ಅಜಿತ್ ಪವಾರ್ ಉಪಮುಖ್ಯಮಂತ್ರಿ: ಬಾಹುಬಲಿ ಕೊಂದ ಕಟ್ಟಪ್ಪನ ಬ್ಯಾನರ್ ಹಾಕಿ ಶರದ್ ಪವಾರ್ ಬೆಂಬಲಿಗರಿಂದ ಆಕ್ರೋಶ
ಮಹಾರಾಷ್ಟ್ರದ ರಾಜಕೀಯದಲ್ಲಿ ಬಿಕ್ಕಟ್ಟು ಶುರುವಾಗಿದೆ. ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ (NCP)ಯಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿದೆ. ಎನ್‌ಸಿಪಿಯ ಮುಖಂಡ ಅಜಿತ್ ಪವಾರ್ ತಮ್ಮ ಬೆಂಬಲಿಗರೊಂದಿಗೆ ಮಹಾರಾಷ್ಟ್ರದ ರಾಜಕೀಯದಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಸೆಡ್ಡು ಹೊಡೆದ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರೋ ಅಜಿತ್ ಪವಾರ್ ವಿರುದ್ಧ ಬೆಂಬಲಿಗರು ಕಿಡಿ ಕಾರುತ್ತಿದ್ದಾರೆ. ಅಜಿತ್ ಪವಾರ್ ವಿರುದ್ಧ ತಿರುಗಿಬಿದ್ದಿರೋ ಶರದ್ ಪವಾರ್ ಬೆಂಬಲಿಗರು ವಿಶ್ವಾಘಾತುಕ ಎಂದು ಕರೆದಿದ್ದಾರೆ.

ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಪಕ್ಷವನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ತಿರುಗೇಟು ನೀಡಲು ಶರದ್ ಪವಾರ್ ಬೆಂಬಲಿಗರು 'ಬಾಹುಬಲಿ' ಸಿನಿಮಾದ ಕಟ್ಟಪ್ಪ ಸೀನ್ ಅನ್ನು ಬಳಸಿಕೊಂಡಿದ್ದಾರೆ. ಈ ಬ್ಯಾನರ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
ರಾಜಮೌಳಿ ನಿರ್ದೇಶಿಸಿದ ಸಿನಿಮಾದಲ್ಲಿ ಬಾಹುಬಲಿಯನ್ನು ಕೊಂದ ಕಟ್ಟಪ್ಪನ ದೃಶ್ಯವನ್ನೇ ಇಟ್ಟುಕೊಂಡು ಬ್ಯಾನರ್ ಮಾಡಲಾಗಿದೆ. ಸಿನಿಮಾದಲ್ಲಿ ಬಾಹುಬಲಿಯ ಬೆನ್ನಿಗೆ ಕಟ್ಟಪ್ಪ ಚುಚ್ಚಿದರೆ, ಇಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬೆನ್ನಿಗೆ ಅಜಿತ್ ಪವಾರ್ ಚುಚ್ಚುತ್ತಿರುವಂತೆ ಬ್ಯಾನರ್ ಹಾಕಲಾಗಿದೆ. ಇದು ಸಿನಿಮಾ ಹಾಗೂ ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಕೇವಲ ಬ್ಯಾನರ್ ಹಾಕಿದ್ದಷ್ಟೇ ಅಲ್ಲದೆ, " ನಮ್ಮೊಳಗೆ ಅಡಗಿರುವ ವಿಶ್ವಾಸಘಾತುಕರನ್ನು ಇಡೀ ದೇಶವೇ ನೋಡುತ್ತಿದೆ. ಜನರು ಇಂತಹ ಮೋಸಗಾರರನ್ನು ಕ್ಷಮಿಸುವುದಿಲ್ಲ " ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಈ ಬ್ಯಾನರ್ ಅನ್ನು ದೆಹಲಿಯಲ್ಲಿ ಹಾಕಲಾಗಿದ್ದು, ಎನ್‌ಸಿಪಿಯ ವಿದ್ಯಾರ್ಥಿ ಸಂಘ ಹಾಕಿದೆ ಎಂದು ವರದಿಯಾಗಿದೆ. ಆದರೆ ಯಾರೊಬ್ಬರ ಹೆಸರನ್ನೂ ಬ್ಯಾನರ್‌ನಲ್ಲಿ ಹಾಕಿಲ್ಲ.
ಈಗಾಗಲೇ ಬಂಡಾಯ ಎದ್ದಿರೋ ಎನ್‌ಸಿಪಿ ಪಾರ್ಟಿಯ ಅಜಿತ್ ಪವಾರ್ ಹಾಗೂ ಅವರ ಬೆಂಬಲಿಗರು ಚುನಾವಣಾ ಆಯೋಗಕ್ಕೆ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ನೀಡುವಂತೆ ಮನವಿ ಮಾಡಿದ್ದಾರೆ. ಎರಡೂ ಬಣಗಳೂ ಪ್ರತ್ಯೇಕವಾಗಿ ಸಭೆ ಕರೆದಿದ್ದವು. ಇದರಲ್ಲಿ ಅಜಿತ್ ಪವಾರ್ ಜೊತೆ 32 ಮಂದಿ ಶಾಸಕರು ಹಾಗೂ ಶರದ್ ಪವಾರ್ ಜೊತೆ 14 ಮಂದಿ ಶಾಸಕರು ಭಾಗಿಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ದಿಢೀರನೇ ಆದ ರಾಜಕೀಯ ಬೆಳವಣಿಗೆಯಲ್ಲಿ ಅಜಿತ್ ಪವಾರ್ ಸೇರಿದಂತೆ ಎಂಟು ಮಂದಿ ಏಕನಾಥ್ ಶಿಂಧೆ ಕ್ಯಾಬಿನೆಟ್ ಸೇರಿಕೊಂಡು ಶಾಕ್ ಕೊಟ್ಟಿದ್ದರು. ಈಗ ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಆಗುತ್ತಿವೆ.


Click it and Unblock the Notifications