Shivarajkumar: ತೆಲುಗು, ತಮಿಳು ಆಯ್ತು ಈಗ ಹಿಂದಿಗೆ ಶಿವಣ್ಣ; ಕೇರಳ ಸ್ಟೋರಿ ನಿರ್ದೇಶಕನ ಚಿತ್ರದಲ್ಲಿ ನಟನೆ?
ಕನ್ನಡ ಚಿತ್ರರಂಗದಲ್ಲಿ ಸದಾ ಜನರು ಮಾತನಾಡಿಕೊಳ್ಳುವಂತಹ ಹಲವಾರು ಎವರ್‌ಗ್ರೀನ್ ಚಿತ್ರಗಳಲ್ಲಿ ನಟಿಸಿ ಸ್ಯಾಂಡಲ್‌ವುಡ್ ಕಿಂಗ್ ಎನಿಸಿಕೊಂಡಿರುವ ನಟ ಶಿವರಾಜ್‌ಕುಮಾರ್ ಸದ್ಯ ಸೌತ್ ಇಂಡಿಯಾ ತುಂಬಾ ಹವಾ ಎಬ್ಬಿಸಿದ್ದಾರೆ. ಹೌದು, ಇದೇ ತಿಂಗಳು ಬಿಡುಗಡೆಗೊಂಡಿರುವ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ಮೂಲಕ ಶಿವಣ್ಣ ಕಾಲಿವುಡ್ ಪ್ರವೇಶಿಸಿದ್ದಾರೆ.
ಕನ್ನಡದಲ್ಲಿಯೇ ಡೈಲಾಗ್ ಹೊಡೆಯುತ್ತಾ ಎಂಟ್ರಿ ಕೊಡುವ ಶಿವರಾಜ್‌ಕುಮಾರ್ ಮಂಡ್ಯ ಮೂಲದ ಗ್ಯಾಂಗ್‌ಸ್ಟರ್ ಪಾತ್ರವನ್ನು ಜೈಲರ್ ಚಿತ್ರದಲ್ಲಿ ನಿರ್ವಹಿಸಿದ್ದು ನಾಯಕನಿಗೆ ತನ್ನ ಮಗನನ್ನು ಹುಡುಕಲು ಸಹಾಯ ಮಾಡುವ ಪಾತ್ರ ಮಾಡಿದ್ದಾರೆ. ಇನ್ನು ಶಿವರಾಜ್ ಕುಮಾರ್ ನಿರ್ವಹಿಸಿರುವ ಈ ಪಾತ್ರ ವಿಶೇಷ ಅತಿಥಿ ಪಾತ್ರವಾಗಿದ್ದರೂ ಸಹ ಆ ಪಾತ್ರಕ್ಕೆ ತನ್ನದೇ ಆದ ಗತ್ತು ಗಮ್ಮತ್ತಿದೆ. ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಎಷ್ಟು ಗತ್ತು ಗಮ್ಮತ್ತಿದೆಯೋ ಅಷ್ಟೇ ಮಟ್ಟದ ಬಿಲ್ಡಪ್ ಶಿವಣ್ಣನ ಪಾತ್ರಕ್ಕೂ ಸಹ ಇದೆ. ಮಾಸ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಜತೆಗೆ ರಗಡ್ ಲುಕ್ ನೀಡುತ್ತಾ ಎಂಟ್ರಿ ಕೊಡುವ ಶಿವಣ್ಣನಿಗೆ ಕನ್ನಡ ಸಿನಿ ರಸಿಕರು ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿ ರಸಿಕರೂ ಸಹ ಫಿದಾ ಆಗಿದ್ದಾರೆ.

ಚಿತ್ರ ವೀಕ್ಷಿಸಿ ಹೊರ ಬಂದ ಪರಭಾಷಾ ಸಿನಿ ರಸಿಕರು ಶಿವಣ್ಣನ ಮಾಸ್ ನಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಡಿ ಹೊಗಳಿದ್ದಾರೆ. ಹೀಗೆ ದೊಡ್ಡ ಮಟ್ಟದಲ್ಲಿ ಹೆಸರು ಪಡೆದುಕೊಂಡ೨ ಶಿವಣ್ಣನ ಮುಂದಿನ ಚಿತ್ರಗಳನ್ನು ತಮಿಳು ಭಾಷೆಗೂ ಸಹ ಡಬ್ ಮಾಡಿ ಬಿಡುಗಡೆ ಮಾಡಿ ಎಂಬ ಬೇಡಿಕೆಯನ್ನು ತಮಿಳು ಸಿನಿ ರಸಿಕರು ಇಟ್ಟಿದ್ದಾರೆ. ಹೀಗೆ ನಟಿಸಿದ ಮೊದಲ ತಮಿಳು ಚಿತ್ರದಲ್ಲಿಯೇ ಸೌತ್ ಚಿತ್ರರಂಗಗಳ ಮನ ಗೆದ್ದಿರುವ ಶಿವಣ್ಣ ಈ ಹಿಂದೆ ತೆಲುಗು ನಟ ನಂದಮೂರಿ ಬಾಲಕೃಷ್ಣ ನಟನೆಯ ಗೌತಮಿ ಪುತ್ರ ಶಾತಕರ್ಣಿ ಚಿತ್ರದಲ್ಲಿಯೂ ಸಹ ವಿಶೇಷ ಪಾತ್ರ ನಿರ್ವಹಿಸುವ ಮೂಲಕ ಟಾಲಿವುಡ್ ಪ್ರವೇಶಿಸಿದ್ರು.
ಹೀಗೆ ಸೌತ್‌ನ ಒಟ್ಟು ಮೂರು ಚಿತ್ರರಂಗಗಳ ಚಿತ್ರಗಳಲ್ಲಿ ನಟಿಸಿರುವ ಶಿವರಾಜ್‌ಕುಮಾರ್ ಸದ್ಯ ಬಾಲಿವುಡ್‌ಗೂ ಸಹ ಕಾಲಿಡುವ ಸಾಧ್ಯತೆ ಇದೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೌದು, ಈ ಶಿವರಾಜ್‌ಕುಮಾರ್ ಹಿಂದಿ ಚಿತ್ರವೊಂದಕ್ಕಾಗಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಇದೆ. ಈ ರೀತಿಯ ಸುದ್ದಿ ಹರಿದಾಡಲು ಕಾರಣ ಈ ವರ್ಷ ಬಿಡುಗಡೆಗೊಂಡು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದ ಬಾಲಿವುಡ್‌ನ 'ದ ಕೇರಳ ಸ್ಟೋರಿ' ಚಿತ್ರದ ನಿರ್ದೇಶಕ ಸುದೀಪ್ತೊ ಸೇನ್ ಶಿವಣ್ಣನನ್ನು ಭೇಟಿಯಾಗಿರುವುದು.
ಹೌದು, ಕೇರಳ ಸ್ಟೋರಿ ಚಿತ್ರದ ನಿರ್ದೇಶಕ ಸುದೀಪ್ತೊ ಸೇನ್ ಶಿವಣ್ಣರನ್ನು ಭೇಟಿ ಮಾಡಿರುವ ಫೋಟೊಗಳು ಹರಿದಾಡಿದ್ದು, ನಿರ್ದೇಶಕ ತನ್ನ ಮುಂದಿನ ಚಿತ್ರ 'ಬಸ್ತರ್'ನಲ್ಲಿ ಶಿವಣ್ಣನಿಗೆ ವಿಶೇಷ ಪಾತ್ರವೊಂದನ್ನು ನಿರ್ವಹಿಸಲು ಆಹ್ವಾನಿಸಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











