಟಿಯನ್ನ ಲೂಟಿ ಮಾಡಿತ್ತು. ಇನ್ನೂ 2016ರಲ್ಲಿ ಅಜಯ್ ದೇವಗನ್ ನಿರ್ದೇಶಿಸಿದ್ದ ಶಿವಾಯ್ ಕೂಡ ನೂರು ಕೋಟಿಯನ್ನ ಗಳಿಸಿತ್ತು. ಶೈತಾನ್ ಈ ಎಲ್ಲ ಸಿನಿಮಾಗಳನ್ನ ಹಿಂದಿಕ್ಕಿದೆ. ಈ ಒಂಬತ್ತು ದಿನದಲ್ಲಿ 133 ಕೋಟಿಯನ್ನ ಶೈತಾನ್ ಸಿನಿಮಾ ಗಳಿಸಿದೆ.

200 ಕೋಟಿಯನ್ನ ಅನಾಯಾಸವಾಗಿ ಶೈತಾನ್ ಗಳಿಸುತ್ತೆ ಅನ್ನುವ ಸೂಚನೆಯನ್ನ, ಸದ್ಯಕ್ಕೆ ಶೈತಾನ್ ಚಿತ್ರಕ್ಕೆ ಸಿಕ್ತಿರುವ ಪ್ರತಿಕ್ರಿಯೆ ಕೊಡ್ತಿದೆ. ಬಾಲಿವುಡ್ ಗೂ ಈ ಭರವಸೆ ಇದೆ. ಇನ್ನೂ ಸದ್ಯ ಏಪ್ರಿಲ್ ಹತ್ತರವರೆಗೆ ಮೈದಾನ ಖಾಲಿ ಇದೆ. ಯಾವ ದೊಡ್ಡ ಸಿನಿಮಾ ಕೂಡ ಹಿಂದಿಯಲ್ಲಿ ತೆರೆಗೆ ಬರ್ತಿಲ್ಲ. ಹೀಗಾಗಿ ಕೇವಲ ಇನ್ನೂರು ಅಷ್ಟೇ ಅಲ್ಲ ಇನ್ನೂರೈವತ್ತು ಕೋಟಿಯನ್ನೂ ಕೂಡ ಚಿತ್ರ ಗಳಿಸಬಹುದು ಎಂಬ ಭವಿಷ್ಯವಾಣಿಯನ್ನ ಕೆಲ ಬಾಲಿವುಡ್ ಪಂಡಿತರು ನುಡಿಯುತ್ತಿದ್ದಾರೆ
ಗುಜರಾತಿ ಚಿತ್ರದ ರಿಮೇಕ್
ಗುಜರಾತಿ ಭಾಷೆಯಲ್ಲಿ ಕಳೆದ ವರ್ಷ 'ವಶ್ ' ಹೆಸರಿನಲ್ಲಿ ಚಿತ್ರವೊಂದು ಬಂದಿತ್ತು. ಅಲ್ಲಿನ ಗಲ್ಲಾಪೆಟ್ಟಿಗೆಯಲ್ಲಿ ಸದ್ದನ್ನೂ ಮಾಡಿತ್ತು. ಶೈತಾನ್ ಇದೇ ವಶ್ ಚಿತ್ರದ ಹಿಂದಿ ಅವತರಣಿಕೆ.
ಸೂಪರ್ 30 ಹಾಗೂ ಕ್ವೀನ್ ಚಿತ್ರಗಳನ್ನ ನಿರ್ದೇಶಿಸಿದ್ದ ವಿಕಾಸ್ ಬಹ್ಲ್ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. 25 ವರ್ಷದ ನಂತರ ಜ್ಯೋತಿಕಾ ಈ ಚಿತ್ರದ ಮೂಲಕ ಬಾಲಿವುಡ್ ಗೆ ಮರಳಿರುವುದು ವಿಶೇಷತೆಯಲ್ಲೊಂದು.

ಶೈತಾನ್ ಕಥಾ ಹಂದರ
ಶೈತಾನ್ ನಾಲ್ಕು ಪಾತ್ರಗಳ ಸುತ್ತ ಸುತ್ತುವ ಸಿನಿಮಾ. ಇಲ್ಲಿ ಮಾಟ ಮಂತ್ರ ವಶೀಕರಣ ಇದೆ. ಕುಟುಂಬವೊಂದು ಪ್ರವಾಸಕ್ಕೆ ತೆರಳಿದಾಗ ಅಲ್ಲಿ ಎದುರಾಗುವ ವ್ಯಕ್ತಿಯಿಂದ, ಕುಟುಂಬ ಏನೆಲ್ಲ ಸಮಸ್ಯೆಯನ್ನ ಎದುರಿಸುತ್ತೆ ಅನ್ನುವುದು ಚಿತ್ರದ ಸಾರ. ತಂದೆಯ ಪಾತ್ರದಲ್ಲಿ ಅಜಯ್ ದೇವಗನ್, ತಾಯಿಯ ಪಾತ್ರದಲ್ಲಿ ಜ್ಯೋತಿಕಾ ಮಾಟಗಾರನ ಪಾತ್ರದಲ್ಲಿ ಆರ್.ಮಾಧವನ್ ಇದ್ದಾರೆ. ಜಾನಕಿ ಬೋಡಿವಾಲಾ ಅಜಯ್ ದೇವಗನ್ ಹಾಗೂ ಜ್ಯೋತಿಕಾ ಅವರ ಮಗಳ ಪಾತ್ರವನ್ನ ನಿರ್ವಹಿಸಿದ್ದಾರೆ. ಇಡೀ ಚಿತ್ರದ ಕೇಂದ್ರ ಬಿಂದು ಇವರೇ.
ಒಟ್ಟಿನಲ್ಲಿ ಸದ್ಯಕ್ಕೆ ಶೈತಾನ್ ಬಾಲಿವುಡ್ ಗೆ ಆಸರೆಯಾಗಿದೆ. ಭವಿಷ್ಯದ ಬಗ್ಗೆ ಭರವಸೆಯನ್ನೂ ಮೂಡಿಸಿದೆ. ಶೈತಾನ್ ಚಿತ್ರ ಒಟ್ಟು ಗಳಿಕೆ ಎಷ್ಟಾಗಲಿದೆ ಅನ್ನುವುದೇ ಸದ್ಯದ ಕುತೂಹಲ


Click it and Unblock the Notifications











