ಪಠಾಣ್ ಕುತಂತ್ರಕ್ಕೆ ಸಿಲುಕಿ ಒಂದು ಟಿಕೆಟ್ ಕೊಂಡರೆ ಮತ್ತೊಂದು ಟಿಕೆಟ್ ಉಚಿತ ಎಂದು ಘೋಷಿಸಿದ ಚಿತ್ರತಂಡ!
ದೇಶದಾದ್ಯಂತ ಪಠಾಣ್ ಸಿನಿಮಾದ ಹವಾ ಜೋರಾಗಿದೆ. ಕಳೆದ ಜನವರಿ 25ರಂದು ತೆರೆಕಂಡ ಪಠಾಣ್ ಚಿತ್ರ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿತ್ರ ಬಿಡುಗಡೆಗೂ ಮುನ್ನ ಎದುರಿಸಿದ್ದ ದೊಡ್ಡ ಮಟ್ಟದ ವಿರೋಧವನ್ನು ಕಂಡಿದ್ದ ಸಿನಿ ಪ್ರೇಮಿಗಳು ಹಾಗೂ ಚಿತ್ರರಂಗದ ಮಂದಿ ಈ ಚಿತ್ರವೂ ಉಳಿದ ಬಾಲಿವುಡ್ ಚಿತ್ರಗಳ ಹಾಗೆ ಬಾಯ್‌ಕಟ್ ಅಲೆಗೆ ಕೊಚ್ಚಿ ಹೋಗಲಿದೆ ಎಂದೇ ಊಹಿಸಿದ್ದರು.
ಆದರೆ ಪಠಾಣ್ ಹಾಗಾಗಲಿಲ್ಲ. ದೊಡ್ಡ ಮಟ್ಟದ ವಿರೋಧದ ನಡುವೆಯೇ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಮೊದಲ ದಿನ ವಿಶ್ವದಾದ್ಯಂತ 106 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಹೀಗೆ ಮೊದಲ ದಿನವೇ ನೂರು ಕೋಟಿ ಕ್ಲಬ್ ಸೇರಿದ ಪಠಾಣ್ ಮಕಾಡೆ ಮಲಗಿದ್ದ ಬಾಲಿವುಡ್ ಚಿತ್ರರಂಗಕ್ಕೆ ಮರುಜೀವ ನೀಡಿತು.
ಅಷ್ಟೇ ಅಲ್ಲದೇ ಚಿತ್ರ 23 ದಿನಗಳಲ್ಲಿ 1000 ಕೋಟಿ ಕಲೆಕ್ಷನ್ ಮಾಡಿ ಸಾವಿರ ಕೋಟಿ ಕಲೆಕ್ಷನ್ ಕ್ಲಬ್ ಸೇರಿದ್ದು, ಇನ್ನೂ ಸಹ ತನ್ನ ಓಟವನ್ನು ದೇಶದ ಹಲವು ಪ್ರಮುಖ ನಗರಗಳಲ್ಲಿ ಮುಂದುವರಿಸಿದೆ. ಇನ್ನು ಪಠಾಣ್ ಚಿತ್ರವೇನೋ ಭರ್ಜರಿ ಪ್ರದರ್ಶನವನ್ನು ಕಂಡು ಅಬ್ಬರಿಸುತ್ತಿದೆ. ಆದರೆ ಈ ಚಿತ್ರ ಬಿಡುಗಡೆಯಾದ ಬಳಿಕ ತೆರೆಕಂಡ ಚಿತ್ರಗಳು ಮಾತ್ರ ಇದರ ಹೊಡೆತಕ್ಕೆ ಸಿಲುಕಿ ಸರಿಯಾದ ಪ್ರದರ್ಶನಗಳು ಸಿಗದೇ ಒದ್ದಾಡಿವೆ. ಇದೀಗ ಹಿಂದಿಯ ಕಾರ್ತಿಕ್ ಆರ್ಯನ್ ಹಾಗೂ ಕೃತಿ ಸೆನನ್ ನಟನೆಯ ಶೆಹ್ಜಾದ ಚಿತ್ರ ಸಹ ಇದೇ ಪಠಾಣ್ ಚಿತ್ರದಿಂದ ಪೆಟ್ಟು ತಿಂದಿದೆ. ಹೌದು, ಇಂದು ( ಫೆಬ್ರವರಿ 17 ) ಶೆಹ್ಜಾದ ಚಿತ್ರ ಬಿಡುಗಡೆಗೊಂಡಿದ್ದು, ಈ ಚಿತ್ರದ ಬಿಡುಗಡೆಯ ದಿನ ಪಠಾಣ್ ಚಿತ್ರತಂಡ ಮಾಸ್ಟರ್ ಪ್ಲಾನ್ ಒಂದನ್ನು ಹೆಣೆಯುವ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕೆಲಸಕ್ಕೆ ಕೈ ಹಾಕಿದೆ. ಇದರಿಂದ ತಪ್ಪಿಸಿಕೊಳ್ಳಲು ಶೆಹ್ಜಾದ ಚಿತ್ರತಂಡ ಹಿಂದೆಂದೂ ಮಾಡಿರದ ಸಾಹಸಕ್ಕೆ ಕೈಹಾಕಿದೆ.

