ಸೈಫ್ ಅಲಿ ಖಾನ್ ಮಗನ ಲವ್ವು ಡವ್ವು,ನನ್ನ ಮಗಳ ಭವಿಷ್ಯದ ಬಗ್ಗೆ ನನಗೆ ಆತಂಕವಾಗುತ್ತಿದೆ ಎಂದ ನಾಯಕಿಯ ತಾಯಿ..!
ಯಾವುದಾದರೂ ಕಾರ್ಯಕ್ರಮದಲ್ಲಿ ಜೊತೆ ಜೊತೆಯಾಗಿ ಕುಳಿತು ಸೆಲೆಬ್ರೆಟಿಗಳು ಕಿಲ ಕಿಲ ಎಂದು ನಕ್ಕು, ಆ ನಂತರ ಒಂದು ಮೂರು ನಾಲ್ಕು ಸಲ ಜೊತೆ ಜೊತೆಯಾಗಿ ಕಾಣಿಸಿಕೊಂಡರೆ ಮುಗೀತು. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಕಥೆಯನ್ನು ಕೆಲವರು ಹೆಣೆದು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಇದಕ್ಕೆ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಮತ್ತು ಶ್ವೇತಾ ತಿವಾರಿಯ ಮಗಳು ಪಲಕ್ ತಿವಾರಿ ಅತ್ಯುತ್ತಮ ಉದಾಹರಣೆ.
ಹೌದು, ಪಲಕ್ ತಿವಾರಿ.. ಒಂದ್ಕಾಲದಲ್ಲಿ 'ಕಸೌತಿ ಜಿಂದಗಿ ಕೇ' ಎಂದ ಧಾರಾವಾಹಿ ಮೂಲಕ ಜನ ಮನ ಗೆದ್ದ ಶ್ವೇತಾ ತಿವಾರಿಯ ಮುದ್ದಿನ ಮಗಳು. ಅಮ್ಮನ ಹೆಜ್ಜೆಯ ಜಾಡನ್ನು ಹಿಡಿದು ಚಿತ್ರರಂಗದಲ್ಲಿ ಈಗಷ್ಟೇ ಅಂಬೆಗಾಲು ಇಡ್ತಿರುವ ಪಲಕ್, ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಮುಂಬೈನೆಲ್ಲೆಡೆ ಕೇಳಿ ಬರುತ್ತಿದೆ.

ಸಹಜವಾಗಿ ಈ ಸುದ್ದಿ ಅನೇಕರ ಹುಬ್ಬೇರೆಸಿದೆ. ಯಾಕೆಂದರೆ.. ಶ್ವೇತಾ ಅವರ ಮಗಳು ಪಲಕ್ ಆಗಲಿ ಅಥವಾ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಆಗಲಿ, ಚಿತ್ರರಂಗದಲ್ಲಿ ಇನ್ನೂ ಏನೂ ಸಾಧಿಸಿ ಭೇದಿಸಿಲ್ಲ. ನಿಜಾ. ಪ್ರೇಮ ಕುರುಡು. ಆದರೂ.. ಶ್ವೇತಾ ತಿವಾರಿ ಮತ್ತು ಸೈಫ್ ಅಲಿ ಖಾನ್ ಆಸ್ತಿಯನ್ನು ತಕ್ಕಡಿಯಲ್ಲಿ ತೂಗಿ ಹಾಕಿದರೆ, ಸೈಫ್ ಅಲಿ ಖಾನ್ ಸಂಪತ್ತು ಹೆಚ್ಚು ತೂಗುತ್ತೆ. ಹೀಗಾಗಿಯೇ ಅನೇಕರು ಈಗ ಪಲಕ್ ತಿವಾರಿ ಮತ್ತು ಇಬ್ರಾಹಿಂ ಅಲಿ ಖಾನ್ ಅವರ ದುಂಬಾಲು ಬಿದ್ದಿದ್ದಾರೆ. ಇಬ್ಬರ ಹಾವ-ಭಾವ-ನಡೆಯ ಮೇಲೆ ಕಣ್ಣಿಟ್ಟಿದ್ಧಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಕುರಿತು ಚರ್ಚೆಯನ್ನು ಮಾಡುತ್ತಿದ್ದಾರೆ.
