ದೊಡ್ಡ ದೊಡ್ಡ ಸ್ಟಾರ್‌ಗಳನ್ನೆಲ್ಲ ನೀವಾಳಿಸಿ ಬಿಸಾಕಿದ ಶ್ರದ್ಧಾ ಕಪೂರ್, ಬಾಲಿವುಡ್ ನಲ್ಲಿ ದಾಖಲೆ ಬರೆದ ಸ್ತ್ರೀ...!
'ಹೆಣ್ಮಕ್ಳೇ ಸ್ಟ್ರಾಂಗ್ ಗುರು' ಎಂಬ ಮಾತನ್ನು ಬಾಲಿವುಡ್‌ನಲ್ಲಿ ಈ ವರ್ಷ ಅಕ್ಷರಶ ಸಾಬೀತು ಮಾಡಿದ ಹೆಗ್ಗಳಿಕೆ ಶ್ರದ್ಧಾ ಕಪೂರ್ ಅವರದ್ದು. ಯಾಕೆಂದರೆ 2024ರಲ್ಲಿ ಒಂದು ಅರ್ಧ ಡಜನ್ ಸಿನಿಮಾ ಹೊರತು ಪಡಿಸಿದರೆ ಹಿಂದಿ ಚಿತ್ರರಂಗದಲ್ಲಿ ಬಂದ ಉಳಿದೆಲ್ಲ ಸಿನಿಮಾಗಳು ದೊಪ್ಪ ದೊಪ್ಪನೆ ನೆಲಕಪ್ಪಳಿಸಿದ್ದವು. ಆದರೆ, ಸೋತು ಸೊರಗಿ ಹೋಗಿದ್ದ ಹಿಂದಿ ಚಿತ್ರರಂಗವನ್ನು ಈಗ ಶ್ರದ್ಧಾ ಕಪೂರ್ ಅನಾಮಕತ್ತಾಗಿ ಮೇಲಕ್ಕೆತ್ತಿ ನಿಲ್ಲಿಸಿದ್ದಾರೆ.
ಹೌದು, ಶ್ರದ್ಧಾ ಕಪೂರ್ ಅಭಿನಯದ 'ಸ್ತ್ರೀ 2' ಈ ವರ್ಷದ ಬಾಲಿವುಡ್ ಬಾಕ್ಸಾಫೀಸ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದಿದೆ. ದೊಡ್ಡ ದೊಡ್ಡವರೆಲ್ಲ ಮೊದಲ ದಿನ ಎರಡು ಕೋಟಿಯನ್ನೂ ಗಳಿಸಲು ಪರದಾಡುತ್ತಿರುವ ಸಮಯದಲ್ಲಿ ಶ್ರದ್ಧಾ ಕಪೂರ್ ಅಭಿನಯದ ಈ ಸಿನಿಮಾ ಹತ್ತಲ್ಲ.. ಇಪ್ಪತ್ತಲ್ಲ.. 'ಐವತ್ನಾಲ್ಕು' ಕೋಟಿ ಹಣವನ್ನು ಕೇವಲ ಒಂದೂವರೆ ದಿನದಲ್ಲಿ ಕೊಳ್ಳೆ ಹೊಡೆದಿದೆ.