ಕಡಿಮೆ ಬೆಲೆಗೆ ಟಿಕೆಟ್ ಘೋಷಿಸಿದ ಪಠಾಣ್
ಮೇಲೆ ಹೇಳಿದಂತ ಶೆಹ್ಜಾದ ಚಿತ್ರದ ಬಿಡುಗಡೆ ದಿನ ಪಠಾಣ್ ಚಿತ್ರತಂಡ ಕೇವಲ 110 ರೂಪಾಯಿಗಳಿಗೆ ಟಿಕೆಟ್ ಮಾರಾಟ ಮಾಡುವ ಮೂಲಕ ಮಾಸ್ಟರ್ ಪ್ಲಾನ್ ಮಾಡಿದೆ. ಹೀಗೆ ಕಡಿಮೆ ಬೆಲೆಗೆ ಟಿಕೆಟ್ ನೀಡುವುದರಿಂದ ಸಿನಿ ರಸಿಕರು ತಮ್ಮ ಚಿತ್ರ ನೋಡಲಿದ್ದಾರೆ ಎಂಬುದು ಚಿತ್ರತಂಡದ ಯೋಜನೆಯಾಗಿದೆ. ಇನ್ನು ಹೊಸ ಚಿತ್ರವೊಂದು ಬಿಡುಗಡೆಯಾಗುತ್ತಿರುವ ಇಂತಹ ಆಫರ್ ನೀಡಿ ಪೆಟ್ಟು ನೀಡುವುದು ಸರಿಯಲ್ಲ ಎಂದು ಸಿನಿ ರಸಿಕರು ಪಠಾಣ್ ಚಿತ್ರತಂಡದ ವಿರುದ್ಧ ಕಿಡಿಕಾರಿದ್ದರು.

ಹೊಡೆತ ತಪ್ಪಿಸಿಕೊಳ್ಳಲು ವಿಚಿತ್ರ ಸಾಹಸಕ್ಕೆ ಕೈಹಾಕಿದ ಶೆಹ್ಜಾದ
ಇನ್ನು ಪಠಾಣ್ ಚಿತ್ರ 112 ರೂಪಾಯಿಗಳಿಗೆ ಟಿಕೆಟ್ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ಎಚ್ಚೆತ್ತ ಶೆಹ್ಜಾದ ಚಿತ್ರತಂಡ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಅನ್ನು ಉಚಿತವಾಗಿ ನೀಡುತ್ತೇವೆ ಎಂದು ಘೋಷಿಸಿದೆ. ದೇಶದ ಯಾವುದೇ ಚಿತ್ರಮಂದಿರದಲ್ಲಿ ಬುಕ್ ಮೈ ಶೋ ಮೂಲಕ ಟಿಕೆಟ್ ಖರೀದಿಸಿದರೂ ಈ ಆಫರ್ ಇದೆ. ದೊಡ್ಡ ನಟನ ಚಿತ್ರ ಸಣ್ಣ ನಟನ ಚಿತ್ರದ ಮೇಲೆ ಈ ರೀತಿಯ ಆಫರ್ ನೀಡಿದ ಪರಿಣಾಮ ಇದೀಗ ಶೆಹ್ಜಾದ ತಂಡ ಇಂತಹ ಕಠಿಣ ನಿರ್ಧಾರವನ್ನು ಕೈಗೊಂಡಿದೆ.

ತೆಲುಗಿನ ರಿಮೇಕ್ ಶೆಹ್ಜಾದ
ಈ ರೀತಿ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಉಚಿತ ಎಂದು ಘೋಷಣೆ ಮಾಡಿರುವ ಶೆಹ್ಜಾದ ಚಿತ್ರ ತೆಲುಗಿನ ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗ್ಡೆ ನಟನೆಯ ಅಲಾ ವೈಕುಂಟಪುರಮುಲೋ ರಿಮೇಕ್ ಆಗಿದೆ. ಸದ್ಯ ರಿಮೇಕ್ ಚಿತ್ರಗಳೆಲ್ಲಾ ಮಕಾಡೆ ಮಲಗುತ್ತಿರುವ ಕಾರಣ ರಿಮೇಕ್ ಎಂಬ ಹಿನ್ನಡೆ ಚಿತ್ರಕ್ಕಿದ್ದರೆ, ಪಠಾಣ್ ಚಿತ್ರದ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ಅಲಾ ವೈಕುಂಟಪುರಮುಲೋ ಚಿತ್ರ ದೊಡ್ಡ ಹಿಟ್ ಆಗಿತ್ತು. ತ್ರಿವಿಕ್ರಮ್ ಶ್ರೀನಿವಾಸ್ ಮೋಡಿ ಮಾಡಿದ್ದರು. ಆದರೆ ಹಿಂದಿ ಸಿನಿ ರಸಿಕರಿಗೆ ಇಷ್ಟವಾಗುತ್ತಾ, ಚಿತ್ರ ಎಲ್ಲಾ ಅಡೆತಡೆಗಳ ವಿರುದ್ಧ ಗೆಲ್ಲುತ್ತಾ ಎಂಬುದೇ ಈಗ ಪ್ರಶ್ನೆಯಾಗಿದೆ.


Click it and Unblock the Notifications











