"ಆ ಭಯದಿಂದ ಗರ್ಭಿಣಿ ಎನ್ನುವ ಸುದ್ದಿಯನ್ನು ಮುಚ್ಚಿಟ್ಟಿದ್ದೆ": ಶ್ರಿಯಾ ಶರಣ್
ಬಹುಭಾಷಾ ನಟಿ ಶ್ರಿಯಾ ಶರಣ್ ಸೆಕೆಂಡ್ ಇನ್ನಿಂಗ್‌ನಲ್ಲೂ ಕಮಾಲ್ ಮಾಡ್ತಿದ್ದಾರೆ. ದೆಹಲಿ ಚೆಲುವೆ ನಟನೆಯ ಹಿಂದಿ 'ದೃಶ್ಯಂ'- 2 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬೆಳೆ ತೆಗೆದಿದೆ. ಸೋತು ಸುಣ್ಣವಾಗಿದ್ದ ಬಾಲಿವುಡ್‌ಗೆ ಗೆಲುವಿನ ಟಾನಿಕ್ ನೀಡಿದೆ.
ಒಂದ್ಕಾಲದಲ್ಲಿ ಟಾಲಿವುಡ್, ಕಾಲಿವುಡ್, ಬಾಲಿವುಡ್‌ನಲ್ಲಿ ಮಿಂಚು ಹರಿಸಿದ ಚೆಲುವೆ ಮದುವೆ ನಂತರ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. 2018ರಲ್ಲಿ ಆಂಡ್ರಿ ಎಂಬುವವರನ್ನು ಮದುವೆ ಆಗಿದ್ ಚೆಲುವೆ 2021ರಲ್ಲಿ ಮುದ್ದಾದ ಹಣ್ಣುಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗಳು ಹುಟ್ಟುವವರೆಗೂ ಗರ್ಭಿಣಿಯಾಗಿರುವ ವಿಚಾರವನ್ನು ಶ್ರಿಯಾ ಮುಚ್ಚಿಟ್ಟಿದ್ದರು. ಅದಕ್ಕೆ ಕಾರಣ ಏನು ಎನ್ನುವುದನ್ನು ಈಗ ರಿವೀಲ್ ಮಾಡಿದ್ದಾರೆ.
ಶ್ರಿಯಾ ಹಿಂದಿ 'ದೃಶ್ಯಂ- 2' ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಪ್ರೆಗ್ನೆನ್ಸಿ, ಮಗಳು ರಾಧ ಬಗ್ಗೆಯೂ ಒಂದಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಆ ಭಯಕ್ಕೆ ವಿಷಯ ಮುಚ್ಚಿಟ್ಟಿದ್ದೆ
'ನನ್ನ ಮಗಳು ರಾಧ' ಹೊಟ್ಟೆಯಲ್ಲಿ ಇರುವಾಗ ಒತ್ತಡ ಇಲ್ಲದೇ ದಿನಗಳನ್ನು ದೂಡಬೇಕು ಎಂದುಕೊಂಡಿದ್ದೆ. ಆ ಸಮಯದಲ್ಲಿ ಎಲ್ಲರೂ ದಪ್ಪ ಆಗುತ್ತಾರೆ. ಆದರೆ ನಟಿಯರ ವಿಚಾರದಲ್ಲಿ ಅದನ್ನು ಸಾಧಾರಣ ವಿಚಾರ ಎನ್ನುವಂತೆ ನೋಡುವುದಿಲ್ಲ. ನಾನು ಕೂಡ ದಪ್ಪ ಆಗುತ್ತಿದ್ದ ಕಾರಣಕ್ಕೆ ಆ ಕ್ಷಣಕ್ಕೆ ಅದನ್ನು ಹಂಚಿಕೊಳ್ಳಲು ಚಿಂತಿಸಬೇಕಾಯಿತು. ವಿಷಯ ಗೊತ್ತಾದರೆ ನನ್ನ ಬಾಡಿ ಶೇಪ್ ಬಗ್ಗೆ ಟ್ರೋಲ್ ಮಾಡುತ್ತಾರೆ.

