ಹೇರಾ ಫೇರಿ 3 ಚಿತ್ರದಿಂದ ಏಕಾಏಕಿ ಹೊರ ಬಂದ ಪರೇಶ್ ರಾವಲ್, ಫ್ಯಾನ್ಸ್ ಶಾಕ್..!
ಕೆಲವು ಚಿತ್ರಗಳ ಪಾತ್ರಗಳಲ್ಲಿ ಸಮ್ಮೋಹಕ ಶಕ್ತಿ ಇರುತ್ತೆ. ಆ ಪಾತ್ರಗಳು ಪ್ರೇಕ್ಷಕರನ್ನು ಆವರಿಸಿಕೊಂಡಿರುತ್ತವೆ. ಹೃದಯವನ್ನು ಗೆದ್ದಿರುತ್ತವೆ. ವರ್ಷಾನು ವರ್ಷಗಳಾದರೂ ಕೂಡಾ ಆ ಪಾತ್ರಗಳನ್ನು ಜನ ಮರೆಯುವುದಿಲ್ಲ. ಬದಲಿಗೆ ಮತ್ತೆ ಮತ್ತೆ ಅದೇ ಪಾತ್ರದಲ್ಲಿ ಅದೇ ಕಲಾವಿದರನ್ನು ನೋಡಲು ಜನ ಬಯಸುತ್ತಾರೆ. ಚಿತ್ರದ ಮುಂದುವರೆದ ಭಾಗಗಳನ್ನು ಮಾಡಿ ಎನ್ನುವ ಒತ್ತಾಯವನ್ನು ಮಾಡುತ್ತಾರೆ. ಉದಾಹರಣೆಗೆ ಹೇರಾ ಫೇರಿ ಚಿತ್ರದ ರಾಜು-ಶ್ಯಾಮ್ ಮತ್ತು ಬಾಬು ಭಯ್ಯಾ ಪಾತ್ರಗಳು.
ಹೌದು. ಹೇರಾ ಫೇರಿ ಚಿತ್ರ ತೆರೆಗೆ ಬಂದು 25 ವರ್ಷಗಳಾಗಿವೆ. ಆದರೆ ಇವತ್ತು ಕೂಡಾ ಅಕ್ಷಯ್ ಕುಮಾರ್.. ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ನಿರ್ವಹಿಸಿರುವ ಈ ಪಾತ್ರಗಳನ್ನು ಚಿತ್ರ ರಸಿಕರು ಮರೆತಿಲ್ಲ. ಇವತ್ತು ಕೂಡಾ ಈ ಚಿತ್ರ ಕಿರುತೆರೆಯಲ್ಲಿ ಪ್ರಸಾರವಾದಾಗ ಅಥವಾ ಓಟಿಟಿಯಲ್ಲಿ ನೋಡಿದಾಗ ಅನೇಕ ಪ್ರೇಕ್ಷಕರು ಉಳ್ಳಾಡಿ ನಗುತ್ತಾರೆ.

ಹೇರಾ ಫೇರಿಗೆ ಹೋಲಿಸಿದರೆ 2006ರಲ್ಲಿ ತೆರೆಗೆ ಬಂದ ಫಿರ್ ಹೇರಾ ಪೇರಿಯ ಕಥೆ ಪೇಲವವಾಗಿತ್ತು. ಆದರೂ ಕೂಡ ಆ ಚಿತ್ರದ ಗೆಲುವಿನ ಹಿಂದೆ ಇದೇ ಪಾತ್ರಗಳ ಮ್ಯಾಜಿಕ್ ಇತ್ತು. ಆದರೆ ಈಗ ಈ ಮ್ಯಾಜಿಕ್ ಮಾಯವಾಗಿದೆ. ಯಾಕೆಂದರೆ ತ್ರಿವಳಿ ಜೋಡಿ ಬೇರ್ಪಟ್ಟಿದೆ.
ಹೌದು ಅಸಲಿಗೆ ಭಾರೀ ಜನಾಭಿಪ್ರಾಯದ ಮೇರೆಗೆ ಈ ವರ್ಷದ ಜನವರಿಯಲ್ಲಿ ನಿರ್ದೇಶಕ ಪ್ರಿಯದರ್ಶನ್ ಹೇರಾಫೇರಿ ಚಿತ್ರದ ಮೂರನೇ ಭಾಗವನ್ನು ಘೋಷಿಸಿದ್ದರು. ಅಕ್ಷಯ್ ಕುಮಾರ್ . ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಈ ಚಿತ್ರದಲ್ಲಿ ಕೂಡ ಮುಂದುವರೆಯಲಿದ್ದಾರೆ ಎಂದು ಹೇಳಿದ್ದರು.
