ತಮ್ಮೆಲ್ಲ ಅಭಿಮಾನಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ ಶ್ರೇಯಾ ಘೋಷಾಲ್...!
ಸಾಮಾಜಿಕ ಜಾಲತಾಣದ ಬಳಕೆದಾರರಿಗೆ ಎಷ್ಟು ಉಪಯುಕ್ತ, ಜನ ಸ್ನೇಹಿಯೋ ಅಷ್ಟೇ ಪ್ರಮಾಣದಲ್ಲಿ ವಿಲನ್ ಕೂಡ ಹೌದು. ಇಲ್ಲಿ ತುಸು ಎಚ್ಚರ ತಪ್ಪಿದರೂ ಕೂಡ ಬಿಡಿಸಿಕೊಳ್ಳಲಾಗದ, ಸಾರ್ವಜನಿಕವಾಗಿ ಕಸಿವಿಸಿ ಅನುಭವಿಸಬೇಕಾದ ಸಂಕಷ್ಟಗಳೇ ಹೆಚ್ಚಾಗಿರುತ್ತದೆ.
ಜನಸಾಮಾನ್ಯರ ಪಾಡು ಒಂದು ರೀತಿಯಾದರೆ, ಸೆಲೆಬ್ರೆಟಿಗಳ ಸ್ಥಿತಿ ಇನ್ನು ಕಠೋರವಾಗಿರುತ್ತೆ. ಇದೀಗ ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಭಾರತದ ಖ್ಯಾತ ಗಾಯಕಿ ಮತ್ತು ಬಹುತೇಕ ಕನ್ನಡಿಗರ ನೆಚ್ಚಿನ ಸಿಂಗರ್‌ಗಳಲ್ಲಿ ಒಬ್ಬರಾದ ಶ್ರೇಯಾ ಘೋಷಾಲ್ ಅವರ { ಎಕ್ಸ್ } ಟ್ವಿಟರ್ ಖಾತೆ ಹ್ಯಾಕ್ ಆಗಿದೆ.

ಈ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಶ್ರೇಯಾ ಘೋಷಾಲ್ ನನ್ನೆಲ್ಲ ಸ್ನೇಹಿತರಿಗೆ ಮತ್ತು ಅಭಿಮಾನಿಗಳಿಗೆ ನಮಸ್ಕಾರ, ಫೆಬ್ರವರಿ 13ರಂದು ನನ್ನ ಟ್ವಿಟರ್/ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಪ್ರಯತ್ನ ಮಾಡಿದರೂ ಕೂಡ ನನ್ನ ಖಾತೆಯನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಎಕ್ಸ್ ತಂಡದಿಂದ ಕೂಡ ಯಾವುದೇ ಸಹಕಾರ ಸಿಗುತ್ತಿಲ್ಲ, ಆ ತಂಡ ಯಾವುದೇ ಸಹಾಯದ ಹಸ್ತವನ್ನು ಕೂಡ ಚಾಚುತ್ತಿಲ್ಲ ಎಂದು ಹೇಳಿದ್ದಾರೆ. ಅತ್ತ ಲಾಗಿನ್ ಕೂಡ ಆಗಲು ಸಾಧ್ಯವಾಗುತ್ತಿಲ್ಲ ಇತ್ತ ಹೇಗಾದರೂ ಮಾಡಿ ಆ ಖಾತೆಯನ್ನು ಡಿಲೀಟ್ ಮಾಡೋಣವೆಂದರೆ ಅದು ಕೂಡ ಸಾಧ್ಯವಾಗುತ್ತಿಲ್ಲ ಎಂದು ಅಳಲನ್ನು ಕೂಡ ತೋಡಿಕೊಂಡಿದ್ದಾರೆ ಶ್ರೇಯಾ ಘೋಷಾಲ್.