ಒತ್ತಡ ಬೇಡ ಎಂದುಕೊಂಡಿದ್ದೆ
"ಅಭಿಮಾನಿಗಳು ಹಾಗೂ ಮಾಧ್ಯಮದ ದೃಷ್ಟಿ ಆ ಸಮಯದಲ್ಲಿ ನನ್ನ ಮಗುವಿನ ಮೇಲೆ ಇರುತ್ತದೆ. ಹಾಗಾಗಿ ಅದನ್ನೆಲ್ಲಾ ಕೇಳಿ ಒತ್ತಡಕ್ಕೆ ಸಿಲುಕುವುದು ಬೇಡ ಎಂದು ನಿರ್ಧರಿಸಿದ್ದೆ. ತಾಯ್ತನವನ್ನು ಸುಂದರವಾಗಿ ಅನುಭವಿಸಬೇಕು ಎಂದುಕೊಂಡಿದ್ದೆ. ಅದೇ ಕಾರಣಕ್ಕೆ ಆ ಸಮಯದಲ್ಲಿ ಪ್ರೆಗ್ನೆನ್ಸಿ ವಿಚಾರವನ್ನು ಸೀಕ್ರೆಟ್ ಆಗಿ ಇಟ್ಟಿದ್ದೆ" ಎಂದು ಶ್ರಿಯಾ ವಿವರಿಸಿದ್ದಾರೆ.
ಚಿರಂಜೀವಿ, ವಿಜಯ್, ಮಹೇಶ್‌ಬಾಬು, ರಜನಿಕಾಂತ್‌ರಂತಹ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ಶ್ರಿಯಾ ಶರಣ್ ನಟಿಸಿದ್ದಾರೆ. ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಸಿನಿರಸಿಕರ ಮನಗೆದ್ದಿದ್ದಾರೆ. ಠಾಗೂರ್, ಶಿವಾಜಿ, ಚೆನ್ನಕೇಶವ ರೆಡ್ಡಿ ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೌತ್‌ನಲ್ಲಿ ಸಕ್ಸಸ್ ಕಂಡ ನಟಿ ಮುಂದೆ ಬಾಲಿವುಡ್ ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದರು. ಇತ್ತೀಚೆಗೆ 'RRR', 'ತಡ್ಕಾ', 'ದೃಶ್ಯಂ-2' ಸಿನಿಮಾಗಳಲ್ಲಿ ನಟಿಸಿದ್ದಾರೆ. ಮ್ಯೂಸಿಕ್ ಸ್ಕೂಲ್ ಎನ್ನುವ ಮತ್ತೊಂದು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಕನ್ನಡ ಚಿತ್ರಗಳಲ್ಲಿ ಶ್ರಿಯಾ
ನಟಿ ಶ್ರಿಯಾ ಶರಣ್ ಕನ್ನಡ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಪುನೀತ್ ರಾಜ್‌ಕುಮಾರ್ ನಟನೆಯ 'ಅರಸು' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಇನ್ನು ಲವ್ಲಿಸ್ಟಾರ್ ಪ್ರೇಮ್ ಜೋಡಿಯಾಗಿ 'ಚಂದ್ರ' ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಈ ಚಿತ್ರ ತಮಿಳಿನಲ್ಲೂ ಏಕಕಾಲಕ್ಕೆ ನಿರ್ಮಾಣವಾಗಿ ತೆರೆಕಂಡಿತ್ತು. ಸದ್ಯ ಉಪೇಂದ್ರ ಜೋಡಿಯಾಗಿ 'ಕಬ್ಜ' ಚಿತ್ರದಲ್ಲಿ ಮಿಂಚಿದ್ದಾರೆ.


Click it and Unblock the Notifications










