'ಹುಡುಗರು' ಚಿತ್ರದಲ್ಲಿ ಪಂಕಜಾ ಆಗಿ ಕುಣಿದಿದ್ದ ನಟಿ ಶೆಫಾಲಿ ಇನ್ನಿಲ್ಲ
ಬಾಲಿವುಡ್ ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆಕೆಗೆ 42 ವರ್ಷ ವಯಸ್ಸಾಗಿತ್ತು. ಹೃದಯಾಘಾತವಾದ ಕೂಡಲೇ ಪತಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ರಾತ್ರಿ 12.30ರ ಬಳಿಕ ಮೃತದೇಹವನ್ನು ಕೂಪರ್ ಆಸ್ಪತ್ರೆಯಲ್ಲಿ ಶವಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ.
ಹಿಂದಿ ಮ್ಯೂಸಿಕ್ ಆಲ್ಬಮ್ ಹಾಗೂ ರಿಯಾಲಿಟಿ ಶೋಗಳಲ್ಲಿ ಶೆಫಾಲಿ ಜರಿವಾಲಾ ಕಾಣಿಸಿಕೊಂಡಿದ್ದರು. ಹಿಂದಿ ಬಿಗ್‌ಬಾಸ್ ಸೀಸನ್ 13ರಲ್ಲಿ ಶೆಫಾಲಿ ಭಾಗವಹಿಸಿದ್ದರು. ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿದ 2004 ರ 'ಮುಜ್ಸೆ ಶಾದಿ ಕರೋಗಿ' ಚಿತ್ರದಲ್ಲೂ ಆಕೆ ಮಿಂಚಿದ್ದರು.

ಕನ್ನಡದ 'ಹುಡುಗರು' ಚಿತ್ರದಲ್ಲಿ ಹಾಡೊಂದಕ್ಕೆ ಬಿಂದಾಸ್ ಹೆಜ್ಜೆ ಹಾಕಿದ್ದರು. 'ತೊಂದ್ರೆ ಇಲ್ಲ ಪಂಕಜಾ' ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್, ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಯೋಗಿ ಜೊತೆ ಕುಣಿದಿದ್ದರು. 'ಕಾಂಟಾ ಲಗಾ' ಮ್ಯೂಸಿಕ್ ಆಲ್ಬಮ್‌ನಲ್ಲಿ ಹೆಜ್ಜೆ ಹಾಕಿ ಶೆಫಾಲಿ ಗಮನ ಸೆಳೆದಿದ್ದರು. ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶಗಳು ಸಿಗದೇ ಇದ್ದರೂ ಕಿರುತೆರೆಯಲ್ಲಿ ನೇಮು ಫೇಮು ಗಳಿಸಿದ್ದರು.
2004ರಲ್ಲಿ ಹರ್ಮೀತ್ ಸಿಂಗ್ ಎಂಬುವರನ್ನು ಶೆಫಾಲಿ ಮದುವೆ ಆಗಿದ್ದರು. ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ 5 ವರ್ಷಗಳ ಬಳಿ ದಂಪತಿ ಡಿವೋರ್ಸ್ ಪಡೆದಿದ್ದರು. ಬಳಿಕ 2014ರಲ್ಲಿ ನಟ ಪರಾಗ್ ತ್ಯಾಗಿ ಅವರನ್ನು ಎರಡನೇ ಮದುವೆ ಆಗಿದ್ದರು. ಇಬ್ಬರೂ 'ನಚ್ ಬಲಿಯೇ' ನೃತ್ಯ ರಿಯಾಲಿಟಿ ಶೋ ಸೀಸನ್ 5 ಮತ್ತು 7 ರಲ್ಲಿ ಕಾಣಿಸಿಕೊಂಡಿದ್ದರು.