ಇನ್ನು ಇದೇ ವೇಳೆ ತಮ್ಮೆಲ್ಲ ಅಭಿಮಾನಿಗಳಿಗೆ ಎಚ್ಚರಿಕೆಯನ್ನು ಕೂಡ ನೀಡಿರುವ ಶ್ರೇಯಾ ಘೋಷಾಲ್ ತಮ್ಮ ಟ್ವಿಟರ್ ಟೈಮ್‌ಲೈನ್‌ನಲ್ಲಿ ಕಾಣಿಸುವ
ಯಾವುದೇ ರೀತಿಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಹೇಳಿದ್ಧಾರೆ. ಆ ಲಿಂಕ್‌ಗಳ ಸ್ಕ್ಯಾಮ್ ಆಗಿರಬಹುದು, ಕ್ಲಿಕ್ ಮಾಡುವುದರಿಂದ ನಿಮಗೆ ನಷ್ಟವೂ ಆಗಬಹುದು ಎಂದು ಹೇಳಿದ್ಧಾರೆ.
ಇನ್ನು, ಮುಂದೊಂದು ದಿನ ಒಂದು ವೇಳೆ ತಮ್ಮ ಸುಪರ್ದಿಗೆ ಖಾತೆಯನ್ನು ಮರಳಿ ಪಡೆಯುವಲ್ಲಿ ಸಫಲರಾದರೆ ನಾನೇ ಲೈವ್ ಬಂದು ನನ್ನ ಅಕೌಂಟ್ ಮರಳಿ ಪಡೆದಿರುವ ವಿಚಾರವನ್ನು ಹೇಳುತ್ತೇನೆ ಅಲ್ಲಿಯವರೆಗೆ ಯಾವ ಸುದ್ದಿಯನ್ನು ಕೂಡ ನಂಬಬೇಡಿ ಎಂದು ಶ್ರೇಯಾ ಘೋಷಾಲ್ ಹೇಳಿದ್ದಾರೆ. ಶ್ರೇಯಾ ಘೋಷಾಲ್ ಅವರ ಈ ಮನವಿ ಮತ್ತು ನೀಡಿದ ಎಚ್ಚರಿಕೆಯ ಸಂದೇಶಕ್ಕೆ ಅಭಿಮಾನಿಗಳು ಸದ್ಯ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಆದಷ್ಟು ಬೇಗ ನಿಮ್ಮ ಖಾತೆಯನ್ನು ನೀವು ಮರಳಿ ಪಡೆಯಿರಿ ಎನ್ನುತ್ತಿದ್ದಾರೆ. ನಿಮ್ಮ ಮಾತುಗಳನ್ನು ನಾವು ಚಾಚೂ ತಪ್ಪದೇ ಪಾಲಿಸುತ್ತೇವೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಶ್ರೇಯಾ ಘೋಷಾಲ್ ಅವರಿಗೆ ಟ್ವಿಟರ್ { ಎಕ್ಸ್ } ನಲ್ಲಿ 6,950,611 ಜನ ಫಾಲೋವರ್ಸ್ ಇದ್ದಾರೆ. ಯೋಗರಾಜ್ ಭಟ್ಟರು ಸೇರಿ ಕನ್ನಡ ಚಿತ್ರರಂಗದ ಅನೇಕ ತಾರೆಯರು ಶ್ರೇಯಾ ಘೋಷಾಲ್ ಅವರನ್ನು ಇಲ್ಲಿ ಹಿಂಬಾಲಿಸುತ್ತಿದ್ದಾರೆ. ಒಟ್ನಲ್ಲಿ ಸಿನಿಮಾ ನಟ-ನಟಿಯರ ಫೇಸ್ ಬುಕ್ ಪೇಜುಗಳನ್ನು ಕಬಳಿಸಲು ಕಳ್ಳಗಣ್ಣುಗಳು ಸದಾ ಜಾಗೃತವಾಗಿರುತ್ತವೆ. ಹೀಗೆ ಮಾಡುವುದರಿಂದ ಏನು ಸಿಗುತ್ತದೋ ಗೊತ್ತಿಲ್ಲ. ಈ ಹಿಂದೆ ಕೂಡಾ ಸಾಕಷ್ಟು ಹೀರೋ ಹೀರೋಯಿನ್ನುಗಳು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳನ್ನು ಕಳೆದುಕೊಂಡು ಅವಾಂತರ ಪಟ್ಟಿದ್ದಾರೆ. ಈಗ ಆ ಲಿಸ್ಟಿಗೆ ಶ್ರೇಯಾ ಘೋಷಾಲ್ ಸೇರಿದ್ದಾರಷ್ಟೇ..


Click it and Unblock the Notifications










