twitter
    For Quick Alerts
    ALLOW NOTIFICATIONS  
    For Daily Alerts

    ಪಬ್ಲಿಕ್‌ನಲ್ಲಿ ಮುತ್ತು: 2007ರ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಖುಲಾಸೆ

    |

    ಹದಿನೈದು ವರ್ಷದ ಹಿಂದೆ ಕಾರ್ಯಕ್ರಮವೊಂದರಲ್ಲಿ ಹಾಲಿವುಡ್ ನಟನೊಬ್ಬ ಶಿಲ್ಪಾ ಶೆಟ್ಟಿಗೆ ಬಹಿರಂಗವಾಗಿ ವೇದಿಕೆ ಮೇಲೆ ಮುತ್ತು ನೀಡಿದ್ದ ಈ ವಿಷಯ ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ಈ ಕುರಿತು ದೂರು ಸಹ ದಾಖಲಾಗಿತ್ತು. ಹದಿನೈದು ವರ್ಷದ ಹಿಂದಿನ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಈಗ ಖುಲಾಸೆಯಾಗಿದ್ದಾರೆ.

    2007ರ ಏಪ್ರಿಲ್ 15ರಂದು ಹಾಲಿವುಡ್ ನಟ ರಿಚರ್ಡ್ ಗೇರ್ ಭಾರತಕ್ಕೆ ಬಂದಿದ್ದರು. ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮವೊಂದನ್ನು ರಾಜಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಿಚರ್ಡ್ ಗೇರ್ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಸಹ ಭಾಗವಹಿಸಿದ್ದರು.

    ಈ ಸಮಯ ನಟ ರಿಚರ್ಡ್ ಗೇರ್, ಶಿಲ್ಪಾ ಶೆಟ್ಟಿಯನ್ನು ವೇದಿಕೆ ಮೇಲೆಯೇ ಎಳೆದು ಮುತ್ತುಕೊಟ್ಟಿದ್ದರು. ರಿಚರ್ಡ್‌ನ ಮುತ್ತಿನಿಂದ ತಪ್ಪಿಸಿಕೊಳ್ಳಲು ಶಿಲ್ಪಾ ಪ್ರಯತ್ನ ಪಟ್ಟಿದ್ದರಾದರೂ ರಿಚರ್ಡ್ ಬಲವಂತವಾಗಿ ಶಿಲ್ಪಾ ಶೆಟ್ಟಿಗೆ ಮುತ್ತು ಕೊಟ್ಟಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಶಿಲ್ಪಾ ಶೆಟ್ಟಿ ಹಾಗೂ ರಿಚರ್ಡ್ ಗೇರ್ ವಿರುದ್ಧ ಸಾರ್ವಜನಿಕ ಕೆಟ್ಟ ವರ್ತನೆ, ಅಶ್ಲೀಲತೆ ಪ್ರಕರಣ ದಾಖಲಿಸಲಾಗಿತ್ತು. ರಾಜಸ್ಥಾನ, ಉತ್ತರ ಪ್ರದೇಶ ಇನ್ನಿತರೆ ಕಡೆಗಳಲ್ಲಿ ದೂರು ದಾಖಲಾಗಿತ್ತು. ಭೋಪಾಲ್, ವಾರಣಾಸಿ, ಕಾನ್ಪುರ, ದೆಹಲಿ ಇನ್ನೂ ಹಲವೆಡೆ ಘಟನೆ ಖಂಡಿಸಿ ಪ್ರತಿಭಟನೆಗಳು ಸಹ ನಡೆದಿದ್ದವು. ಶಿಲ್ಪಾ ಹಾಗೂ ರಿಚರ್ಡ್ ಗೇರ್ ವಿರುದ್ಧ ಬಂಧನದ ವಾರೆಂಟ್ ಸಹ ಹೊರಡಿಸಲಾಗಿತ್ತು. ಬಳಿಕ ಸುಪ್ರೀಂಕೋರ್ಟ್ ವಾರೆಂಟ್ ಅನ್ನು ರದ್ದು ಪಡಿಸಿತು.

    Shilpa Shetty Richard Gere Kissing Case: Court Grants Relief To Shilpa

    ಇದೀಗ ಆ ಹದಿನೈದು ವರ್ಷ ಹಿಂದಿನ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಯನ್ನು ಖುಲಾಸೆ ಮಾಡಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಮೆಟ್ರೊಪಾಲಿಟೆನ್ ಮ್ಯಾಜಿಸ್ಟ್ರೇಟ್ ಕೇತನ್ ಚೌವ್ಹಾನ್ ಶಿಲ್ಪಾ ಶೆಟ್ಟಿ ಈ ಪ್ರಕರಣದಲ್ಲಿ ಆರೋಪಿ ಅಲ್ಲ ಬದಲಿಗೆ ಮೊದಲ ಆರೋಪಿ ಆಗಿರುವ ರಿಚರ್ಡ್ ಗೇರ್‌ನ ವರ್ತನೆಯಿಂದ ಸಂತ್ರಸ್ತೆ ಆಗಿದ್ದಾರೆ ಎಂದಿದ್ದಾರೆ. ಶಿಲ್ಪಾ ಶೆಟ್ಟಿ ಮೇಲೆ ಹೇರಲಾಗಿರುವ ಆರೋಪಗಳಿಗೆ ಸಾಕ್ಷಿ ಇಲ್ಲ ಎಂದು ಕೇತನ್ ಚೌವ್ಹಾನ್ ಹೇಳಿದ್ದಾರೆ. ಹಾಗೂ ಪ್ರಕರಣದಿಂದ ಶಿಲ್ಪಾ ಶೆಟ್ಟಿಯನ್ನು ಖುಲಾಸೆಗೊಳಿಸಿದ್ದಾರೆ.

