"ಥೂ ಯಾಕಾದ್ರೂ ಆ ಹಾಡು ಹಾಡ್ದೆ ಅಂತ ನಾಚಿಕೆ, ಬೇಸರ ಆಗುತ್ತದೆ"; ಶ್ರೇಯಾ ಘೋಷಾಲ್
ಸಾವಿರಾರು ಹಾಡುಗಳನ್ನು ಹಾಡಿ ಸಂಗೀತ ಪ್ರೇಮಿಗಳ ಮನಗೆದ್ದ ಗಾನ ಕೋಗಿಲೆ ಶ್ರೇಯಾ ಘೋಷಾಲ್. ಕನ್ನಡ ಸಿನಿಮಾಗಳಲ್ಲಿ ಕೂಡ ಶ್ರೇಯಾ ತಮ್ಮ ಗಾಯನದ ಮೂಲಕ ಮೋಡಿ ಮಾಡಿದ್ದಾರೆ. ಸಾಕಷ್ಟು ಹಾಡುಗಳನ್ನು ಹಾಡಿರುವ ಆಕೆ ಅದೊಂದು ಹಾಡು ಯಾಕಾದರೂ ಹಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟು 20 ಭಾಷೆಗಳಲ್ಲಿ 3000 ಸಾವಿರಕ್ಕೂ ಅಧಿಕ ಹಾಡುಗಳನ್ನು ಶ್ರೇಯಾ ಹಾಡಿದ್ದಾರೆ. ಅದರಲ್ಲಿ 1500ಕ್ಕೂ ಅಧಿಕ ಹಿಂದಿ ಗೀತೆಗಳಿವೆ. ಕನ್ನಡದಲ್ಲೇ 300ಕ್ಕೂ ಅಧಿಕ ಸಿನಿಮಾ ಹಾಡುಗಳಿಗೆ ಆಕೆ ದನಿಯಾಗಿದ್ದಾರೆ. 2015ರಲ್ಲಿ ಹಸೆಮಣೆ ಏರಿದ ಶ್ರೇಯಾ ಒಂದು ಮಗುವಿನ ತಾಯಿಯಾದ ಬಳಿಕ ಕೂಡ ಹಾಡುವುದನ್ನು ಮುಂದುವರೆಸಿದ್ದಾರೆ. ತಮ್ಮ ಗಾಯನದಿಂದ ಸಂಗೀತಪ್ರೇಮಿಗಳ ಮನಸೂರಿಗೊಂಡಿದ್ದಾರೆ.

ಇಷ್ಟೆಲ್ಲಾ ಹಾಡುಗಳನ್ನು ಹಾಡಿರುವ ಆಕೆ 'ಅಗ್ನಿಪಥ್' ಚಿತ್ರದ 'ಚಿಕ್ನಿ ಚಮೇಲಿ' ಐಟಂ ಸಾಂಗ್ ಯಾಕಾದರೂ ಹಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಲಿಲ್ಲಿ ಸಿಂಗ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಶ್ರೇಯಾ ಮಾತನಾಡಿದ್ದಾರೆ. ಈ ಹಾಡನ್ನು ಸಣ್ಣ ಮಕ್ಕಳು ಸಾಹಿತ್ಯದ ಅರ್ಥ ಗೊತ್ತಿಲ್ಲದೇ ಹಾಡುತ್ತಾರೆ. ಅದನ್ನು ಕೇಳಿದರೆ ನಾಚಿಕೆ ಆಗುತ್ತದೆ ಎಂದು ಆಕೆ ಹೇಳಿದ್ದಾರೆ.
ಶ್ರೇಯಾ ಮಾತನಾಡಿ "ಕಾ*ಪ್ರಚೋದಕವಾಗಿರುವುದು, ಅದೇ ರೀತಿ ಮಾದಕವಾಗಿರುವುದು ಮತ್ತು ಸಂಪೂರ್ಣವಾಗಿ ವಸ್ತುನಿಷ್ಠವಾಗಿರುವುದು ಅಥವಾ ಸಾಮಾನ್ಯವಾಗಿ ಮಹಿಳೆಯರನ್ನು ವಸ್ತುನಿಷ್ಠವಾಗಿ ನೋಡುವುದರ ನಡುವೆ ಬಹಳ ಸೂಕ್ಷ್ಮವಾದ ಗೆರೆ ಇದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ನಿಧಾನವಾಗಿ ಈ ಬಗ್ಗೆ ಜಾಗೃತವಾಗಿರಲು ಮುಂದಾದೆ. ಕಾರಣ ಈ ಹಾಡುಗಳ ಸಾಹಿತ್ಯದ ಅರ್ಥ ಗೊತ್ತಿಲ್ಲದೇ ಪುಟ್ಟ ಹುಡುಗಿಯರು ಹಾಡುತ್ತಾರೆ, ಡ್ಯಾನ್ಸ್ ಮಾಡುತ್ತಾರೆ ಇದು ಸರಿಯಲ್ಲ" ಎಂದಿದ್ದಾರೆ.