ಹೌದು, ಅಸಲಿಗೆ ಬಿಡುಗಡೆಗೆ ಮುನ್ನ ಹಿಂದಿನ ರಾತ್ರಿ 'ಸ್ತ್ರೀ 2' ಚಿತ್ರದ 'ಪೇಯ್ಡ್ ಪ್ರಿಮಿಯರ್' ಪ್ರದರ್ಶನವನ್ನು ಚಿತ್ರತಂಡ ಹಲವಡೆ ಹಮ್ಮಿಕೊಂಡಿತ್ತು. ಈ ಪ್ರದರ್ಶನಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ '08 ಕೋಟಿ' ಹಣ ನಿರ್ಮಾಪಕರ ಖಜಾನೆ ಸೇರಿತ್ತು. ಆಗಸ್ಟ್ 15ರಂದು ಮೊದಲ ಪ್ರದರ್ಶನ ಆರಂಭವಾಗುವ ಮುನ್ನ ಗೆಲುವಿನ ಸೂಚನೆ ಕೂಡ ಚಿತ್ರತಂಡಕ್ಕೆ ಸಿಕ್ಕಿತ್ತು. ಆದರೆ, ಮೊದಲ ದಿನದ ಅಂತ್ಯಕ್ಕೆ '46' ಕೋಟಿ ಹಣವನ್ನು 'ಸ್ತ್ರೀ 2' ಗಳಿಸಬಹುದು ಎನ್ನುವ ಲೆಕ್ಕಾಚಾರವನ್ನು ಯಾರು ಹಾಕಿರಲಿಲ್ಲ. ಖುದ್ದು ಚಿತ್ರತಂಡ ಈ ಪವಾಡ ನಿರೀಕ್ಷೆ ಮಾಡಿರಲಿಲ್ಲ.
ಇನ್ನೂ.. ನಿಮಗೆ ಗೊತ್ತಿರಲಿ .. ಶಾರುಖ್ ಖಾನ್ ಅಭಿನಯದ 'ಜವಾನ್' ಮೊದಲ ದಿನ '65 ಕೋಟಿ'ಯನ್ನು ಗಳಿಸಿತ್ತು. ಅದಕ್ಕೂ ಹಿಂದೆ ಬಂದ 'ಪಠಾಣ್' '55 ಕೋಟಿ'ಯನ್ನು ಗಳಿಸಿತ್ತು. ಇವೆರಡು ಸಿನಿಮಾ ಹೊರತು ಪಡಿಸಿದರೆ ಇತ್ತೀಚೆಗೆ ಬಂದ ಬೇರೆ ಯಾವ ಚಿತ್ರ ಕೂಡ ಇಷ್ಟೊಂದು ದೊಡ್ಡ ಮೊತ್ತವನ್ನು ಕಲೆ ಹಾಕಿರಲಿಲ್ಲ. '50 ಕೋಟಿ'ಯ ಗಡಿಯನ್ನು ಕೂಡ ಮೊದಲ ದಿನ ತಲುಪಲು ಸನ್ನಿ ಡಿಯೋಲ್, ಹೃತಿಕ್ ರೋಷನ್, ಶಾಹೀದ್ ಕಪೂರ್ ಅವರಿಂದ ಕೂಡ ಸಾಧ್ಯವಾಗಿರಲಿಲ್ಲ.

ನಿಜಾ.. ಪ್ರಭಾಸ್ ಅಭಿನಯದ 'ಕಲ್ಕಿ 2898 ಎಡಿ' ಮೊದಲ ದಿನ ಭಾರತದಲ್ಲಿ 90 ಪ್ಲಸ್ ಕೋಟಿಯನ್ನು ಗಳಿಸಿತ್ತು. ಆದರೆ, ಕಲ್ಕಿ ಕೇವಲ ಒಂದು ಭಾಷೆಯಲ್ಲಿ ತೆರೆಗೆ ಬಂದಿರಲಿಲ್ಲ. ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಬೇರೆ ಬೇರೆ ಭಾಷೆಯಲ್ಲಿ ತೆರೆಗೆ ಬಂದು ಅಲ್ಲಿನ ಜನರನ್ನು ಸೆಳೆದಿತ್ತು. ಆದರೆ, ಸ್ತ್ರೀ 2 ಕೇವಲ ಹಿಂದಿಯಲ್ಲಿ ಮಾತ್ರ ತೆರೆಗೆ ಬಂದ ಸಿನಿಮಾ. ಆದರೂ ಕೂಡ ಚಿತ್ರ ನೋಡಲು ನೂಕು ನುಗ್ಗಲಿನ ವಾತಾವರಣ ಇದೆ.
ಕೇವಲ ದೆಹಲಿಯಲ್ಲಿಯೇ ನಿನ್ನೆ 1200 ಪ್ರದರ್ಶನವನ್ನು ಕಂಡ 'ಸ್ತ್ರೀ 2', ಮುಂಬೈನಲ್ಲಿ 1103 ಶೋಗಳನ್ನು ಕಂಡಿದೆ. ಆ ಪೈಕಿ ದೆಹಲಿಯಲ್ಲಿ ಶೇಕಡಾ 77% ಜನ ಚಿತ್ರವನ್ನು ನೋಡಿದ್ದರೆ, ಮುಂಬೈನಲ್ಲಿ ಶೇಕಡಾ 81% ಜನ ಈ ಹಾರರ್ ಕಾಮಿಡಿ ಚಿತ್ರ ನೋಡಿ ಎಂಜಾಯ್ ಮಾಡಿದ್ದಾರೆ. ಇನ್ನೂ ನಿನ್ನೆಯ ದಿನ ಪ್ರೇಕ್ಷಕರು ಮತ್ತು ವಿಮರ್ಷಕರ ಪ್ರೀತಿಯನ್ನು ಪಡೆದ ಈ ಚಿತ್ರದ ಶೋ ಸಂಖ್ಯೆಯಲ್ಲಿ ಇಂದು ಹೆಚ್ಚಳವಾಗಿದೆ. ಇವತ್ತೇ ಚಿತ್ರ ನೂರು ಕೋಟಿಯ ಗಡಿಯನ್ನು ದಾಟುವ ನಿರೀಕ್ಷೆ ಇದೆ.


Click it and Unblock the Notifications