ನಡೆಯುತ್ತಿರುವ ಈ ಚರ್ಚೆಯಿಂದ ಸಹಜವಾಗಿ ಶ್ವೇತಾ ತಿವಾರಿ ಡಿಸ್ಟರ್ಬ್ ಆಗಿದ್ಧಾರೆ. ಯಾಕೆಂದರೆ.. ಮಗಳನ್ನೂ ದೊಡ್ಡ ನಟಿಯನ್ನಾಗಿ ನೋಡುವ ಹೆಬ್ಬಯಕೆ ಇವರದ್ದು. ಪಲಕ್ ಕೂಡ ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂಬ ಆಸೆ ಇದೆ. ಆ ದಿಸೆಯಲ್ಲಿ ಅವರು ಪ್ರಯತ್ನವನ್ನು ಮಾಡುತ್ತಿದ್ದಾರೆ ಕೂಡ. ಇಂತಹ ಸಮಯದಲ್ಲಿ ತಮ್ಮ ಮಗಳ ಕುರಿತು ಲವ್ವು-ಡವ್ವು ಸುದ್ದಿಗಳು ಹಬ್ಬಿವೆ. ಈ ಕಾರಣಕ್ಕೆ ಮೌನ ಮುರಿದಿರುವ ಶ್ವೇತಾ ತಿವಾರಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಮಗಳ ಮಾನಸಿಕ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಹೌದು, ಗಲಾಟಾ ಪ್ಲಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶ್ವೇತಾ ತಿವಾರಿ, ನನ್ನ ಮಗಳು ಮಾನಸಿಕವಾಗಿ ಸದೃಢಳಾಗಿದ್ದಾಳೆ, ಆದರೂ ಕೂಡ ಈ ವದಂತಿಗಳನ್ನು ಆಕೆ ಎಲ್ಲಿಯವರೆಗೆ, ಎಷ್ಟು ದಿನ ಸಹಿಸಿಕೊಳ್ಳಬಹುದು ಎನ್ನುವುದು ನನಗೆ ಗೊತ್ತಿಲ್ಲ ಅಂದಿದ್ಧಾರೆ. ಕೆಲವೊಮ್ಮೆ ಈ ಸುದ್ದಿಗಳನ್ನು ಕೇಳಿ ಅವಳೇ ಆಶ್ಚರ್ಯಕ್ಕೊಳಗಾಗುತ್ತಾಳೆ,ಇನ್ನೂ ಕೆಲವೊಮ್ಮೆ ತಮಾಷೆಯನ್ನು ಮಾಡುತ್ತಾಳೆ ಎಂದಿರುವ ಶ್ವೇತಾ ತಿವಾರಿ, ನಾಳೆಯ ದಿನ ಯಾರದ್ದೋ ಕಾಮೆಂಟ್ ಅಥವಾ ಇನ್ಯಾರದ್ದೋ ವರದಿ ಆಕೆಯ ಆತ್ಮಸ್ಥೈರ್ಯವನ್ನು ಕುಗ್ಗಿಸಬಹುದು ಆ ಆತಂಕ ನನ್ನನ್ನೂ ಈಗ ಕಾಡುತ್ತಿದೆ ಎಂದಿದ್ದಾರೆ.
ಆಕೆ ಇನ್ನೂ ಚಿಕ್ಕ ಹುಡುಗಿ ಆದರೂ ಕೂಡ ದಿನ ಬೆಳಗಾದರೆ ಆಕೆಯ ಹೆಸರನ್ನು ಒಂದಿಲ್ಲೊಂದು ಹುಡುಗನ ಜೊತೆ ಥಳುಕು ಹಾಕುತ್ತಿದ್ಧಾರೆ. ಇದೆಲ್ಲವನ್ನೂ ನನ್ನ ಮಗಳು ಹೇಗೆ ಸಹಿಸಿಕೊಳ್ಳುತ್ತಾಳೆ, ಹೇಗೆ ನಿಭಾಯಿಸುತ್ತಾಳೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ ಎಂದ ಶ್ವೇತಾ, ಮುಂದೊಂದು ದಿನ ಇವೆಲ್ಲವೂ ಆಕೆಯ ಮಾನಸಿಕ ನೆಮ್ಮದಿಗೆ ಕೊಳ್ಳಿ ಇಡಬಹುದು ಎಂದಿದ್ದಾರೆ.


Click it and Unblock the Notifications