ಶೆಫಾಲಿ ದಿಢೀರ್ ನಿಧನ ಬಾಲಿವುಡ್ ಹಾಗೂ ಹಿಂದಿ ಕಿರುತೆರೆಗೆ ದಿಗ್ಭ್ರಮೆ ತಂದಿದೆ. ಮಿಕಾ ಸಿಂಗ್, ಅಲಿ ಗೋನಿ, ಪರಾಸ್ ಛಾಬ್ರಾ ಸೇರಿದಂತೆ ಹಲವರು ಆಕೆಯ ಅಗಲಿಕೆಗೆ ಸಂತಾಪ ಸೂಚಿಸುತ್ತಿದ್ದಾರೆ. "ನನಗೆ ತೀವ್ರ ಆಘಾತ, ದುಃಖದಿಂದ ಹೃದಯ ಭಾರವಾಗಿದೆ.. ನಮ್ಮ ಪ್ರೀತಿಯ ತಾರೆ ಮತ್ತು ನನ್ನ ಆತ್ಮೀಯ ಸ್ನೇಹಿತೆ ಶೆಫಾಲಿ ಜರಿವಾಲಾ ನಮ್ಮನ್ನು ಅಗಲಿದ್ದಾರೆ. ಇದನ್ನೂ ನಂಬಲಾಗುತ್ತಿಲ್ಲ. ನಿಮ್ಮ ಚಾರ್ಮ್, ನಗು ಮತ್ತು ಆತ್ಮಸ್ಥೈರ್ಯದ ಕಾರಣಕ್ಕೆ ಸದಾ ನೆನಪಿನಲ್ಲಿ ಉಳಿಯುತ್ತೀರಿ. ಓಂ ಶಾಂತಿ", ಎಂದು ಮಿಕಾ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಹಿಂದಿ ಕಿರುತೆರೆ ನಟ ಅಲಿ ಗೋನಿ ಮಧ್ಯರಾತ್ರಿ 12. 53ರ ಸುಮಾರಿಗೆ ಟ್ವೀಟ್ ಮಾಡಿ ಶೆಫಾಲಿ ನಿಧನದ ವಿಚಾರ ಖಚಿತಪಡಿಸಿದ್ದರು. "ಶೆಫಾಲಿ ಜರಿವಾಲಾ ಅವರ ಹಠಾತ್ ನಿಧನದ ಸುದ್ದಿ ಕೇಳಿ ಆಘಾತವಾಯಿತು ಮತ್ತು ದುಃಖವಾಯಿತು. ಜೀವನವು ತುಂಬಾ ಅನಿರೀಕ್ಷಿತವಾಗಿದೆ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಅವರು ಟ್ವೀಟ್ ಮಾಡಿದ್ದರು.
ಬಿಗ್‌ಬಾಸ್ ಮನೆಯಲ್ಲಿ ಶೆಫಾಲಿಯ ಸಹ ಸ್ಪರ್ಧಿಯಾಗಿದ್ದ ತೆಹಸೀನ್ ಪೂನವಾಲಾ ಕೂಡ 'X' ಖಾತೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ನನ್ನ ಗೆಳತಿ ಶೆಫಾಲಿ ಜರಿವಾಲಾ ಇನ್ನಿಲ್ಲ ಎಂದು ಕೇಳಿ ದಿಗ್ಭ್ರಮೆಗೊಂಡೆ. ನಾನು ಅವಳನ್ನು ಕೊನೆಯ ಬಾರಿಗೆ ಒಂದು ಪಾರ್ಟಿಯಲ್ಲಿ ಭೇಟಿಯಾದೆ. ಜೀವನ ತುಂಬಾ ಚಿಕ್ಕದಾಗಿದೆ. ಅವಳು ನನ್ನೊಂದಿಗೆ ಬಿಗ್‌ಬಾಸ್ ಸೀಸನ್ 13 ಶೋನಲ್ಲಿ ಇದ್ದಳು. ನಮ್ಮ ಬಿಗ್‌ಬಾಸ್ ಸೀಸನ್‌ನಲ್ಲಿದ್ದ ಸಿದ್ದಾರ್ಥ್ ಶುಕ್ಲಾ ಆಗ ಮತ್ತು ಈಗ ಶೆಫಾಲಿ ಇಲ್ಲ. ಓಂ ಶಾಂತಿ" ಎಂದು ಪೋಸ್ಟ್ ಮಾಡಿದ್ದಾರೆ.


Click it and Unblock the Notifications











