ಸಲ್ಲು ಸ್ನೇಹಿತ ಗಾಯಕ ಧಿಲ್ಲೋನ್ ಮನೆ ಮೇಲೆ ಗುಂಡಿನ ದಾಳಿ; ವೀಡಿಯೋ ವೈರಲ್
ಐದು ತಿಂಗಳ ಹಿಂದೆ ಮುಂಬೈನಲ್ಲಿರುವ ನಟ ಸಲ್ಮಾನ್ ಖಾನ್ ಬಳಿ ಗುಂಡಿನ ದಾಳಿ ನಡೆದಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ದಾಳಿ ನಡೆದಿದ್ದು ಬಳಿಕ ಗೊತ್ತಾಗಿತ್ತು. ಇದೇ ರೀತಿ ಇದೀಗ ಖ್ಯಾತ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಮನೆ ಮೇಲೆ ಗುಂಡಿನ ದಾಳಿ ನಡೆದಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಕೆನಡಾದ ವ್ಯಾಂಕೋವರ್‌ನಲ್ಲಿ ಗಾಯಕ ಎಪಿ ಧಿಲ್ಲೋನ್ ವಾಸಿಸುತ್ತಿದ್ದಾರೆ. ಭಾನುವಾರ(ಸೆಪ್ಟೆಂಬರ್ 1) ಆತನ ಮನೆ ಮೇಲೆ ಬಂದೂಕಿನಿಂದ ಗುಂಡಿನ ದಾಳಿ ನಡೆಸಿರುವ ವೀಡಿಯೋ ವೈರಲ್ ಆಗಿದ್ದು ಅಲ್ಲಿನ ಮಾಧ್ಯಮಗಳಲ್ಲಿ ಈ ವಿಚಾರ ಭಾರೀ ಸುದ್ದಿ ಆಗುತ್ತಿದೆ. ಸಲ್ಮಾನ್ ಖಾನ್ ಜೊತೆಗೆ ಧಿಲ್ಲೋನ್ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎನ್ನಲಾಗುತ್ತಿರುವ ರೋಹಿತ್ ಗೋಡಾರಾ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ ಎಂದು ವರದಿಯಾಗಿದೆ. ಕೆನಡಾದ ವಿಕ್ಟೋರಿಯಾ ಐಲ್ಯಾಂಡ್ ಮತ್ತು ವುಡ್‌ಬ್ರಿಡ್ಜ್ ಟೊರೊಂಟೊ ಎಂಬ ಎರಡು ಸ್ಥಳಗಳಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ದರೋಡೆಕೋರ ರೋಹಿತ್ ಗೋದಾರಾ ಹೇಳಿರುವಂತೆ ಪೋಸ್ಟ್ ವೈರಲ್ ಆಗುತ್ತಿದೆ. ಧಿಲ್ಲೋನ್ ಅವರ 'ಓಲ್ಡ್ ಮನಿ' ಮ್ಯೂಸಿಕ್ ಆಲ್ಬಂ ಸಾಂಗ್‌ನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡ ಬಳಿಕ ಈ ದಾಳಿ ನಡೆದಿದೆ ಎನ್ನಲಾಗಿದೆ.
ದಾಳಿ ಮಾಡಿದ ವ್ಯಕ್ತಿ ಗಾಯಕನಿಗೆ ಕೊಲೆ ಬೆದರಿಕೆಯನ್ನೂ ಹಾಕಿರುವುದು ವೈರಲ್ ಆಗುತ್ತಿದೆ. "ನೀವು ಮಿತಿ ಮೀರಿದರೆ ನಾಯಿಯಂತೆ ಸಾಯಿಸಲಾಗುತ್ತದೆ" ಎಂದು ಹೇಳಲಾಗಿದೆ. ಘಟನೆ ಬಳಿಕ ಗಾಯಕ ಧಿಲ್ಲೋನ್ ಪ್ರತಿಕ್ರಿಯಿಸಿದ್ದಾರೆ. "ನಾನು ಕ್ಷೇಮವಾಗಿದ್ದೇನೆ. ನಮ್ಮ ಆಪ್ತರು ಕೂಡ ಸುರಕ್ಷಿತವಾಗಿದ್ದಾರೆ. ನಮ್ಮ ಬಗ್ಗೆ ಪ್ರೀತಿ ತೋರಿಸಿದ ಎಲ್ಲರಿಗೂ ಧನ್ಯವಾದ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.
ಗಾಯಕ ಧಿಲ್ಲೋನ್ ಮನೆ ಮೇಲೆ ಗುಂಡಿನ ದಾಳಿ ಬಗ್ಗೆ ಅಭಿಮಾನಿಗಳು ಆತಂಕಗೊಂಡಿದ್ದರು. "ನೀವು ಕ್ಷೇಮವಾಗಿರುವ ವಿಷಯ ತಿಳಿದು ಸಂತಸವಾಗುತ್ತಿದೆ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಸೇಫ್ ಆಗಿರಿ ಬ್ರದರ್' ಎಂದು ಮತ್ತೊಬ್ಬರು ಬರೆದಿದ್ದಾರೆ.
ಕಳೆದ ವರ್ಷ ಕೆನಡಾ ಗಾಯಕ ಗಿಪ್ಪಿ ಗ್ರೆವಾಲ್ ಮನೆ ಮೇಲಿನ ಗುಂಡಿನ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋವ್ ಹೊತ್ತಿದ್ದರು. ಇನ್ನು ಇದೇ ವರ್ಷ ಏಪ್ರಿಲ್ 14ರಂದು ಬೆಳಗ್ಗೆ ಬೈಕ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಸಲ್ಲು ಮನೆ ಮೇಲೆ ಗುಂಡಿನ ಮಳೆಗರೆದಿದ್ದರು. ಪ್ರಕರಣ ಸಂಬಂಧ 6 ಜನರನ್ನು ಪೊಲೀಸರು ಬಂಧಿಸಿದ್ದರು. ಘಟನೆ ಬಳಿಕ ಲಾರೆನ್ಸ್ ಬಿಷ್ಣೋವ್ ಸಹೋದರ ಅನ್ಮೋಲ್ ಬಿಷ್ಣೋವ್ ತಮ್ಮ ಕೈವಾಡದ ಬಗ್ಗೆ ಒಪ್ಪಿಕೊಂಡಿದ್ದನು.


Click it and Unblock the Notifications