ಹೇರಾಫೇರಿ ಫ್ರಾಂಚೈಸಿಯ ಅಭಿಮಾನಿಗಳು ಸಹಜವಾಗಿ ಈ ಸುದ್ದಿಯನ್ನು ಕೇಳಿ ಸಂಭ್ರಮಿಸಿದ್ದರು. ಯಾಕೆಂದರೆ ನಾವು ಆಗಲೇ ಹೇಳಿದಂತೆ ಕೆಲವು ಪಾತ್ರಗಳು ಪಾತ್ರಗಳಾಗಿರುವುದಿಲ್ಲ. ಬದಲಿಗೆ ಜನರ ಹೃದಯಕ್ಕೆ ಹತ್ತಿರವಾಗಿರುತ್ತಾವೆ. ಹೀಗಾಗಿ ಆದಷ್ಟು ಬೇಗ ಈ ಚಿತ್ರದ ಚಿತ್ರೀಕರಣ ಮುಗಿಸಿ ಬಿಡುಗಡೆಯನ್ನು ಮಾಡಿ ಎಂದು ಮನವಿಯನ್ನು ಹಲವಾರು ಜನ ಸೋಶಿಯಲ್ ಮೀಡಿಯಾ ಮೂಲಕ ಮಾಡಿದ್ದರು.
ಆದರೆ ಈಗ ನೋಡಿದರೆ ಪರೇಶ್ ರಾವಲ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಚಿತ್ರದ ಚಿತ್ರೀಕರಣ ಇನ್ನೇನು ಶುರುವಾಗಬೇಕು ಎನ್ನುವಷ್ಟರಲ್ಲಿ ಚಿತ್ರತಂಡದಿಂದ ಹೊರ ಬಂದಿದ್ದಾರೆ. ಪರೇಶ್ ರಾವಲ್ ಅವರ ಈ ನಡೆಯಿಂದ ಸದ್ಯ ಹಲವಾರು ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.
ಈ ಕುರಿತು ಬಾಲಿವುಡ್ ಹಂಗಾಮಾಗೆ ಪ್ರತಿಕ್ರಿಯೆಯನ್ನು ಕೂಡ ನೀಡಿರುವ ಪರೇಶ್ ರಾವಲ್, ಹೌದು ನಾನು ಚಿತ್ರದಿಂದ ಹೊರ ಬಂದಿರುವುದು ಸತ್ಯ ಎಂದು ಹೇಳಿದ್ದಾರೆ. ಆದರೆ ಕಾರಣವನ್ನು ಹೇಳಿಲ್ಲ. ಇದೇ ಚಿತ್ರತಂಡದ ಸದಸ್ಯರೊಬ್ಬರು ಬಾಲಿವುಡ್ ಹಂಗಾಮಾಗೆ ಹೇಳಿರುವಂತೆ ಕಥೆ ವಿಚಾರದಲ್ಲಿ ನಿರ್ದೇಶಕ ಪ್ರಿಯದರ್ಶನ್ ಮತ್ತು ಪರೇಶ್ ರಾವಲ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಈ ಹಿನ್ನೆಲೆ ಹಿಂದೆ ಸರಿಯುವುದೇ ಉತ್ತಮ ಎನ್ನುವ ತೀರ್ಮಾನಕ್ಕೆ ಪರೇಶ್ ರಾವಲ್ ಬಂದಿದ್ದಾರೆ.
ಪರೇಶ್ ರಾವಲ್ ಅವರ ಈ ನಿರ್ಧಾರದಿಂದ ಸಹಜವಾಗಿ ಬೇಸರಗೊಂಡಿರುವ ಹೇರಾ ಫೇರಿ ಅಭಿಮಾನಿಗಳು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಚಿತ್ರದಲ್ಲಿ ಪರೇಶ್ ರಾವಲ್ ಇರದಿದ್ದರೆ ಚಿತ್ರವನ್ನು ಮಾಡಲೇಬೇಡಿ ಎನ್ನುತ್ತಿದ್ದಾರೆ. ದುಡ್ಡಿಗಾಗಿ ಸುಮ್ಮನೆ ಚಿತ್ರವನ್ನು ಮಾಡಿ ಹೇರಾ ಫೇರಿ ಹೆಸರಿಗೆ ಕಳಂಕ ತರಬೇಡಿ ಎಂದು ಹೇಳುತ್ತಿದ್ದಾರೆ. ಪರೇಶ್ ರಾವಲ್ ಇರದ ಹೇರಾ ಫೇರಿಯನ್ನು ಊಹಿಸಿಕೊಳ್ಳಲು ಕೂಡ ಸಾಧ್ಯ ಇಲ್ಲ ಹೇಗಾದರೂ ಮಾಡಿ ಅವರ ಮನವೊಲಿಸಿ ಮರಳಿ ಕರೆದುಕೊಂಡು ಬನ್ನಿ ಎನ್ನುವ ಮನವಿಯನ್ನು ಕೂಡ ಅನೇಕರು ಮಾಡುತ್ತಿದ್ದಾರೆ.
