Sholay: ಬಾಲಿವುಡ್‌ನ ಎವರ್‌ಗ್ರೀನ್ ಚಿತ್ರ 'ಶೋಲೆ' ಹಾಲಿವುಡ್‌ನ ಈ ಚಿತ್ರದ ಕಾಪಿ ಎಂದು ಟ್ರೋಲ್ ಮಾಡಿದ ನಟ!
ಶೋಲೆ.. ಬಾಲಿವುಡ್ ಚಿತ್ರರಂಗದಿಂದ ಬಂದ ಬಿಗ್ಗೆಸ್ಟ್ ಎವರ್ ಗ್ರೀನ್ ಸಿನಿಮಾ. ಇನ್ನೂ ಹಲವಾರು ತಲೆಮಾರುಗಳು ಬಂದರೂ ಈ ಚಿತ್ರದ ಕುರಿತು ಚರ್ಚೆಗಳು ನಡೆಯುತ್ತಲೇ ಇರುವ ಮಟ್ಟದ ಗೆಲುವು ಹಾಗೂ ದಾಖಲೆಗಳನ್ನು ಈ ಚಿತ್ರ ಸಾಧಿಸಿತ್ತು. ಸಲೀಮ್ - ಜಾವೆದ್ ಚಿತ್ರಕಥೆ ಬರೆದಿದ್ದ ಈ ಚಿತ್ರಕ್ಕೆ ರಮೇಶ್ ಸಿಪ್ಪಿ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಧರ್ಮೇಂದ್ರ, ಸಂಜೀವ್ ಕುಮಾರ್, ಹೇಮಾ ಮಾಲಿನಿ, ಅಮಿತಾಭ್ ಬಚ್ಚನ್, ಜಯ ಭಡೂರಿ ಹಾಗೂ ಅಮ್ಜದ್ ಖಾನ್ ನಟಿಸಿದ್ದರು.
ಡಕಾಯಿತ ಗಬ್ಬರ್ ಸಿಂಗ್ ಅನ್ನು ಸೆರೆ ಹಿಡಿಯಲು ನಿವೃತ್ತ ಪೊಲೀಸ್ ಅಧಿಕಾರಿ ವೀರು ಹಾಗೂ ಜೈ ಎಂಬ ಇಬ್ಬರು ಕ್ರಿಮಿನಲ್‌ಗಳನ್ನು ಯೋಜನೆ ಮಾಡುವ ಕಥೆಯನ್ನು ಹೊಂದಿದ್ದ ಈ ಚಿತ್ರ ಆಗಿನ ಕಾಲಕ್ಕೆ ಹೊಸತು ಹಾಗೂ ವಿಭಿನ್ನ ಎನಿಸಿತ್ತು. ಚಿತ್ರದಲ್ಲಿನ ಆಕ್ಷನ್ ದೃಶ್ಯಗಳನ್ನು ಕಂಡು ಸಿನಿ ರಸಿಕರು ಬೆರಗಾಗಿದ್ದರು. ಈ ಚಿತ್ರ ಬಾಲಿವುಡ್ ಮೇಲೆ ಸಿನಿ ರಸಿಕರಿಗೆ ಇದ್ದ ನಂಬಿಕೆ ಹಾಗೂ ಪ್ರೀತಿಯನ್ನು ದುಪ್ಪಟ್ಟು ಮಾಡಿತ್ತು.

