ರಶ್ಮಿಕಾ ನಿಮಗೆ ಹಿಂದಿ ಸಿನಿಮಾ ಸೆಟ್ ಆಗಲ್ಲ, ದಯಮಾಡಿ ನೀವು ದಕ್ಷಿಣಕ್ಕೆ ವಾಪಸ್ ಹೋಗಿ
10 ವರ್ಷದ ಹಿಂದೆ ರಶ್ಮಿಕಾ ಮಂದಣ್ಣ ಅಂದರೆ ಯಾರದು ? ಎಂಬ ಪ್ರಶ್ನೆ ಹಲವರಲ್ಲಿತ್ತು. ಆದರೆ.. ಆ ನಂತರ ಬಂದ ''ಕಿರಿಕ್ ಪಾರ್ಟಿ'' ಇವರ ಬದುಕನ್ನೇ ಬದಲಿಸಿತು. ''ಕಿರಿಕ್ ಪಾರ್ಟಿ'' ಎಂಬ ಒಂದೇ ಒಂದು ಚಿತ್ರದ ಅತ್ಯದ್ಭುತವಾದ ಗೆಲುವು ರಶ್ಮಿಕಾ ಮಂದಣ್ಣ ಅವರನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ನಿಲ್ಲಿಸಿತು.
ಇವತ್ತು ರಶ್ಮಿಕಾ ಮಂದಣ್ಣ ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ. ಕನ್ನಡ ಒಂದು ಹೊರತು ಪಡಿಸಿದರೆ ಬೇರೆ ಎಲ್ಲಾ ಭಾಷೆಯಲ್ಲಿ ರಶ್ಮಿಕಾಗೆ ಚಿನ್ನದಂತಹ ಬೇಡಿಕೆ ಇದೆ. ಅದರಲ್ಲಿಯೂ ಹಿಂದಿಯಲ್ಲಿಯಂತೂ ರಶ್ಮಿಕಾ ಮಂದಣ್ಣ ಕಾಲ್‌ಶೀಟ್‌ಗೆ ನಿರ್ಮಾಪಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಹೌದು, ಶೋಭಾ ದೇ.. ಅಂದಕಾಲತ್ತಿಲ್‌ನ ಮಾಡೆಲ್. ಆ ನಂತರ ಪತ್ರಕರ್ತೆಯಾಗಿ ಲೇಖಕಿಯಾಗಿ ಅಂಕಣಕಾರ್ತಿಯಾಗಿ ಕಾದಂಬರಿಗಾರ್ತಿಯಾಗಿ ಹೆಸರು ಮಾಡಿರುವ ಶೋಭಾ ದೇ ''ಸಿಸ್ಟರ್ಸ್''.. ''ಸೆಕೆಂಡ್ ಥಾಟ್ಸ್''.. ''ಸೋಶಿಯಲೈಟ್ ನೈಟ್ಸ್''.. ''ಸಲ್ಟ್ರಿ ಡೇಸ್''.. ಸೇರಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
ಇಂಥಾ ಶೋಭಾ ದೇ ಸದ್ಯ ''ಕಾಕ್‌ಟೇಲ್ 2'' ಚಿತ್ರದ ವಿಮರ್ಶೆಯನ್ನು ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರನ್ನು ಹೀನಾಮಾನವಾಗಿ ತೆಗಳಿದ್ದಾರೆ. ದಯಮಾಡಿ ಹಿಂದಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ದಕ್ಷಿಣದತ್ತ ಮುಖ ಮಾಡಿಬಿಡಿ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮೂಲಕ ರಿವ್ಯೂ ಹಂಚಿಕೊಂಡಿರುವ ಶೋಭಾ, ರಶ್ಮಿಕಾ, ನನ್ನನ್ನು ಕ್ಷಮಿಸು.. ಆದರೆ ಹಿಂದಿ ಸಿನಿಮಾಗಳು ಖಂಡಿತವಾಗಿಯೂ ನಿಮಗೆ ಸೂಕ್ತ ಅಲ್ಲ ಎಂದಿದ್ದಾರೆ. ಈ ಮೂಲಕ ಬಾಲಿವುಡ್ ಚಿತ್ರಗಳಿಗೆ ರಶ್ಮಿಕಾ ಹೊಂದಿಕೊಳ್ಳುವುದಿಲ್ಲ ಎಂದು ನೇರವಾಗಿಯೇ ಹೇಳಿದ್ಧಾರೆ. ರಶ್ಮಿಕಾ ಮಂದಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಈ ಮೂಲಕ ಗುರಿಯಾಗಿದ್ದಾರೆ.