ಅಂದ್ಹಾಗೇ ಈ ಹಿಂದೆ ಹೇರಾ ಫೇರಿ ಚಿತ್ರದ ಮೂರನೇ ಭಾಗ ಮಾಡುವ ಮಾತುಕಥೆ ಶುರುವಾದಾಗ, ಅಂದರೆ 2022ರಲ್ಲಿ ಅಕ್ಷಯ್ ಕುಮಾರ್ ರಾಜು ಪಾತ್ರವನ್ನು ಮಾಡಲು ಹಿಂದೇಟು ಹಾಕಿದ್ದರು. ಆಗ ಕಾರ್ತಿಕ್ ಆರ್ಯನ್ ಹೆಸರು ತುಂಬಾ ಚಾಲ್ತಿಯಲ್ಲಿತ್ತು. ಅಕ್ಷಯ್ ಕುಮಾರ್ ಬದಲು ಕಾರ್ತಿಕ್ ಆರ್ಯನ್ ಹೇರಾ ಫೇರಿ 3 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿತ್ತು.
ಖುದ್ದು ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಹಾಗೂ ಸುನೀಲ್ ಶೆಟ್ಟಿ ಈ ವಿಚಾರವನ್ನು ನಿಜಾ ಎಂದು ಒಪ್ಪಿಕೊಂಡಿದ್ದರು. ಈ ಹಿನ್ನೆಲೆ ಆಗ ಕೂಡ ಆಕ್ರೋಶ ಭುಗಿಲೇದ್ದಿತ್ತು. ಅಕ್ಷಯ್ ಕುಮಾರ್ ಇರದ ಹೇರಾ ಪೇರಿಯನ್ನು ನಾವು ನೋಡುವುದಿಲ್ಲ ಎಂದು ಚಿತ್ರವನ್ನು ಮನಸಾರೆ ಮೆಚ್ಚಿಕೊಂಡ ಅಭಿಮಾನಿಗಳ ಬಳಗ ಹಠ ಹಿಡಿದಿತ್ತು.
ಈ ಹಿನ್ನೆಲೆ ಚಿತ್ರದ ನಿರ್ಮಾಪಕ ಪಿರೋಜ್ ನಾಡಿಯಾವಾಲಾ ಆ ನಂತರ ಅಕ್ಷಯ್ ಕುಮಾರ್ ಅವರ ಮನವೊಲಿಸಿದರು. ಅಕ್ಷಯ್ ಕುಮಾರ್ ಅವರನ್ನು ಮರಳಿ ಕರೆತಂದಿದ್ದರು. ಸಹಜವಾಗಿ ಈ ಸುದ್ದಿಯನ್ನು ಕೇಳಿ ಅಭಿಮಾನಿಗಳು ಸಂಭ್ರಮಿಸಿದ್ದರು ಕೂಡ. ಇದಕ್ಕೆ ಪೂರಕವಾಗಿ ಪರೇಶ್ ರಾವಲ್, ಅಕ್ಷಯ್ ಕುಮಾರ್ ಮತ್ತು ಸುನೀಲ್ ಶೆಟ್ಟಿ ಜೊತೆಯಲ್ಲಿಯೇ ನಾಡಿಯಾವಾಲಾ ಆಫೀಸ್‌ಗೆ ಬಂದಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡಾ ಆಗಿದ್ದವು.
