'ಅಮ್ಮನ ಕೈ'ರುಚಿ ಬಡಿಸಲು ಮುಂದಾದ ಮಂಗಳೂರಿನ ಚೆಲುವೆ ಶಿಲ್ಪಾ ಶೆಟ್ಟಿ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್‌ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ.
ಈ ಸಾಲಿನಲ್ಲಿ ಎಲ್ಲರಿಗಿಂತ ಮೊದಲು ಸೇರಿಕೊಂಡ ಶಿಲ್ಪಾ ಶೆಟ್ಟಿ ನಿನ್ನೆಯಷ್ಟೇ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ''ಬಾಸ್ಟಿಯನ್'' ರೆಸ್ಟೋರೆಂಟ್‌ಗೆ ಬೀಗ ಹಾಕುತ್ತಿರುವ ವಿಚಾರ ಹಂಚಿಕೊಂಡಿದ್ದರು. ಈ ಮೂಲಕ ಹಲವರಿಗೆ ಶಾಕ್ ನೀಡಿದ್ದರು.

ಇನ್ನೂ ಶಿಲ್ಪಾ ತಮ್ಮ ಈ ನಿರ್ಧಾರವನ್ನು ಹೇಳಿದ ನಂತರ ಹಲವರು ಹಲವು ರೀತಿಯಲ್ಲಿ ಮಾತನಾಡಲು ಶುರು ಮಾಡಿದ್ದರು. 60 ಕೋಟಿ ರೂಪಾಯಿ ವಂಚನೆ ಪ್ರಕರಣದಿಂದ ಹೊರ ಬರಲು ಶಿಲ್ಪಾ ಈ ಸರ್ಕಸ್ ಮಾಡುತ್ತಿದ್ದಾರೆ ಎಂದು ಪುಕಾರು ಹಬ್ಬಿಸಿದರು.
ಆದರೆ.. ಶಿಲ್ಪಾ ಶೆಟ್ಟಿ ಮಂಗಳೂರು ಮುತ್ತು. ವ್ಯಾಪಾರದಲ್ಲಿ ತುಂಬಾ ಚಾಲಾಕಿ. ಇದಕ್ಕೆ ಪುರಾವೆ ಎನ್ನುವಂತೆ ನಿನ್ನೆ ಹೊಟೇಲ್ ಮುಚ್ಚುತ್ತಿರುವ ವಿಚಾರ ಹೇಳಿದ್ದ ಶಿಲ್ಪಾ ಇದೀಗ ಒಂದಲ್ಲ ಬದಲಿಗೆ ಎರಡು ಹೊಟೇಲ್ ಗಳನ್ನು ಶುರು ಮಾಡುತ್ತಿರುವುದಾಗಿ ಹೇಳಿದ್ದಾರೆ. ''ಬಾಸ್ಟಿಯನ್'' ಹೊಸ ರೂಪ.. ಹೊಸ ಸ್ಫರ್ಶದ ಜೊತೆ ಹೊಸ ಜಾಗದಲ್ಲಿ ಮತ್ತೆ ತಮ್ಮ ಗ್ರಾಹಕರನ್ನು ಸ್ವಾಗತಿಸಲಿದೆ ಎಂದು ಹೇಳಿದ್ಧಾರೆ.
ಈ ಕುರಿತು ಮಾತನಾಡಿರುವ ಶಿಲ್ಪಾ ಶೆಟ್ಟಿ, ನಾನು ನನ್ನ ಕನಸಿನ ''ಬ್ಯಾಸ್ಟಿಯನ್''ಗೆ ಬೀಗ ಹಾಕುತ್ತಿಲ್ಲ. ವಿನಾಕಾರಣ ಊಹಾಪೋಹ ಸುದ್ದಿಗಳನ್ನು ಹಬ್ಬಿಸಬೇಡಿ, ದ್ವೇಷದ ಬೀಜ ಬಿತ್ತಬೇಡಿ ಎಂದು ಹೇಳಿದ್ದಾರೆ. ನನಗೆ ಅನೇಕ ಕರೆಗಳು ಬಂದಿವೆ. ''ಬ್ಯಾಸ್ಟಿಯನ್'' ಮೇಲೆ ಅನೇಕರಿಗೆ ಇರುವ ಪ್ರೀತಿಗೆ ನಾನು ಮನ ಸೋತಿದ್ದೇನೆ ಎಂದು ಹೇಳಿರುವ ಶಿಲ್ಪಾ ಶೆಟ್ಟಿ ''ಬ್ಯಾಸ್ಟಿಯನ್'' ಈಗ ''ಬ್ಯಾಸ್ಟಿಯನ್ ಬೀಚ್ ಕ್ಲಬ್'' ಹೆಸರಿನಲ್ಲಿ ಹೊಸ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದೆ ಅಷ್ಟೇ ಎಂದು ಕೂಡ ಹೇಳಿದ್ದಾರೆ.
