ಬಿಗ್ ಬಾಸ್ ಸ್ಪರ್ಧಿ ಮೇಲೆ ಲೈಂಗಿಕ ಕಿರುಕುಳ ಆರೋಪ!
ಬಿಗ್ ಬಾಸ್ 13ನೇ ಆವೃತ್ತಿ ಮತ್ತೆ ವಿವಾದಗಳಿಂದ ಸುದ್ದಿ ಮಾಡುತ್ತಿದೆ. ಈ ಆವೃತ್ತಿಯ ವಿವಾದಾತ್ಮಕ ಸ್ಪರ್ಧಿ ಎಂದೇ ಗುರುತಿಸಿಕೊಂಡಿರುವ ಸಿದ್ಧಾರ್ಥ್ ಶುಕ್ಲಾ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.
ಬಿಗ್ ಬಾಸ್ ಮನೆಯಲ್ಲಿರುವ ಇತರೆ ಸ್ಪರ್ಧಿಗಳ ಜೊತೆ ಸದಾ ಜಗಳ ಮಾಡುವ, ಅತಿರೇಕವಾಗಿ ವರ್ತಿಸುತ್ತಿರುವ ಸಿದ್ಧಾರ್ಥ್ ಶುಕ್ಲಾ, ಅವರನ್ನು ದೊಡ್ಮನೆಯಿಂದ ಹೊರಕಳುಹಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಹೆಚ್ಚಾಗುತ್ತಿದೆ.
ಹೀಗಿರುವಾಗ, ಸಿದ್ಧಾರ್ಥ್ ಶುಕ್ಲಾ ನಟಿಸುತ್ತಿದ್ದ 'ಬಾಲಿಕಾ ವಧು' ಧಾರಾವಾಹಿಯಲ್ಲಿ ಸಹನಟಿಯಾಗಿ ಕಾಣಿಸಿಕೊಂಡಿದ್ದ ಶೀತಲ್ ಕಂದೇಲ್ ಅವರು, ಶುಕ್ಲಾ ಮೇಲೆ ಕಿರುಕುಳ ಆರೋಪ ಮಾಡಿದ್ದಾರೆ. ''ಒಟ್ಟಿಗೆ ನಟಿಸುವ ವೇಳೆ ಸಿದ್ಧಾರ್ಥ್ ಅನುಚಿತವಾಗಿ ವರ್ತಿಸುತ್ತಿದ್ದರು. ಅಸಭ್ಯವಾಗಿ ಸ್ಪರ್ಶಿಸುತ್ತಿದ್ದರು'' ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

''ಸಿದ್ಧಾರ್ಥ್ ಅಸಭ್ಯವಾಗಿ ಮಾತನಾಡುತ್ತಿದ್ದರು. ನನ್ನ ಕುರಿತು ಕೂಡ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು. ಆ ಮಾತುಗಳನ್ನು ಹೇಳಿಕೊಳ್ಳಲು ನಾಚಿಕೆಯಾಗುತ್ತೆ. ಅಂತಹ ಅಶ್ಲೀಲ ಮಾತು ಬಳಸಿ ಕಾಮೆಂಟ್ ಮಾಡಿದ್ದಾರೆ'' ಎಂದು ನಟಿ ಆರೋಪಿಸಿದ್ದಾರೆ.
''ಶೂಟಿಂಗ್ ಮಾಡುವ ವೇಳೆಯೂ ನನ್ನನ್ನು ಕೆಟ್ಟದಾಗಿ ಸ್ಪರ್ಶಿಸಿದ್ದರು. ಈ ಕುರಿತು ನಾನು ಕ್ರಿಯೇಟಿವ್ ನಿರ್ಮಾಪಕರ ಬಳಿ ದೂರಿದ್ದೆ. ಮುಂದಿನ ದಿನ ಸೆಟ್ ಗೆ ಬಂದ ಮೇಲೆ ನನ್ನ ಮೇಲೆ ರೇಗಾಡಿದ್ದರು. ಆತನ ವರ್ತನೆ ಸರಿಯಿಲ್ಲ. ಆದ್ರೀಗ ಬಿಗ್ ಬಾಸ್ ಮನೆಯಲ್ಲಿ 'ನಾನೊಬ್ಬ ಮಹಾನ್ ಪುರುಷ' ಎನ್ನುವಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ'' ಎಂದು ನಟಿ ಹೇಳಿದ್ದಾರೆ.
'ಬಾಲಿಕಾ ವಧು' ಧಾರಾವಾಹಿ ಬಳಿಕ ಸಿದ್ಧಾರ್ಥ್ ಶುಕ್ಲಾ ಮನೆಮಾತಾಗಿದ್ದರು. ಇದರ ಜೊತೆ ಹಲವು ಟಿವಿ ಶೋಗಳನ್ನ ಕೂಡ ಮಾಡಿದ್ದಾರೆ. ಈಗ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ.


Click it and Unblock the Notifications