ಇನ್ನು ಈ ''ಕಾಕ್‌ಟೇಲ್ 2'' 2012ರಲ್ಲಿ ಬಂದಿದ್ದ ''ಕಾಕ್‌ಟೇಲ್''ನ ಸೀಕ್ವೆಲ್. ಆ ಚಿತ್ರಕ್ಕೆ ಈ ಚಿತ್ರವನ್ನು ಕೂಡ ಹೋಲಿಸಿ ಮಾತನಾಡಿರುವ ಶೋಭಾ ದೇ ಚಿತ್ರಕ್ಕೆ ತಲೆ ಬುಡ ಯಾವುದು ಇಲ್ಲ ಎಂದಿದ್ಧಾರೆ. ಶಾಹಿದ್ ಕಪೂರ್ ಗಾಗಿ ಇಬ್ಬರು ಮಹಿಳೆಯರು ಹೊಡೆದಾಡುವುದು, ನಂತರ ಶಾಹಿದ್ ಅವರಿಗೆ ಉಪದೇಶ ಕೊಡುವುದು, ಹಳೆಯ ಕಾಲದ ಹಳಸಲು ಕಥೆ ಎಂದು ಹೇಳಿರುವ ಶೋಭಾ ಚಿತ್ರದಲ್ಲಿ ನೀಡಲಾದ ಉಪದೇಶ ಎಲ್ಲವೂ ನಕಲಿ ಎಂಬ ಭಾವನೆ ಬರುತ್ತೆ ಎಂದು ಹೇಳಿದ್ದಾರೆ. ಚಿತ್ರ ನೋಡಿದ ತಪ್ಪಿಗೆ ಹ್ಯಾಂಗೋವರ್ ನಿಂದ ಹೊರ ಬರಲು ಕಡಿಮೆ ಅಂದರೂ 5 ಗ್ಲಾಸ್ ಸ್ಟ್ರಾಂಗ್ ಡ್ರಿಂಕ್ (ಇಟಾಲಿಯನ್ ಕಾಕ್‌ಟೇಲ್ ನೆಗ್ರೋನಿ) ಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಮುಂದುವರೆದು ರಶ್ಮಿಕಾ ಅಭಿನಯವನ್ನು ಟೀಕಿಸಿರುವ ಶೋಭಾ ದೇ, ಚಿತ್ರದ ಮತ್ತೊಬ್ಬ ನಾಯಕಿ ಕೃತಿ ಸನೋನ್ ಅವರ ಅಭಿನಯವನ್ನು ಕೊಂಡಾಡಿದ್ದಾರೆ. ಕೃತಿ ಸನೋನ್ ಲುಕ್ ಚೆನ್ನಾಗಿದೆ, ಇಷ್ಟೇ ಅಲ್ಲ ಅದ್ಭುತವಾಗಿ ಅಭಿನಯಿಸಿದ್ದಾರೆ ಕೂಡ ಎಂದು ಹೇಳಿರುವ ಶೋಭಾ ದೇ ಹೀರೊ ಶಾಹಿದ್ ಕಪೂರ್ ಚಿತ್ರದ ಪ್ಲಸ್ ಪಾಯಿಂಟ್ ಆಗಿದ್ದರೂ ಕೂಡ ಆತನಿಗೊಂದು ಹೊಸ ಹೇರ್‌ಕಟ್ ಬೇಕಾಗಿದೆ ಎಂದಿದ್ದಾರೆ.
ಶೋಭಾಗೆ ಸಬಾ ಅಲಿ ಪಟೌಡಿ ಸಾಥ್
ಕೇವಲ ಶೋಭಾ ದೇ ಮಾತ್ರವಲ್ಲ. ಶೋಭಾ ಮಾತನಾಡಿದ ಈ ಮಾತುಗಳಿಗೆ ಸಬಾ ಅಲಿ ಪಟೌಡಿ ಕೂಡ ಧ್ವನಿಗೂಡಿಸಿದ್ದಾರೆ. ಈ ಸಬಾ ಬೇರೆ ಯಾರು ಅಲ್ಲ ಬದಲಿಗೆ ಸೈಫ್ ಅಲಿ ಖಾನ್ ಸಹೋದರಿ. ನೆನಪಿರಲಿ.. 2012ರಲ್ಲಿ ಬಂದಿದ್ದ ''ಕಾಕ್‌ಟೇಲ್'' ಚಿತ್ರದಲ್ಲಿ ನಾಯಕನ ಪಾತ್ರವನ್ನು ಸೈಫ್ ಅಲಿ ಖಾನ್ ನಿರ್ವಹಿಸಿದ್ದರು. ಈ ಹಿನ್ನೆಲೆ ಇವರ ಕಾಮೆಂಟ್ ಕೂಡ ಗಮನ ಸೆಳೆಯುತ್ತಿದೆ. ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ಶೋಭಾ ಅವರೇ, ನಾನು ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಹೇಳಿರುವ ಸಬಾ ಅಲಿ ಪಟೌಡಿ, ಇಬ್ಬರು ಹೆಣ್ಣುಮಕ್ಕಳು ಒಬ್ಬ ಹುಡುಗನಿಗಾಗಿ ಜಗಳವಾಡುವುದನ್ನು ಬಿಡಿ, ಸ್ವತಃ ಆ ನಾಯಕನ ಭಾವನೆಗಳು ಎಷ್ಟು ಪೇಲವವಾಗಿವೆ ಎನ್ನುವುದನ್ನು ನೀವು ಗಮನಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ಧಾರೆ.
ಕೃತಿ ಸನೋನ್ ಅಭಿನಯವನ್ನು ಸಬಾ ಕೂಡ ಮೆಚ್ಚಿಕೊಂಡಿದ್ದು, ರಶ್ಮಿಕಾ ಮಂದಣ್ಣ ಅಭಿನಯ ಒಟ್ಟಾರೆಯಾಗಿ ಚೆನ್ನಾಗಿದೆ. ಆದರೆ.. ದಕ್ಷಿಣದ ಭಾರತದದ ಚಿತ್ರರಂಗವೇ ಅವರಿಗೆ ಸೂಕ್ತ ಎಂದಿದ್ದಾರೆ. ಶಾಹಿದ್ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ಧಾರೆ ಎಂದಿದ್ದಾರೆ. ಸದ್ಯ ಸಬಾ ಅಲಿ ಪಟೌಡಿ ಮತ್ತು ಶೋಭಾ ದೇ ಅವರ ಈ ವಿಮರ್ಶೆ ರಶ್ಮಿಕಾ ಮಂದಣ್ಣ ಅಭಿಮಾನಿಗಳನ್ನು ಕೆರಳಿಸಿದೆ. ಶೋಭಾ ದೇಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications