'ರಾಮಾಯಣ' ಕೇಂದ್ರಬಿಂದು ಪಾತ್ರಕ್ಕೆ ಮಲಯಾಳಂ ನಟಿ ಆಯ್ಕೆ; ರಾವಣನ ತಾತನಾಗಿ ನಟಿಸೋದ್ಯಾರು?
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಹಾಲಿವುಡ್ ಸಿನಿಮಾಗಳ ರೀತಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡ್ತಿದ್ದಾರೆ. ಎರಡೂ ಭಾಗಗಳಾಗಿ ಸಿನಿಮಾ ತೆರೆಗೆ ಬರ್ತಿದೆ.
ಈಗಾಗಲೇ 'ರಾಮಾಯಣ' ಚಿತ್ರದ ಮೊದಲ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. 2ನೇ ಭಾಗದ ಶೂಟಿಂಗ್ ಕಳೆದೆರಡ ಶುರುವಾಗಿದೆ. ಮತ್ತೆ ಶ್ರೀರಾಮನ ವೇಷದಲ್ಲಿ ರಣ್‌ಬೀರ್ ಕಪೂರ್ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಇನ್ನು ಸ್ಟಾರ್ ಕಾಸ್ಟ್ ಕಾರಣಕ್ಕೂ ಸಿನಿಮಾ ಬಹಳ ಚರ್ಚೆ ಹುಟ್ಟಾಕ್ಕಿದೆ. ಸಣ್ಣ ಸಣ್ಣ ಪಾತ್ರಗಳಿಗೂ ಪ್ರತಿಭಾನ್ವಿತ ಕಲಾವಿದರನ್ನು ಬಳಸಿಕೊಳ್ಳಲಾಗುತ್ತಿದೆ. 'ರಾಮಾಯಣ' ಕತೆಯಲ್ಲಿ ಬಹುಮುಖ್ಯ ಪಾತ್ರ ಕೈಕೇಯಿ. ಇದೀದ ಕಾವ್ಯದ ಕೇಂದ್ರಬಿಂದು ಈ ಪಾತ್ರ.

ಶ್ರೀರಾಮ ವನವಾಸಕ್ಕೆ ತೆರಳಲು ಕೈಕೇಯಿ ಕಾರಣವಾಗುತ್ತಾಳೆ. ರಾಮನ ಜೊತೆ ಸೀತಾ, ಲಕ್ಷ್ಮಣರು ವನವಾಸ ಅನುಭವಿಸುತ್ತಾರೆ. ಸೀತಾಪರಣವಾಗುತ್ತದೆ. ರಾಮ ಲಂಕೆಗೆ ತೆರಳಿ ರಾವಣನ ಸಂಹಾರ ಮಾಡಿ ಸೀತೆಯನ್ನು ಕರೆತರುತ್ತಾನೆ. ಆದರೆ ಶ್ರೀರಾಮನು ಮರ್ಯಾದ ಪುರುಷೋತ್ತಮನೆನಿಸಿಕೊಳ್ಳಲು ಕೈಕೇಯಿಯೇ ಕಾರಣ ಎನ್ನುವವರು ಇದ್ದಾರೆ. ಅದೆಲ್ಲಾ ಏನೇ ಇರಲಿ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಮಲಯಾಳಂ ನಟಿ ಶೋಭನಾ ಈ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಎನ್ನಲಾಗ್ತಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಶೋಭನಾ ಇದೀಗ 'ರಾಮಾಯಣ' ಚಿತ್ರದಲ್ಲಿ ಕೈಕೇಯಿ ಪಾತ್ರದಲ್ಲಿ ಬಣ್ಣ ಹಚ್ಚಿರುವುದು ಕುತೂಹಲ ಮೂಡಿಸಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸೊಗಬೇಕಿದೆ. ಇನ್ನು ರಾವಣನ ತಾತ ಸುಮಾಲಿ ಪಾತ್ರದಲ್ಲಿ ಚೇತನ್ ಹನ್ಸ್‌ರಾಜ್ ನಟಿಸುತ್ತಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಮಿನೀಟ್ಸ್ ಆಫ್ ಮಸಾಲಾ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

"ರಣ್‌ಬೀರ್, ಯಶ್ ನಟನೆಯ 'ರಾಮಾಯಣ' ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರೀಕರಣ ಮುಗಿಸಿದ್ದೇನೆ. ನಾನು ನಟಿಸಿರುವ ಸಿನಿಮಾಗಳಲ್ಲಿ ಇದು ಬಹಳ ವಿಶೇಷ. ಸಿನಿಮಾ ಮೇಕಿಂಗ್ ನೋಡಿ ಶಾಕ್ ಆಯಿತು. ಹಾಲಿವುಡ್ ಖ್ಯಾತ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ದಿಗ್ಗಜ ಕಲಾವಿದರ ಜೊತೆ ನಾನು ನಟಿಸಿದ್ದೀನಿ. ರಾವಣನ ಪಾತ್ರದಲ್ಲಿ ನಟಿಸಿದ್ದೀನಿ, ಈ ಪಾತ್ರ ಬಹಳ ನಿರ್ಣಾಯಕ. ಈ ಚಿತ್ರವನ್ನು ಯಾವ ಮಟ್ಟದಲ್ಲಿ ತೆರೆಗೆ ತರ್ತಿದ್ದಾರೆ ಎನ್ನುವುದು ಮುಂದೆ ನಿಮಗೆ ಗೊತ್ತಾಗುತ್ತದೆ" ಎಂದಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ಖ್ಯಾತ ಗಾಯಕ ಕಿಶೋರ್ ಕುಮಾರ್ ಬಯೋಪಿಕ್ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ ರಣ್‌ಬೀರ್ ಕಪೂರ್ ನಟಿಸಬೇಕಿತ್ತು. ಆದರೆ 'ರಾಮಾಯಣ' ಚಿತ್ರವನ್ನು ಒಪ್ಪಿಕೊಂಡಿರುವ ಕಾರಣ ಸದ್ಯಕ್ಕೆ ಕಿಶೋರ್ ಕುಮಾರ್ ಬಯೋಪಿಕ್ ಒಲ್ಲೆ ಎಂದಿದ್ದಾರೆ. ಇನ್ನು ಅಂದಾಜು 4000 ಕೋಟಿ ರೂ. ಬಜೆಟ್‌ನಲ್ಲಿ 'ರಾಮಾಯಣ' ಸಿನಿಮಾ ನಿರ್ಮಾಣವಾಗುತ್ತಿದೆ. ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ರಾವಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ.
ಮುಂದಿನ ವರ್ಷ ದೀಪಾವಳಿ ಹಬ್ಬದ ಸಂಭ್ರಮದಲ್ಲಿ 'ರಾಮಾಯಣ' ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ. ಸೀತಾಪಹರಣದವರೆಗಿನ ಕಥೆ ಚಿತ್ರದಲ್ಲಿ ಇರಲಿದೆ. 2027ರ ದೀಪಾವಳಿ ಸಂಭ್ರಮದಲ್ಲಿ ಎರಡನೇ ಭಾಗ ಸಿನಿಮಾ ಬಿಡುಗಡೆ ಆಗಲಿದೆ. ಅದರಲ್ಲಿ ರಾಮಸೇತು ನಿರ್ಮಾಣ, ರಾವಣ ಸಂಹಾರ ಸಂಗತಿಗಳನ್ನು ಕಟ್ಟಿಕೊಡಲಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಇದು ಬಹಳ ದುಬಾರಿ ಸಿನಿಮಾ ಎನಿಸಿಕೊಂಡಿದೆ.
ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್, ಶೂರ್ಪನಖಿಯಾಗಿ ರಕುಲ್, ಮಂಡೋದರಿಯಾಗಿ ಕಾಜಲ್ ಅಗರ್‌ವಾರ್, ದಶರಥನಾಗಿ ಅರುಣ್ ಗೋವಿಲ್ ಹೀಗೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಹಾಲಿವುಡ್ ಸಂಸ್ಥೆಗಳು ಈ ಚಿತ್ರಕ್ಕಾಗಿ ಕೈಜೋಡಿಸಿವೆ.


Click it and Unblock the Notifications