    ''ದೂರಿನಲ್ಲಿ ಹೊರಿಸಲಾಗಿರುವ ಆರೋಪಗಳ ಒಂದು ಅಂಶ ಸಹ ತೃಪ್ತಿಕರವಾಗಿಲ್ಲ. ಪ್ರಕರಣದ ತನಿಖಾ ವರದಿಯೊಂದಿಗೆ ಲಗತ್ತಿಸಲಾಗಿರುವ ಯಾವೊಂದು ದಾಖಲೆಯೂ ಸಹ ಆರೋಪಿ (ಶಿಲ್ಪಾ ಶೆಟ್ಟಿ) ಉದ್ದೇಶಪೂರ್ವಕವಾಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬುದನ್ನು ಹೇಳುತ್ತಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

    ಅಸಭ್ಯ ವರ್ತನೆ, ಅಶ್ಲೀಲತೆ ಪ್ರದರ್ಶನ, ಅಶ್ಲೀಲ ವಿಚಾರ ಪ್ರಚಾರ, ಮಹಿಳೆಯನ್ನು ಕೆಟ್ಟದಾಗಿ ಬಿಂಬಿಸುವ ಯತ್ನ ಇತರೆ ದೂರುಗಳನ್ನು ಶಿಲ್ಪಾ ಶೆಟ್ಟಿ ಹಾಗೂ ರಿಚರ್ಡ್ ಗೇರ್ ವಿರುದ್ಧ ಹೊರಿಸಲಾಗಿತ್ತು. ರಾಜಸ್ಥಾನದಲ್ಲಿ ನಡೆಯುತ್ತಿದ್ದ ಪ್ರಕರಣವನ್ನು ಮುಂಬೈಗೆ ಸ್ಥಳಾಂತರಿಸಬೇಕು ಎಂದು ಶಿಲ್ಪಾ ಶೆಟ್ಟಿ 2017 ರಲ್ಲಿ ಮನವಿ ಮಾಡಿದ್ದರು. ಅಂತೆಯೇ ಮುಂಬೈಗೆ ಪ್ರಕರಣವನ್ನು ಸ್ಥಳಾಂತರಿಸಲಾಗಿತ್ತು. ಇದೀಗ ಪ್ರಕರಣದಿಂದ ಶಿಲ್ಪಾ ಶೆಟ್ಟಿ ಖುಲಾಸೆಯಾಗಿದ್ದಾರೆ.

    ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕಳೆದ ವರ್ಷ ಜೂನ್ 19 ರಂದು ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಈ ಸಮಯದಲ್ಲಿ ನಟಿ ಶಿಲ್ಪಾ ಶೆಟ್ಟಿ ಅವರನ್ನೂ ವಿಚಾರಣೆ ನಡೆಸಲಾಗಿತ್ತು. ಹಲವು ದಿನಗಳ ಕಾಲ ಜೈಲಿನಲ್ಲಿದ್ದ ರಾಜ್ ಕುಂದ್ರಾ ಸೆಪ್ಟೆಂಬರ್ 20ರಂದು ಜೈಲಿನಿಂದ ಬಿಡುಗಡೆ ಆದರು.

    ಕಳೆದ ವರ್ಷ (2021) ಸಾಕಷ್ಟು ಸಮಸ್ಯೆಗಳನ್ನು ಶಿಲ್ಪಾ ಶೆಟ್ಟಿ ಎದುರಿಸಿದರು. ರಾಜ್ ಕುಂದ್ರಾ ಬಂಧನದ ಬಳಿಕ ಶಿಲ್ಪಾ ವಿರುದ್ಧ ಹಲವು ಆರೋಪಗಳನ್ನು ಮಾಡಲಾಯಿತು. ಶಿಲ್ಪಾ ಸಹಭಾಗಿತ್ವ ಹೊಂದಿದ್ದ ಕೆಲವು ಉದ್ಯಮಗಳ ಮೇಲೆ ಸ್ವತಃ ಶಿಲ್ಪಾ ಶೆಟ್ಟಿ ಮೇಲೆಯೂ ವಂಚನೆ ಆರೋಪಗಳನ್ನು ಮಾಡಲಾಯಿತು. ನಟಿ ಶಿಲ್ಪಾ ಶೆಟ್ಟಿ ಸಹ ಕೆಲವು ಮಾಧ್ಯಮಗಳ ವಿರುದ್ಧ, ಕೆಲವು ವ್ಯಕ್ತಿಗಳ ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ.

    English summary
    2007, Shilpa Shetty Hollywood actor Richard Gere Kissing in public case: Court grants relief to Shilpa Shetty says Shilpa is not accused she is victim.
    Tuesday, January 25, 2022, 15:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X