ಇಷ್ಟರ ಮಟ್ಟಿಗೆ ಹೆಸರು ಮಾಡಿದ್ದ ಶೋಲೆ ಚಿತ್ರ ಇಂದಿಗೂ ಸಹ ಅನೇಕ ಸಿನಿ ರಸಿಕರಿಂದ ವೀಕ್ಷಿಸಲ್ಪಡುತ್ತಿದ್ದು, ಈಗಲೂ ಸಹ ಸಾಮಾಜಿಕ ಜಾಲತಾಣದಲ್ಲಿ ಶಹಬ್ಬಾಷ್‌ಗಿರಿ ಪಡೆದುಕೊಳ್ಳುತ್ತಿರುತ್ತದೆ. ಇಂಥ ದೊಡ್ಡ ಮಟ್ಟದ ಗೌರವವನ್ನು ಸಂಪಾದಿಸಿರುವ ಶೋಲೆ ಚಿತ್ರದ ಕುರಿತು ಇದೀಗ ದೊಡ್ಡ ಆರೋಪವೊಂದು ಕೇಳಿಬಂದಿದೆ. ಹೌದು, ಶೋಲೆ ಚಿತ್ರದ ದೃಶ್ಯಗಳು ಹಾಲಿವುಡ್ ಚಿತ್ರದ ಕಾಪಿ ಎಂಬ ಟ್ವೀಟ್ ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಈ ರೀತಿಯ ಗಂಭೀರ ಆರೋಪ ಮಾಡಿರುವುದು ನೆಟ್ಟಿಗರಲ್ಲ. ಬದಲಾಗಿ ಅದೇ ಬಾಲಿವುಡ್‌ನ ಖ್ಯಾತ ನಟ ಆದಿಲ್ ಹುಸೇನ್. ಹೌದು, ಅಸ್ಸಾಂ ಮೂಲದ ಆದಿಲ್ ಹುಸೇನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ 'ಒನ್ಸ್ ಅಪಾನ್ ಎ ಟೈಮ್ ಇನ್ ದ ವೆಸ್ಟ್' ಚಿತ್ರದ ದೃಶ್ಯವೊಂದನ್ನು ಹಂಚಿಕೊಂಡಿದ್ದು, "ಹ ಹ್ಹ... ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಿದ/ ಮೆಚ್ಚಿದ ಚಲನಚಿತ್ರವೊಂದರ ದೃಶ್ಯಗಳು ಈ ಕೆಳಗಿನ ಚಿತ್ರದ ನಕಲು ಎಂದು ಯಾರಾದ್ರೂ ಭಾವಿಸಿದ್ರಾ. ಬಹುಶಃ ಹಲವರಿಗೆ ಇದು ಮೊದಲೇ ಗೊತ್ತಿರಬಹುದು. ಆದರೆ ಯಾರೂ ಹೇಳಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ.
ಇಲ್ಲಿ ಆದಿಲ್ ಹುಸೇನ್ ಎಲ್ಲಿಯೂ ಸಹ ಶೋಲೆ ಚಿತ್ರದ ಹೆಸೆರನ್ನು ಬಳಸದೇ ಇದ್ದರೂ ಸಹ ಅವರು ಮಾಡಿರುವ ಆರೋಪ ಶೋಲೆ ಚಿತ್ರಕ್ಕೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತೆ. ಈ ಚಿತ್ರದ ದೃಶ್ಯಗಳಿಗೂ ಹಾಗೂ ಶೋಲೆ ಚಿತ್ರದ ದೃಶ್ಯಗಳಿಗೂ ಸಹ ಸಾಕಷ್ಟು ಸಾಮ್ಯತೆಗಳಿವೆ. ಇನ್ನು ನಟ ಈ ರೀತಿಯ ಟ್ವೀಟ್ ಮಾಡುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ನೆಟ್ಟಿಗರ ಪೈಕಿ ಕೆಲವರು ಈ ಟ್ವೀಟ್ ಪರ ಮಾತನಾಡಿದ್ದರೆ, ಇನ್ನೂ ಕೆಲವರು ಇದನ್ನು ವಿರೋಧಿಸಿದ್ದಾರೆ. ಅಂದಹಾಗೆ ಶೋಲೆ ಚಿತ್ರ 1975ರಲ್ಲಿ ತೆರೆಗೆ ಬಂದ ಚಿತ್ರವಾದರೆ 'ಒನ್ಸ್ ಅಪಾನ್ ಎ ಟೈಮ್ ಇನ್ ದ ವೆಸ್ಟ್' ಸಿನಿಮಾ 1968ರಲ್ಲಿ ಬಿಡುಗಡೆಯಾಗಿತ್ತು.


Click it and Unblock the Notifications