"ನೀವು ಹಾಡಿರುವ ಈ ಹಾಡು ತುಂಬಾ ಇಷ್ಟ. ನಾವು ನಿಮಗಾಗಿ ಅದನ್ನು ಹಾಡಬಹುದೇ?' ಎಂದು ಮಕ್ಕಳು ಕೇಳುತ್ತಾರೆ. ಆಗ ನನಗೆ ತುಂಬಾ ಮುಜುಗರವಾಗುತ್ತದೆ. ಕೇವಲ ಐದು ಅಥವಾ ಆರು ವರ್ಷ ವಯಸ್ಸಿನ ಪುಟ್ಟ ಹುಡುಗಿ ಆ ಹಾಡಿದಾಗ ಸರಿ ಅನ್ನಿಸುವುದಿಲ್ಲ" ಎಂದು ಶ್ರೇಯಾ ಬೇಸರ ವ್ಯಕ್ತಪಡಿಸಿದ್ದಾರೆ.
ಈಗ ನಾನು ಈ ಬಗ್ಗೆ ಬಹಳ ಎಚ್ಚರಿಕೆ ವಹಿಸುತ್ತೇನೆ. ಮಾದಕ ವಿಚಾರದ ಬಗ್ಗೆ ಮಾತನಾಡುವುದು ತಪ್ಪಲ್ಲ, ಆದರೆ ಅದನ್ನು ಯಾವ ರೀತಿ ಹಾಡಿನಲ್ಲಿ ಬರೆದಿದ್ದಾರೆ ಎನ್ನುವು ಮುಖ್ಯ. ಒಬ್ಬ ಮಹಿಳೆ ಅದನ್ನು ಬರೆದಿದ್ದರೆ ಈ ರೀತಿ ಇರುವುದಿಲ್ಲ. ಇಲ್ಲಿ ದೃಷ್ಟಿಕೋನ ಬಹಳ ಮುಖ್ಯ. ಸಿನಿಮಾ ಮತ್ತು ಸಂಗೀತ ಜನರ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಯಾವುದೇ ಬ್ಲಾಕ್‌ಬಸ್ಟರ್ ಹಾಡು ಅಥವಾ ಚಲನಚಿತ್ರವು ಇತಿಹಾಸದ ಭಾಗವಾಗುತ್ತದೆ. ನಾನು ಆ ರೀತಿಯ ಇತಿಹಾಸದ ಭಾಗವಾಗಲು ಬಯಸುವುದಿಲ್ಲ" ಎಂದು ಶ್ರೇಯಾ ವಿವರಿಸಿದ್ದಾರೆ.
2011ರಲ್ಲಿ ಬಂದಿದ್ದ 'ಅಗ್ನಿಪಥ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದ 'ಚಿಕ್ನಿ ಚಮೇಲಿ' ಐಟಂ ಸಾಂಗ್‌ಗೆ ಕತ್ರೀನಾ ಕೈಫ್ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದರು. ಅಜಯ್- ಅತುಲ್ ಸಂಗೀತ್ ಹಾಡಿಗೆ ಅಮಿತಾಬ್ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದರು. ಮರಾಠಿಯ 'ಕೊಂಬಡಿ ಪಲಲಿ' ಹಾಡಿನ ರೀಮೆಕ್ ಇದು. ಗಣೇಶ್ ಆಚಾರ್ಯ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದರು.
ಶ್ರೇಯಾ ಹೇಳಿಕೆಗೆ ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಆಕೆ ಇತ್ತೀಚೆಗೆ ಕೂಡ ಕೆಲ ಕಾರ್ಯಕ್ರಮಗಳಲ್ಲಿ 'ಚಿಕ್ನಿ ಚಮೇಲಿ' ಹಾಡು ಹಾಡಿದ್ದಾರೆ. ಇತ್ತೀಚೆಗೆ 'ಪುಷ್ಪ'-2 ಚಿತ್ರದಲ್ಲಿ ಕೂಡ ಇಂಥದ್ದೇ ಅಶ್ಲೀಲ ಅರ್ಥ ಬರುವಂತಹ ಹಾಡು ಹಾಡಿದ್ದಾರೆ. ಸುಮ್ಮನೆ ಈಗ ಈ ರೀತಿ ಮಾತನಾಡುತ್ತಾರೆ. ಎಲ್ಲಾ ದುಡ್ಡು, ಮಾಡೋದೆಲ್ಲಾ ಮಾಡಿ ಈಗ ಈ ರೀತಿ ಮಾತನಾಡುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
12 ವರ್ಷಗಳ ಹಿಂದೆ 'ಚಿಕ್ನಿ ಚಮೇಲಿ' ಸಾಂಗ್ ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. ಯಾವುದೇ ಆರ್ಕೇಸ್ಟ್ರಾ, ಶಾಲಾ, ಕಾಲೇಜು ವಾರ್ಷಿಕೋತ್ಸವ ಸಮಾರಂಭ, ಡ್ಯಾನ್ಸ್ ಸ್ಪರ್ಧೆಗಳಲ್ಲಿ ಈ ಹಾಡಿಗೆ ಡ್ಯಾನ್ಸ್ ಮಾಡಲೇಬೇಕು ಎನ್ನುವಷ್ಟು ಕ್ರೇಜ್ ಹುಟ್ಟು ಹಾಕಿತ್ತು. ಇವತ್ತಿಗೂ ಸಂಗೀತ ರಸಿಕರು ಈ ಹಾಡನ್ನು ಗುನುಗುತ್ತಾರೆ.


Click it and Unblock the Notifications