ಮುಂದುವರೆದು '' ಬ್ಯಾಸ್ಟಿಯನ್'' ಇದ್ದ ಜಾಗದಲ್ಲಿ ಅಂದರೆ ಬಾಂದ್ರಾದಲ್ಲಿ ನಾವು ''ಅಮ್ಮಕೈ'' ಎಂಬ ಹೊಸ ರೆಸ್ಟೋರೆಂಟ್ ಶುರು ಮಾಡುತ್ತಿದ್ದು, ಈ ರೆಸ್ಟೋರೆಂಟ್‌ನಲ್ಲಿ ದಕ್ಷಿಣ ಭಾರತದ ಬಗೆ ಬಗೆಯ ಖಾದ್ಯಗಳಿರಲಿವೆ ಎಂದು ಹೇಳಿರುವ ಶಿಲ್ಪಾ ಶೆಟ್ಟಿ ಇಲ್ಲಿ ಮಂಗಳೂರು ಶೈಲಿಯ ಊಟ ಕೂಡ ಸಿಗಲಿದ್ದು, ''ಅಮ್ಮಕೈ'' ಮೂಲಕ ನಾನು ನನ್ನ ಬೇರುಗಳನ್ನು ಎಲ್ಲರಿಗೆ ಪರಿಚಯಿಸುವ ಕೆಲಸ ಮಾಡಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ. ಒಂದು ಅಧ್ಯಾಯ ಮುಚ್ಚಿ ಎರಡು ಹೊಸ ಅಧ್ಯಾಯವನ್ನು ನಾವು ಶುರು ಮಾಡುತ್ತಿದ್ದೇವೆ, ನಿಮ್ಮೆಲ್ಲರನ್ನು ಸ್ವಾಗತಿಸಲು ನಾನು ಕೂಡ ತುಂಬಾ ಕಾತುರಳಾಗಿದ್ದೇನೆ ಎಂದು ಕೂಡ ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ಇನ್ನು ಶಿಲ್ಪಾ ಶೆಟ್ಟಿಯ ಈ ವ್ಯವಹಾರಗಳಲ್ಲಿ ಪಾಲುದಾರರಾಗಿರುವ ರಂಜೀತ್ ಬಿಂದ್ರಾ ಕೂಡ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು, ''ಅಮ್ಮಕೈ'' ಅಕ್ಟೋಬರ್ ಅಂತ್ಯದ ಹೊತ್ತಿಗೆ ನಾವು ಶುರು ಮಾಡಲಿದ್ದೇವೆ ಎಂದು ಹೇಳಿದ್ಧಾರೆ. ನಮ್ಮ ಈ ರೆಸ್ಟೋರೆಂಟ್ ಮೂಲಕ ನಾವು ದಕ್ಷಿಣ ಭಾರತೀಯ ಅಡುಗೆ ಸಂಪ್ರದಾಯಕ್ಕೆ ಅಲ್ಲಿನ ರುಚಿಗೆ ಈ ಮೂಲಕ ನಾವು ಗೌರವ ಕೊಡುತ್ತಿದ್ದೇವೆ, ಅಸಾಧಾರಣ ಸೇವೆ ಮತ್ತು ಗುಣಮಟ್ಟದ ಆಹಾರ ನೀಡಲು ಕೂಡ ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
''ಮಿಡ್-ಡೇ'' ವರದಿಯ ಪ್ರಕಾರ ಬಾಂದ್ರಾದಿಂದ ಸ್ಥಳಾಂತರಗೊಂಡಿರುವ ''ಬ್ಯಾಸ್ಟಿಯನ್ ಬೀಚ್ ಕ್ಲಬ್'' ಜುಹೂದಲ್ಲಿರುವ ''ಸನ್-ಎನ್-ಸ್ಯಾಂಡ್'' ಹೋಟೆಲ್‌ನಲ್ಲಿ ಶೀಘ್ರದಲ್ಲಿಯೇ ಶುರುವಾಗಲಿದೆ. ಸಮುದ್ರದ ಅಲೆಗಳನ್ನು ನೋಡುತ್ತಾ ಇಲ್ಲಿ ಆಹಾರದ ರುಚಿ ಸವಿಯಬಹುದು.


Click it and Unblock the Notifications