ಆದರೆ ಈಗ ಖುದ್ದು ಪರೇಶ್ ರಾವಲ್ ಚಿತ್ರತಂಡದಿಂದ ಹೊರ ನಡೆದಿದ್ದಾರೆ. ಇದರಿಂದ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದು ಪರೇಶ್ ರಾವಲ್ ಇರದ ಚಿತ್ರವನ್ನು ನಾವು ನೋಡುವುದಿಲ್ಲ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಪರೇಶ್ ರಾವಲ್ ಬದಲು ಬಾಬು ಭಯ್ಯಾ ಪಾತ್ರವನ್ನು ಯಾರು ಮಾಡಬಹುದು ಎನ್ನುವ ಚರ್ಚೆ ಕೂಡ ಬಾಲಿವುಡ್‌ನಲ್ಲಿ ನಡೆಯುತ್ತಿದ್ದು ಇದೇ ಸಮಯದಲ್ಲಿ ಖುದ್ದು ಪರೇಶ್ ರಾವಲ್ ಹೇರಾ ಪೇರಿ ಚಿತ್ರದ ಮೂಲಕ ಬದಲಾದ ತಮ್ಮ ಇಮೇಜ್‌ನಿಂದ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಇದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆಯಷ್ಟೇ ಲಲನ್ ಟಾಪ್ ಯೂಟ್ಯೂಬ್‌ಗೆ ಸಂದರ್ಶನ ನೀಡಿದ್ದ ಪರೇಶ್ ರಾವಲ್, ತಮ್ಮನ್ನು ಬಾಬು ಭಯ್ಯಾ ಎಂದು ಬ್ರ್ಯಾಂಡ್ ಮಾಡಿರುವುದಕ್ಕೆ ಬಾಲಿವುಡ್ ವಿರುದ್ದ ಕಿಡಿ ಕಾರಿದ್ದರು. ತಮ್ಮ ಅಸಮಾಧಾನ ಹೊರ ಹಾಕಿದ್ದರು. ಈ ಕುರಿತು ಮಾತನಾಡಿದ್ದ ಪರೇಶ್ ರಾವಲ್ 2006ರಲ್ಲಿ ಫಿರ್ ಹೇರಾ ಫೇರಿ ಚಿತ್ರ ಬಿಡುಗಡೆಯಾದ ನಂತರ ನಾನು ವಿಶಾಲ್ ಭಾರದ್ವಾಜ್ ಬಳಿ ಹೋಗಿದ್ದೇ, ನನಗೊಂದು ಪಾತ್ರ ಕೊಡು ಹೇಗಾದರೂ ಮಾಡಿ ಈ ಇಮೇಜ್‌ನ ಬದಲಿಸು ಎಂದು ಕೇಳಿದ್ದೇ ಎಂದು ಹೇಳಿದ್ದರು. ಒಂದೇ ಪಾತ್ರದಿಂದ ಜನ ನನ್ನನ್ನೂ ಗುರುತಿಸುವುದು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದೇ ಎಂದು ನೆನಪು ಮಾಡಿಕೊಂಡಿದ್ದರು.
ಮುಂದುವರೆದು ತೀರಾ ಇತ್ತೀಚೆಗೆ 2022ರಲ್ಲಿ ನನಗೆ ಉಸಿರುಗಟ್ಟಿದಂತೆ ಆಗುತ್ತಿದೆ, ಅದೇ ತರಹದ ಕಾಸ್ಟೂಮ್ ಹಾಕಿಕೊಳ್ಳುತ್ತೇನೆ ಆದರೆ ನನಗೆ ಬೇರೆಯ ಪಾತ್ರವನ್ನು ಕೊಡಿ ಎಂದು ನಾನು ನಿರ್ದೇಶಕ ಆರ್. ಬಾಲ್ಕಿ ಅವರ ಬಳಿ ಕೂಡ ಕೇಳಿಕೊಂಡಿದ್ದೇ ಎಂದು ಪರೇಶ್ ರಾವಲ್ ಹೇಳಿದ್ದರು. ಆದರೆ ಈ ಮಾತುಕಥೆ ಕೂಡ ಫಲ ನೀಡಲಿಲ್ಲ ಎಂದು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದರು.
ಅಂದ್ಹಾಗೇ ಸದ್ಯ ಹೇರಾಫೇರಿ 3 ಚಿತ್ರದಿಂದ ಹೊರ ಬಂದಿರುವ ಪರೇಶ್ ರಾವಲ್, ಇದೇ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಜೊತೆ ಭೂತ್ ಬಂಗ್ಲಾ ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಚಿತ್ರ ಶೀಘ್ರದಲ್ಲಿಯೇ ತೆರೆಗೆ ಬರಲಿದೆ. ಇದಲ್ಲದೇ ಅಕ್ಷಯ್ ಕುಮಾರ್ ಜೊತೆ ವೆಲ್‌ಕಂ ಟು ಜಂಗಲ್ ಚಿತ್ರದಲ್ಲಿ ಕೂಡ ಪರೇಶ್ ರಾವಲ್ ಅಭಿನಯಿಸಿದ್ದಾರೆ.


Click it and Unblock the Notifications











